ಗಂಗಾವತಿ: ತಾಲ್ಲೂಕಿನ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಹಾಗೂ ಮಂಗಳವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಧಾರಾಕಾರವಾಗಿ ಮತ್ತು ಜಿಟಿಜಿಟಿಯಾಗಿ ಮಳೆ ಸುರಿದಿದ್ದು, ವಾಹನ ಸವಾರರು, ಪಾದಚಾರಿಗಳು ಸಂಚಾರಕ್ಕೆ ಪರದಾಡಿದರು.
ಬೆಳಿಗ್ಗೆಯಿಂದಲೇ ತಾಲ್ಲೂಕಿನಲ್ಲಿ ಮೋಡಕವಿದ ವಾತವರಣವಿತ್ತು. ಬೆಳಿಗ್ಗೆ 11 ಗಂಟೆ ಆಗುತ್ತಿದ್ದಂತೆ, ಮಳೆ ಆರಂಭವಾಗಿ ಮಧ್ಯಾಹ್ನ 12 ಗಂಟೆಯವರೆಗೆ ಧಾರಕಾರವಾಗಿ ಸುರಿಯಿತು. ನಂತರ ಮಧ್ಯಾಹ್ನ 2ರಿಂದ ಆರಂಭವಾದ ಮಳೆ ಸಂಜೆಯವರೆಗೆ ಧಾರಕಾರವಾಗಿ ಮಳೆ ಸುರಿದಿದೆ. ಇದರಿಂದ ಗಂಗಾವತಿ ನಗರ ಭಾಗದಲ್ಲಿನ ಫಾಸ್ಟ್ ಫುಡ್, ತರಕಾರಿ, ಹಣ್ಣು, ಟಿಫಿನ್ ಬಂಡಿ ವ್ಯಾಪಾರಸ್ಥರು ಪರದಾಡಬೇಕಾಯಿತು. ನಿರಂತರ ಮಳೆಯಿಂದಾಗಿ ಕೆಲ ಬಂಡಿ ವ್ಯಾಪಾರಸ್ಥರು, ಮಳಿಗೆಗಳ ವ್ಯಾಪಾರಸ್ಥರು ಅಂಗಡಿಗಳು ಬಂದ್ ಮಾಡಿಕೊಂಡರು.
ಗಂಗಾವತಿ ನಗರದ ವಿವಿಧ ವಾರ್ಡುಗಳಲ್ಲಿ ಚರಂಡಿಗಳಲ್ಲಿನ ಹೂಳೆತ್ತದ ಕಾರಣ ಮಳೆ ನೀರು ಸರಗವಾಗಿ ಹರಿಯದೇ, ಕೊಳಚೆ ನೀರು ರಸ್ತೆಗಳ ಮೇಲೆ ಹರಿಯಿತು. ನಗರ ಸೇರಿ ಗ್ರಾಮೀಣ ಭಾಗದ ರಸ್ತೆಬದಿಗಳಲ್ಲಿ, ಖಾಲಿ ನಿವೇಶನಗಳಲ್ಲಿ ಮಳೆ ನೀರು ಸಂಗ್ರಹಗೊಂಡಿತು. ಮಳೆಯಿಂದ ಗ್ರಾಮೀಣ ಸೇರಿ ನಗರ ಭಾಗದ ಹದಗೆಟ್ಟ ರಸ್ತೆಗಳಲ್ಲಿನ ತಗ್ಗು-ಗುಂಡಿ, ಪ್ರಮುಖ ವೃತ್ತಗಳಲ್ಲಿ ಮಳೆ ನೀರು ಸಂಗ್ರಹವಾಗಿ ಸಂಚಾರಕ್ಕೆ ಅಡ್ಡಿ ಉಂಟು ಮಾಡಿತು. ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತ್ರಿ ಕೆಲಸಕ್ಕೆ ಹೋದ ಕೂಲಿಕಾರರು ಮಳೆಗೆ ಒದ್ದೆಯಾಗಿ ಮನೆಗಳಿಗೆ ಮರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.