ADVERTISEMENT

ಹನುಮ ಜಯಂತಿ: ಅಂಜನಾದ್ರಿಗೆ ಭಕ್ತರ ಮಹಾಪೂರ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 15:54 IST
Last Updated 12 ಏಪ್ರಿಲ್ 2025, 15:54 IST
ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯಲ್ಲಿ ಹನುಮ ಜಯಂತಿ ಅಂಗವಾಗಿ ಶನಿವಾರ ಸೇರಿದ್ದ ಭಕ್ತರು
ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯಲ್ಲಿ ಹನುಮ ಜಯಂತಿ ಅಂಗವಾಗಿ ಶನಿವಾರ ಸೇರಿದ್ದ ಭಕ್ತರು   

ಗಂಗಾವತಿ (ಕೊಪ್ಪಳ ಜಿಲ್ಲೆ): ಹನುಮ ಜನಿಸಿದ ನಾಡು ಎಂದೇ ಹೆಸರಾದ ತಾಲ್ಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಶನಿವಾರ ಹನುಮ ಜಯಂತಿ ಅಂಗವಾಗಿ ಭಕ್ತರ ಮಹಾಪೂರವೇ ಹರಿದುಬಂದಿತ್ತು.

ಈ ಬಾರಿಯ ಹನುಮ ಜಯಂತಿ ಸರ್ಕಾರಿ ರಜಾ ದಿನವಾದ ಎರಡನೇ ಶನಿವಾರ ಬಂದಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನಸಂದಣಿಯಿತ್ತು. ಭಕ್ತರು ಅಂಜನಾದ್ರಿಯ 575 ಮೆಟ್ಟಿಲು ಏರಿ ದರ್ಶನ ಪಡೆದರು.

ಕೇಸರಿ ಬಣ್ಣದ ಲುಂಗಿ ಹಾಗೂ ಪಂಚೆ ಧರಿಸಿದ್ದ ಭಕ್ತರು ಜಯಂತಿ ಆರಂಭಕ್ಕೂ 11 ದಿನ ಮೊದಲು ಮಾಲೆ ಧಾರಣೆ ಮಾಡಿ ಕಠಿಣ ವ್ರತ ಕೈಗೊಂಡು ಹನುಮನ ಆರಾಧನೆ ಮಾಡಿರುತ್ತಾರೆ. ಜಯಂತಿ ದಿನ ಇರುಮುಡಿ ಹೊತ್ತು ಬೆಟ್ಟಕ್ಕೆ ಬಂದು ಪೂಜೆ ಸಲ್ಲಿಸುವ ಮೂಲಕ ಮಾಲೆ ವಿಸರ್ಜನೆ ಮಾಡಿದರು.

ADVERTISEMENT

ಅಂಜನಾದ್ರಿಯಲ್ಲಿ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ವಿಶೇಷ ಹೂವಿನ ಅಲಂಕಾರ, ಮಹಾ ಮಂಗಳಾರತಿ, ಹನುಮಾನ ಚಾಲಿಸ್ ಪಠಣ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಜನಸಂದಣಿ ಹೆಚ್ಚಿದ್ದರಿಂದ ಮೆಟ್ಟಿಲು ಏರುವ ಮಾರ್ಗದಲ್ಲಿ ನೂಕುನುಗ್ಗಲು ಉಂಟಾಯಿತು. ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ಕೂಡ ಸಾರ್ವಜನಿಕರ ಜೊತೆಗೆ ಮೆಟ್ಟಿಲು ಏರಿ ದರ್ಶನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.