ADVERTISEMENT

ಗಂಗಾವತಿ: ಹೊರವಲಯ ಗ್ರಾಮಗಳಿಗೆ ಮಾತ್ರ ಹೋಂಸ್ಟೇ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 7:09 IST
Last Updated 17 ಆಗಸ್ಟ್ 2025, 7:09 IST
ಗಂಗಾವತಿ ತಾಲ್ಲೂಕಿನ ಸಾಣಾಪುರ ಗ್ರಾಮದ ಗ್ರಾ.ಪಂ ಅಧ್ಯಕ್ಷರ ಕೊಠಡಿಯಲ್ಲಿ ಶನಿವಾರ ಶಾಸಕ ಜಿ.ಜನಾರ್ದನರೆಡ್ಡಿ ಸಭೆ ನಡೆಸಿದರು
ಗಂಗಾವತಿ ತಾಲ್ಲೂಕಿನ ಸಾಣಾಪುರ ಗ್ರಾಮದ ಗ್ರಾ.ಪಂ ಅಧ್ಯಕ್ಷರ ಕೊಠಡಿಯಲ್ಲಿ ಶನಿವಾರ ಶಾಸಕ ಜಿ.ಜನಾರ್ದನರೆಡ್ಡಿ ಸಭೆ ನಡೆಸಿದರು   

ಗಂಗಾವತಿ: ‘ಹಂಪಿ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಗೆ ಬರುವ ಹೊರವಲಯ ಪ್ರದೇಶದ (ಪೆರಿಫೆರಲ್‌ ಝೋನ್‌) ಗ್ರಾಮಗಳಾದ ತಿರುಮಲಾಪುರ, ಮಲ್ಲಾಪುರ, ಲಕ್ಷ್ಮೀಪುರ, ಸಿಂಗನಕುಂಡಿಗಳಲ್ಲಿ ಪ್ರವಾಸೋದ್ಯಮ ಇಲಾಖೆ ಹೋಂ ಸ್ಟೇಗಳಿಗೆ ಅನುಮತಿ ನೀಡಿದರೆ, ಹಂಪಿ ಅಭಿವೃದ್ಧಿ ಪ್ರಾಧಿಕಾರ ಎನ್‌ಒಸಿ ನೀಡಲು ಒಪ್ಪಿದೆ’ ಎಂದು ಶಾಸಕ ಜಿ.ಜನಾರ್ದನರೆಡ್ಡಿ ಹೇಳಿದರು.

ತಾಲ್ಲೂಕಿನ ಸಾಣಾಪುರ ಗ್ರಾಮದ ಗ್ರಾ.ಪಂ ಅಧ್ಯಕ್ಷರ ಕೊಠಡಿಯಲ್ಲಿ ಶನಿವಾರ ಹಂಪಿ ಅಭಿವೃದ್ಧಿ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆ, ಕಂದಾಯ ಸೇರಿ ಗ್ರಾ.ಪಂ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಹವಮಾದಿಂದ (ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ) ಗ್ರಾಮಗಳಲ್ಲಿ ಆಗುತ್ತಿರುವ ಸಮಸ್ಯೆಗಳ ಕುರಿತ ಸಭೆಯಲ್ಲಿ ಮಾತನಾಡಿದರು.

‘ಹಂಪಿ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಗೆ ಬರುವ ಹೊರವಲಯ ಪ್ರದೇಶದ ಗ್ರಾಮಗಳಲ್ಲಿ ಅಲ್ಲಿನ ಜನರು ಪ್ರವಾಸೋದ್ಯಮದ ಅಭಿವೃದ್ಧಿ ಭಾಗವಾಗಿ ತಮ್ಮ ಸ್ವಂತ ಜಮೀನುಗಳಲ್ಲಿ ಹೋಂಸ್ಟೇ ನಿರ್ಮಿಸಿಕೊಳ್ಳಲು ಪ್ರವಾಸೋದ್ಯಮ ಇಲಾಖೆಗೆ ಅರ್ಜಿ ಸಲ್ಲಿಸಬಹುದು. ಅವರು ದಾಖಲೆಗಳನ್ನು ಪರಿಶೀಲಿಸಿ, ನಂತರ ಹಂಪಿ ಅಭಿವೃದ್ಧಿ ಪ್ರಾಧಿಕಾರಕ್ಕೆ ತಿಳಿಸುತ್ತಾರೆ. ಎಲ್ಲ ದಾಖಲೆಗಳು ಸರಿಯಿದ್ದರೆ ಎನ್‌ಒಸಿ ನೀಡುತ್ತಾರೆ’ ಎಂದರು.

ADVERTISEMENT

‘ಹಾಗೇ ಹೆಚ್ಚಿಗೆ ಜಮೀನು ಇದ್ದರೂ 50:50 ಆಧಾರಿತವಾಗಿ ಹಂಪಿ ಅಭಿವೃದ್ಧಿ ಪ್ರಾಧಿಕಾರಕ್ಕೆ 50ರಷ್ಟು ಜಮೀನು ನೀಡಿದರೆ, ಅವರು ಸರ್ಕಾರ ಮತ್ತು ಪ್ರಾಧಿಕಾರದ ನೀತಿ, ನಿಯಮಗಳ ಅನುಸಾರ ಹೋಂ ಸ್ಟೇಗಳು ನಿರ್ಮಿಸಿ, ಸರ್ಕಾರದ ಮೀಸಲಾತಿಯನ್ವಯ ಇತರೆ ಸಮುದಾಯದ ಜನಾಂಗಕ್ಕೆ ಹೋಂಸ್ಟೇ ನಡೆಸಲು ನೀಡುತ್ತಾರೆ. ಉಳಿದ 50ರಷ್ಟು ಭೂಮಿಯಲ್ಲಿ ಭೂ ಮಾಲಕರು ಹೋಂಸ್ಟೇ ನಿರ್ಮಿಸಿಕೊಂಡು ಉಪಜೀವನ ನಡೆಸಬಹುದು’ ಎಂದರು.

‘ಸಾಣಾಪುರ, ಹನುಮನಹಳ್ಳಿ ಗ್ರಾಮಗಳಲ್ಲಿ ಸಾಕಷ್ಟು ರೆಸಾರ್ಟ್ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿನ ರೆಸಾರ್ಟ್ ಹೊರತುಪಡಿಸಿ, ಕಂದಾಯ, ಪರಂಪೋಕು ಸೇರಿ ಇತರೆ ಜಮೀನುಗಳಲ್ಲಿ ನಿರ್ಮಾಣವಾದ ರೆಸಾರ್ಟ್ ಮತ್ತ ಅವುಗಳ ಸರ್ವೆ ನಂಬರ್ ಮಾಹಿತಿಯನ್ನು ಗ್ರಾ.ಪಂ ಪಿಡಿಒ, ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕರು ಜಿಲ್ಲಾಧಿಕಾರಿಗಳ ಬಳಿ ತೆಗೆದುಕೊಂಡು ಹೋಗಿ, ಈ ಬಗ್ಗೆ ಸಭೆ ನಡೆಸಿ, ಸಾಧ್ಯವಾದಷ್ಟು ಒಳಿತಾಗುವ ಕೆಲಸ ಮಾಡಲಾಗುತ್ತದೆ’ ಎಂದು ತಿಳಿಸಿದರು.

ಹಂಪಿ ಪ್ರಾಧಿಕಾರದ ಆಯುಕ್ತ ರಮೇಶ ವಠ್ಗಲ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ, ಗ್ರಾಮೀಣ ಠಾಣೆ ಪಿಐ ರಂಗಪ್ಪ, ಅರಣ್ಯ ಇಲಾಖೆ ಅಧಿಕಾರಿ ಗುಂಡಪ್ಪ, ಗ್ರಾ.ಪಂ ಅಧ್ಯಕ್ಷ ಅಶೋಕ, ಪಿಡಿಒ ವತ್ಸಲಾ, ಸದಸ್ಯ ನಾಗೇಶ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಚಂದ್ರಶೇಖರ ಹೀರೂರು, ಗ್ರಾಮೀಣ ಮಂಡಲ ಅಧ್ಯಕ್ಷ ಡಿ.ಕೆ ಆಗೋಲಿ, ಮಂಜುನಾಥ ಕಲಾಲ, ಮನೋಹರಗೌಡ ಹೇರೂರು ಸೇರಿ ಸಿಬ್ಬಂದಿ, ಕಾರ್ಯಕರ್ತರು, ಸಾಣಾಪುರ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು

ಶೆಡ್‌ಗಾಗಿ ಅರ್ಜಿ ಸಲ್ಲಿಸಿ’

‘ವಿರೂಪಾಪುರಗಡ್ಡೆ ಗ್ರಾಮದಲ್ಲಿನ 24 ರೈತರು ತಮ್ಮ ಕೃಷಿ ಚಟುವಟಿಕೆ ಪರಿಕರಗಳನ್ನು ಇರಿಸಲು ಅಲ್ಲಿನ ತಮ್ಮ ಸ್ಥಳಗಳಲ್ಲಿ ಹಂಪಿ ಪ್ರಾಧಿಕಾರದ ನಿಯಮಗಳಂತೆ ಸಿಮೆಂಟ್ ಬಳಸದೇ ಸಣ್ಣ ಶೆಡ್‌ಗಳನ್ನು ನಿರ್ಮಿಸಿಕೊಳ್ಳಬಹುದು. ಈ ಕುರಿತು ಅಗತ್ಯ ದಾಖಲೆಗಳು ಪ್ರಾಧಿಕಾರದ ಅಧಿಕಾರಿಗಳಿಗೆ ನೀಡಿ ಶೆಡ್‌ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಬೇಕು’ ಎಂದು ರೈತರಿಗೆ ತಿಳಿಸಿದರು. ಇನ್ನು ವಿರೂಪಾಪುರಗಡ್ಡೆ ತೆರವು ಮಾಡಿದ ವೇಳೆ 72 ಜನ ಸೂರು ಕಳೆದುಕೊಂಡಿದ್ದು ಅವರಿಗೆ ತಿರುಮಲಾಪುರ ಗ್ರಾಮದಲ್ಲಿ ನಿವೇಶನಗಳ ಹಕ್ಕುಪತ್ರ ನೀಡಲು ಸ್ಥಳ ಗುರುತಿಸಲಾಗಿದೆ. ಇಲ್ಲಿ 120ಕ್ಕೂ ಹೆಚ್ಚು ನಿವೇಶನಗಳು ರಚಿಸಲು ಅವಕಾಶವಿದ್ದು ಬಡಜನರಿಗೂ ಇಲ್ಲಿ ನಿವೇಶನಗಳು ನೀಡಲಾಗುತ್ತದೆ ಎಂದು ಮಾಹಿತಿ‌ ನೀಡಿದರು. ಇದಕ್ಕೂ ಮುನ್ನ ಅಂಜನಾದ್ರಿ ಅಭಿವೃದ್ಧಿ ಭಾಗವಾಗಿ ಯಾತ್ರಿ ನಿವಾಸ ಶಾಪಿಂಗ್ ಕಾಂಪ್ಲೆಕ್ಸ್ ಶೌಚಾಲಯ ಡಾರ್ಮೆಟರಿ ಕಾಮಗಾರಿಗಳ ಬಗ್ಗೆ ಸೈಟ್ ಎಂಜಿನಿಯರ್‌ಗೆ ಕರೆ ಮಾಡಿ‌ ಮಾಹಿತಿ ಪಡೆದು ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣ ಗೊಳಿಸುವಂತೆ ನಿರ್ದೇಶನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.