ಕೊಪ್ಪಳ: ಆರ್ಥಿಕವಾಗಿ ಹೆಚ್ಚು ಲಾಭ ದೊರಕಿಸಿಕೊಡುತ್ತೇವೆ, ನೌಕರಿ ಕೊಡಿಸುತ್ತೇವೆ, ವ್ಯವಹಾರದ ಭಾಗೀದಾರರನ್ನಾಗಿ ಮಾಡುತ್ತೇವೆ ಹೀಗೆ ಅನೇಕ ಸುಳ್ಳು ಕಾರಣಗಳನ್ನು ನೀಡಿ ಜನತೆಯನ್ನು ವಂಚಿಸುವ ಪ್ರಕರಣಗಳು ಜಿಲ್ಲೆಯಲ್ಲಿ ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಈಗ ಯುವಕನೊಬ್ಬನಿಗೆ ಪಾರ್ಟ್ ಟೈಂ ನೌಕರಿ ನೀಡುವ ಆಮಿಷವೊಡ್ಡಿ ವಂಚನೆ ಮಾಡಲಾಗಿದೆ.
ಇತ್ತೀಚೆಗಷ್ಟೇ ಬೀರಲಿಂಗೇಶ್ವರ ಕಮಿಟಿ’ ಎನ್ನುವ ವ್ಯಾಟ್ಸ್ ಆ್ಯಪ್ ಗ್ರೂಪ್‌ನಲ್ಲಿ ಬಂದ ನಕಲಿ ’ಪಿಎಂ ಕಿಸಾನ್ ಯೋಜನೆಯ ಎಪಿಕೆ’ ಎನ್ನುವ ಫೈಲ್ ಆಕಸ್ಮಿಕವಾಗಿ ತಮ್ಮ ಮೊಬೈಲ್‌ನಲ್ಲಿ ಹಾಕಿಕೊಂಡು ತಾಲ್ಲೂಕಿನ ಕಂಪಸಾಗರ ಗ್ರಾಮದ ಬೆಟ್ಟದಪ್ಪ ಎಂ., ಎಂಬುವರು ₹2.52 ಲಕ್ಷ ಕಳೆದುಕೊಂಡಿದ್ದರು.
ಈಗ ಯುವಕನನ್ನು ಗುರಿಯಾಗಿರಿಸಿಕೊಂಡು ಸೈಬರ್ ವಂಚಕರು ಹಣ ದೋಚಿದ್ದಾರೆ. ಕೊಪ್ಪಳದ ಮಹೇಶ ಕುಮಾರ್ ಚಕ್ಕಿ ಎನ್ನುವ ವಿದ್ಯಾರ್ಥಿ ಪಾರ್ಟ್ ಟೈಂ ನೌಕರಿಯ ಹುಡುಕಾಟದಲ್ಲಿದ್ದರು. ಅಪರಿಚಿತ ವ್ಯಕ್ತಿಗಳು ಸಾಮಾಜಿಕ ಜಾಲತಾಣ ಟೆಲಿಗ್ರಾಂ ಆ್ಯಪ್ ಮೂಲಕ ಪರಿಚಯಿಸಿಕೊಂಡು ಟಾಸ್ಕ್ ಬೇಸ್ ವೇದಿಕೆಯಲ್ಲಿ ನೌಕರಿ ಕೊಡಿಸುತ್ತೇವೆ ಎಂದು ನಂಬಿಸಿ ಶಾಪ್‌ವೇರ್ ಮಾರ್ಕೆಟ್ ಎಂಬ ವೆಬ್‌ಸೈಟ್‌ನಲ್ಲಿ ಅಪರಿಚಿತ ನೀಡಿದ ಟಾಸ್ಕ್‌ಗಳನ್ನು ಪೂರ್ಣಗೊಳಿಸುವಂತೆ ಹೇಳಿದ್ದಾರೆ. ಇದನ್ನು ನಿಜವೆಂದು ನಂಬಿದ ಯುವಕ ವಂಚಕ ಹೇಳಿದ್ದೆಲ್ಲವನ್ನೂ ಮಾಡಿದ್ದಾರೆ.
ಹೇಳಿದ ಎಲ್ಲ ಕೆಲಸಗಳು ಮುಗಿದ ಬಳಿಕ ನಿಮಗೆ ಸಂಪೂರ್ಣ ಲಾಭವಾಗಿದೆ ಎಂದು ವರ್ಚುವಲ್ ಮೂಲಕ ತೋರಿಸಿ ವಿವಿಧ ಬ್ಯಾಂಕ್ ಖಾತೆಗಳು ಹಾಗೂ ಸಿಡಿಎಂ ಯಂತ್ರದ ಮೂಲಕ ಮಹೇಶ ಅವರಿಂದ ₹5.19 ಲಕ್ಷ ತನ್ನ ಖಾತೆಗೆ ಹಾಕಿಸಿಕೊಂಡಿದ್ದಾನೆ. ಬಳಿಕ ಮಹೇಶ ವಿಚಾರಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡದೇ ಮೋಸ ಮಾಡಲಾಗಿದೆ. ಈ ಕುರಿತು ಸೈಬರ್ ಪೊಲೀಸ್ ಠಾಣೆಗೆ ವಿದ್ಯಾರ್ಥಿ ದೂರು ನೀಡಿದ್ದಾರೆ.
ಇತ್ತೀಚೆಗಿನ ದಿನಗಳಲ್ಲಿ ಯುವಜನತೆಯಲ್ಲಿ, ಅದರಲ್ಲಿಯೂ ವಿದ್ಯಾವಂತರನ್ನೇ ಗುರಿ ಮಾಡಿ ಇಲ್ಲದ ಆಮಿಷಗಳನ್ನು ತೋರಿಸಿ ವಂಚನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಅದರಲ್ಲಿ ದೊಡ್ಡ ಮೊತ್ತ ಕಳೆದುಕೊಂಡ ಪ್ರಕರಣಗಳು ಮಾತ್ರ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿವೆ. ಇನ್ನುಳಿದವು ಸಂಬಂಧಿಸಿದ ಆಯಾ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗುತ್ತಿವೆ. ಇನ್ನೂ ಕೆಲವರು ಹಣ ಕಳೆದುಕೊಂಡು ವಂಚನೆಗೆ ಒಳಗಾದರೂ ದೂರು ನೀಡುತ್ತಿಲ್ಲ ಎನ್ನುತ್ತವೆ ಪೊಲೀಸ್ ಮೂಲಗಳು.
‘ವಿದ್ಯಾವಂತರೇ ಹೆಚ್ಚು ಎನ್ನುವುದ ಕಳವಳ’ ಕೊಪ್ಪಳ: ಸೈಬರ್ ಅಪರಾಧಗಳಿಗೆ ಹೆಚ್ಚು ಬಲಿಯಾಗುತ್ತಿರುವುದು ವಿದ್ಯಾವಂತ ಯುವಜನತೆಯೇ ಎನ್ನುವುದು ಕಳವಳಕಾರಿ. ರಾತ್ರೋ ರಾತ್ರಿ ಹಣ ಮಾಡಬೇಕು ಎನ್ನುವ ಆಸೆಗೆ ಬಿದ್ದು ವಂಚನೆಗೆ ಒಳಗಾಗುತ್ತಿದ್ದಾರೆ ಎಂದು ಕೊಪ್ಪಳದ ಸೈಬರ್ ಕ್ರೈಂಗೆ ಡಿವೈಎಸ್‌ಪಿ ಯಶವಂತ ಕುಮಾರ್ ಹೇಳಿದರು. ‘ಸೈಬರ್ ಅಪರಾಧಿಗಳ ವಂಚನೆಯ ತಂತ್ರಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಪ್ರಕರಣಗಳು ವರದಿಯಾಗುತ್ತಲೇ ಇವೆ. ಜನ ಕೂಡ ಎಚ್ಚರಿಕೆಯಿಂದ ಇರಬೇಕು. ಲಾಭವಿಲ್ಲದೆ ಯಾರೂ ಹೆಚ್ಚು ಹಣ ಕೊಡುವುದಿಲ್ಲ. ಇಂಥ ಆಮಿಷಗಳಿಗೆ ಯಾರೂ ಬಲಿಯಾಗಬಾರದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.