ಕನಕಗಿರಿ: ಭಕ್ತಿಭಾವದ ಸಂಗಮವಾಗಿರುವ ಕನಕಾಚಲಪತಿ ರಥೋತ್ಸವ ವಿವಿಧ ಆಚರಣೆಗೆ ಸಾಕ್ಷಿಯಾಗಿದೆ. ಏಪ್ರಿಲ್ 30ರ ತನಕ ನಡೆಯುವ ಕನಕಾಚಲಪತಿ ಜಾತ್ರೆಗೆ ನಾಯಕ, ಗೊಲ್ಲರು ಸೇರಿದಂತೆ ಹಲವಾರು ಸಮಾಜ ಬಾಂಧವರು ಕಟ್ಟುನಿಟ್ಟಿನ ಸಂಪ್ರದಾಯಗಳನ್ನು ಆಚರಣೆ ಮಾಡುತ್ತಾರೆ. ಗೊಲ್ಲ ಸಮುದಾಯಕ್ಕೂ (ಯಾದವರು) ಕನಕರಾಯ ದೇವರಿಗೂ ವಿಶಿಷ್ಟ ಸಂಬಂಧವಿದೆ. ಪಶು ಸಂಗೋಪನೆ ಹಾಗೂ ಕೃಷಿ ಕುಟುಂಬದವರಾಗಿರುವ ಗೊಲ್ಲರು ಪಟ್ಟಣ ಸೇರಿದಂತೆ ಸಮೀಪದ ಗುಡದೂರು, ಬಂಕಾಪುರ, ಬಸರಿಹಾಳ, ಕಾಟಾಪುರ, ಉಮಳಿ ಕಾಟಾಪುರ ಇತರೆ ಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ.
ಗೊಲ್ಲರು ಕಾಯಕ ನಿಷ್ಠರಾಗಿದ್ದು ಜಾತ್ರೆಯ ಸಮಯದಲ್ಲಿ ಪಟ್ಟಣದಲ್ಲಿರುವ ತಮ್ಮ ಮನೆಗಳಲ್ಲಿ ಉಳಿದುಕೊಳ್ಳುತ್ತಾರೆ. ಮನೆಯ ಮುಂದೆಯೇ ತಲೆಮುಡಿ ನೀಡಿ ಆ ನಂತರ ತಲೆಗೆ ಕೇಸರಿ ಬಣ್ಣದ ರುಮಾಲು ಸುತ್ತಿಕೊಂಡು ಬಿಳಿ ಧೋತಿ ಹಾಗೂ ಅಂಗಿ ತರಹ ಇರುವ ಹಳದಿ ಬಣ್ಣದ ಶಲ್ಲೆ ಹಾಕಿಕೊಂಡವರಿಗೆ ಮಹಿಮರು, ಮಡಿವಂತಿಕೆಯುಳ್ಳವರು ಹಾಗೂ ಅರಿಕೆ ತೀರಿಸುವವರು ಎಂದು ಕರೆಲಾಗುತ್ತಿದೆ.
’ಜಾತ್ರಾ ಮಹೋತ್ಸವದ ದಿನಗಳಲ್ಲಿ ಮದ್ಯ, ತಂಬಾಕು, ಮಾಂಸದೂಟದಿಂದ ದೂರವಿರುತ್ತಾರೆ. ಐದು ದಿನಗಳ ಕಾಲ ಸ್ನಾನ ಮಾಡುವುದಿಲ್ಲ. ತಮ್ಮ ಆಹಾರ ತಾವೇ ತಯಾರಿಸಿಕೊಳ್ಳುತ್ತಾರೆ. ರಥೋತ್ಸವದ ದಿನ ರಥ ತನ್ನ ಪಾಜಕ್ಕೆ (ಮೂಲಸ್ಥಾನಕ್ಕೆ) ಬಂದು ನಿಂತರೆ ಮಾತ್ರ ಊಟ ಮಾಡುತ್ತಾರೆ. ಇಲ್ಲದಿದ್ದರೆ ನಿರಾಹಾರಿಗಳು. ಈ ಹಿಂದೆ ತೇರಿನ ಇರಿಸು ಮುರಿದಾಗ, ಗಾಲಿ ಮುರಿದಾಗ ಹೀಗೆ ವಿವಿಧ ಕಾರಣಗಳಿಂದ ತೇರು ತನ್ನ ಪಾಜಕ್ಕೆ (ಮೂಲಸ್ಥಾನಕ್ಕೆ) ಬರಲು 4-5 ದಿನಗಳ ಕಾಲ ಸಮಯ ತೆಗೆದುಕೊಂಡಿದೆ. ಆ ಸಮಯದಲ್ಲಿ ತಾವು ಉಪವಾಸ ಆಚರಣೆ ಮಾಡಿದ್ದೇವೆ’ ಎಂದು 80ರ ಪ್ರಾಯದ ಗುಡುದೂರು ಗ್ರಾಮದ ಸಣ್ಣೆಪ್ಪ ಮಂದ್ಲರ್ ತಿಳಿಸುತ್ತಾರೆ.
’ನಾವು ಕನಕಪ್ಪ (ಕನಕರಾಯ ದೇವರು) ಸೇವಕರು, ಹನುಮಂತೋತ್ಸವದ ದಿನ ಮಹಿಮರಾಗುತ್ತೇವೆ ಆ ದಿನದಿಂದ ದೇವಸ್ಥಾನದಲ್ಲಿ ಬಿಡಾರ ಹೂಡುತ್ತೇವೆ, ಮಲಗಲು ಹಾಸಿಗೆ ಸಹ ಬಳಸುವುದಿಲ್ಲ, ಕಂಬಳಿ ಮಾತ್ರ ಇರುತ್ತದೆ. ರಥೋತ್ಸವ ಮುಗಿಯುವ ತನಕ ದೇಗುಲದ ಜಾಗ ಬಿಟ್ಟು ಕದಲುವುದಿಲ್ಲ’ ಎಂದು ಅವರು ತಿಳಿಸಿದರು.
’ಹನುಮಂತೋತ್ಸವ, ಗರುಡೋತ್ಸವ, ಶೇಷೋತ್ಸವ, ನಾಗರ ಉಚ್ಛಾಯ ಬಲ ಭಾಗದ ನೊಗ ಹಾಗೂ ತೇರಿನ ಬಲ ಭಾಗದ ಮೀಣಿ (ಹಗ್ಗ) ಈ ಗೊಲ್ಲರಿಗೆ ಮೀಸಲಿದ್ದು ಮತ್ತೊಂದು ಊರವರು ಎಳೆಯುತ್ತಾರೆ. ಗೊಲ್ಲರಲ್ಲಿಯೂ ಪೂಜಾರಿ ಮನೆತನಗಳಿವೆ, ಗೊಲ್ಲರವಾಡಿಯಲ್ಲಿರುವ ಮನೆಯಿಂದ ರಾಜಬೀದಿ ಮೂಲಕ ಕನಕಾಚಲಪತಿ ದೇವಸ್ಥಾನದ ವರೆಗೆ ತಲೆಮೇಲೆ ಗಂಡಾರುತಿ ಹೊತ್ತುಕೊಂಡು ಕನಕರಾಯನಿಗೆ ಮಂಗಳಾರುತಿ ಮಾಡಿಸಲಾಗುತ್ತಿದೆ’ ಎಂದು ಲಕ್ಷ್ಮಣ, ನರಹರಿ, ನಿಂಗಪ್ಪ ಮಂದಲಾರ, ನಾಗಪ್ಪ ಗೌಡರು ತಿಳಿಸಿದರು.
’ಅನೇಕ ವರ್ಷಗಳಿಂದಲೂ ಹಿರಿಯರು ಪಾಲಿಸಿಕೊಂಡು ಬಂದ ಸಂಪ್ರದಾಯವನ್ನು ಯುವ ಸಮುದಾಯ ಸಹ ಅನುಸರಿಸಿಕೊಂಡು ಬರುತ್ತಿದೆ. ಪಶು ಸಂಗೋಪನೆ ಹಾಗೂ ಕೃಷಿಯನ್ನೆ ಜೀವನ ಸಾಗಿಸುತ್ತೇವೆ. ಪ್ರತಿಯೊಂದು ಕುಟುಂಬದಲ್ಲಿ 100ರಿಂದ 200 ಕುರಿ, ದನಕರುಗಳಿವೆ ಮಳೆ, ಚಳಿಗಾಲವೆ ಇರಲಿ ಕಸುಬು ಬಿಡುವುದಿಲ್ಲ ಕನಕರಾಯನೆ ನಮ್ಮ ರಕ್ಷಕ ಹೀಗಾಗಿ ಜಾತ್ರೆಗೆ ಎಲ್ಲಿದ್ದರೂ ಓಡಿಬರುತ್ತೇವೆ’ ಎಂದು ಮರಿಯಪ್ಪ ಗೌಡರ, ತಿಳಿಸಿದರು.
ಗೊಲ್ಲರು ರಥೋತ್ಸವದ ಕೆಲಸದಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೆ ದುಡಿಯುತ್ತಾರೆ. ಎಂಥ ಕಠಿಣ ಕೆಲಸ ನೀಡಿದರೂ ನಿರಾಕರಿಸುವುದಿಲ್ಲ. ಅವರ ಭಕ್ತಿ ಕಾಯಕ ನಿಷ್ಠೆ ಮೆಚ್ಚುವಂತದ್ದು.ಕನಕರೆಡ್ಡಿ ಕೆರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.