ADVERTISEMENT

ಅನುದಾನ ದುರ್ಬಳಕೆ: ಕ್ರಮಕ್ಕೆ ಜೆಡಿಎಸ್‌ ಒತ್ತಾಯ

ಜೆಡಿಎಸ್‌ ತಾಲ್ಲೂಕು ಘಟಕದ ವತಿಯಿಂದ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 5:40 IST
Last Updated 21 ಸೆಪ್ಟೆಂಬರ್ 2021, 5:40 IST
ಯಲಬುರ್ಗಾದಲ್ಲಿ ಜೆಡಿಎಸ್ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆದ ಪಾದಯಾತ್ರೆಗೆ ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿ ವಿರೇಶ ಮಹಾಂತಯ್ಯನಮಠ ಚಾಲನೆ ನೀಡಿದರು. ಜಿಲ್ಲಾ ಘಟಕದ ಅಧ್ಯಕ್ಷ ಅಮರೇಗೌಡ ಪೊಲೀಸ್‍ ಪಾಟೀಲ, ಮಲ್ಲನಗೌಡ ಕೋನನಗೌಡ್ರ, ಶರಣಪ್ಪ ರಾಂಪೂರ ಸೇರಿ ಇತರರು ಇದ್ದರು
ಯಲಬುರ್ಗಾದಲ್ಲಿ ಜೆಡಿಎಸ್ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆದ ಪಾದಯಾತ್ರೆಗೆ ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿ ವಿರೇಶ ಮಹಾಂತಯ್ಯನಮಠ ಚಾಲನೆ ನೀಡಿದರು. ಜಿಲ್ಲಾ ಘಟಕದ ಅಧ್ಯಕ್ಷ ಅಮರೇಗೌಡ ಪೊಲೀಸ್‍ ಪಾಟೀಲ, ಮಲ್ಲನಗೌಡ ಕೋನನಗೌಡ್ರ, ಶರಣಪ್ಪ ರಾಂಪೂರ ಸೇರಿ ಇತರರು ಇದ್ದರು   

ಯಲಬುರ್ಗಾ: ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಅಭಿವೃದ್ಧಿಗೆ ಮೀಸಲಿದ್ದ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದು, ಕೂಡಲೇ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿ ವಿರೇಶ ಮಹಾಂತಯ್ಯನಮಠ ಒತ್ತಾಯಿಸಿದರು.

ತಾಲ್ಲೂಕು ಜೆಡಿಎಸ್ ವತಿಯಿಂದ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು,‘ಕೇಂದ್ರ ಮತ್ತು ರಾಜ್ಯ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದ್ದು, ಆರ್ಥಿಕವಾಗಿ ಹಿಂದುಳಿದ ಮತ್ತು ಅಭಿವೃದ್ಧಿ ವಂಚಿತ ಸಮುದಾಯಗಳ ಅಭಿವೃದ್ಧಿಗೆ ಇರುವ ಯೋಜನೆಗಳನ್ನು ದುರುಪಯೋಗಪಡಿಸಿಕೊಂಡು ಭಾರಿ ಅಕ್ರಮ ನಡೆಸಿದ್ದಾರೆ. ಇದರ ವಿರುದ್ಧ ಕಾನೂನು ಕ್ರಮ ಅಗತ್ಯವಾಗಿದೆ’ ಎಂದರು.

ಪಾದಯಾತ್ರೆಯ ನೇತೃತ್ವ ವಹಿಸಿದ್ದ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲನಗೌಡ ಕೋನನಗೌಡ್ರ ಮಾತನಾಡಿ,‘ತಾ ಲ್ಲೂಕಿನಲ್ಲಿ ಸಾಕಷ್ಟು ಅವ್ಯವಹಾರಗಳು ನಡೆಯುತ್ತಿವೆ. ಹಿಂದಿನ ಮತ್ತು ಪ್ರಸ್ತುತ ಜನಪ್ರತಿನಿಧಿಗಳಿಂದ ಸಾಕಷ್ಟು ಅಕ್ರಮಗಳು ಅವ್ಯಾಹತವಾಗಿ ನಡೆಯುತ್ತಿವೆ. ಹೊಂದಾಣಿಕೆ ರಾಜಕೀಯ ಮಾಡುತ್ತಿರುವುದರಿಂದ ಕ್ಷೇತ್ರದ ಮುಗ್ದ ಜನತೆ ಬಲಿಪಶುಗಳಾಗುತ್ತಿದ್ದಾರೆ. ತಾಲ್ಲೂಕಿನಲ್ಲಿ ನಡೆಯುತ್ತಿರುವ ಅವ್ಯವಹಾರ ಬಗ್ಗೆ ತನಿಖೆ ನಡೆಸುವುದು, ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಘೋಷಿಸುವುದು, ತಾಲ್ಲೂಕಿನಲ್ಲಿ ಎಪಿಎಂಸಿ ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಾದಯಾತ್ರೆಯ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

ಕಾರ್ಯಾದ್ಯಕ್ಷ ಶರಣಪ್ಪ ರಾಂಪೂರ ರೈತರನ್ನು ತೀವ್ರ ತೊಂದರೆಗೆ ಸಿಲುಕುವಂತೆ ಮಾಡುತ್ತಿರುವ ಜಿಂಕೆಗಳ ಸಂರಕ್ಷಣೆಗಾಗಿ ಜಿಂಕೆ ವನ ನಿರ್ಮಾಣ, ನಿರುದ್ಯೋಗ ಯುವಕರಿಗೆ ಸ್ಥಳೀಯ ಕೈಗಾರಿಕೆಗಳಲ್ಲಿ ಮೊದಲ ಅದ್ಯತೆ ನೀಡುವಂತೆ ಕ್ರಮಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹೇಳಿದರು.

ಜಿಲ್ಲಾಧ್ಯಕ್ಷ ಅಮರೇಗೌಡ ಪೊಲೀಸ್ ಪಾಟೀಲ, ಜಿಲ್ಲಾ ವಕ್ತಾರ ಮೌನೇಶ ವಡ್ಡಟ್ಟಿ, ತಾಲ್ಲೂಕು ಘಟಕದ ಕಾರ್ಯದರ್ಶಿ ಬಸವರಾಜ ಗುಳಗುಳಿ, ಕುಷ್ಟಗಿ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ನಾಯಕ, ಕುಕನೂರು ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ ಗುರಿಕಾರ, ಮುಖಂಡರಾದ ಅಲ್ತಾಫ್ ಹುಸೇನ್ ಬಿಚ್ಚಗತ್ತಿ, ಕರಿಯಪ್ಪ ತಳವಾರ, ದೇವಪ್ಪ ಕೊಪ್ಪಳ, ಮಂಜುನಾಥ ಕಬ್ಬಿಣದ ಗವಿಹಳ್ಳಿ, ಮಾರುತಿ ಸುಳಕೇರಿ, ಮಲ್ಲೇಶ ಕಂಬಳಿ, ಶರಣಪ್ಪ ಕವಳಕೇರಿ, ಉಪಾಧ್ಯಕ್ಷ ಹನಮಗೌಡ ಮಾಲಿಪಾಟೀಲ್, ಕರಿಯಪ್ಪ ನಂದಿಹಾಳ, ಈಶಪ್ಪಕರಡಿ, ಮಲ್ಲಪ್ಪ ಜಾಲಿಹಾಳ ಹಾಗೂ ಯಂಕಪ್ಪ ದಾಸರ ಅವರು ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.