ADVERTISEMENT

ಮುಟ್ಟಿನ ಕುರಿತು ಜಾಗೃತಿ ಅಗತ್ಯ :ಸಾಮಾಜಿಕ ಕಾರ್ಯಕರ್ತೆ ಭಾರತಿ ಗುಡ್ಲಾನೂರ

‘ಮುಟ್ಟು ಏನಿದರ ಒಳಗುಟ್ಟು?’ ಪುಸ್ತಕ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2020, 5:11 IST
Last Updated 26 ಆಗಸ್ಟ್ 2020, 5:11 IST
ಕೊಪ್ಪಳದ ಸೇವಾ ಸಂಸ್ಥೆ, ಅಂಗಳ ಪ್ರಕಾಶನದ ಆಶ್ರಯದಲ್ಲಿ ಮಂಗಳವಾರ ನಡೆದ ಫೇಸ್‌ಬುಕ್‌ ಲೈವ್ ಕಾರ್ಯಕ್ರಮದ ಮೂಲಕ ಮುಟ್ಟು ಏನಿದರ ಒಳಗುಟ್ಟು? ಪುಸ್ತಕ ಬಿಡುಗಡೆಗೊಳಿಸಲಾಯಿತು
ಕೊಪ್ಪಳದ ಸೇವಾ ಸಂಸ್ಥೆ, ಅಂಗಳ ಪ್ರಕಾಶನದ ಆಶ್ರಯದಲ್ಲಿ ಮಂಗಳವಾರ ನಡೆದ ಫೇಸ್‌ಬುಕ್‌ ಲೈವ್ ಕಾರ್ಯಕ್ರಮದ ಮೂಲಕ ಮುಟ್ಟು ಏನಿದರ ಒಳಗುಟ್ಟು? ಪುಸ್ತಕ ಬಿಡುಗಡೆಗೊಳಿಸಲಾಯಿತು   

ಕೊಪ್ಪಳ: ಮುಟ್ಟಿನ ಕುರಿತು ಮಾತನಾಡುವುದಕ್ಕೆ ಈಗಲೂ ನಮ್ಮ ಸಮಾಜ ಹಿಂಜರಿಯುತ್ತದೆ. ಪುರುಷರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯ ಇದೆ ಎಂದು ಸಾಮಾಜಿಕ ಕಾರ್ಯಕರ್ತೆ ಭಾರತಿ ಗುಡ್ಲಾನೂರ ಅಭಿಪ್ರಾಯಪಟ್ಟರು.

ನಗರದ ಸೇವಾ ಸಂಸ್ಥೆಯು, ಅಂಗಳ ಪ್ರಕಾಶನದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಫೇಸ್‌ಬುಕ್‌ ಲೈವ್ ಕಾರ್ಯಕ್ರಮದಲ್ಲಿ ‘ಮುಟ್ಟು ಏನಿದರ ಒಳಗುಟ್ಟು?’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಈಗಲೂ ಸ್ಯಾನಿಟರಿ ಪ್ಯಾಡ್‌ಗಳನ್ನು ಮೆಡಿಕಲ್‌ ಶಾಪ್‌ನಲ್ಲಿ ಕದ್ದು ಮುಚ್ಚಿ ನೀಡಲಾಗುತ್ತಿದೆ. ಮನೆಗಳಲ್ಲೂ ಸಹ ಯಾರೂ ನೋಡದ ಜಾಗದಲ್ಲಿ ಅವುಗಳನ್ನು ಇಡಲಾಗುತ್ತಿದೆ. ಮುಟ್ಟಿನ ಕುರಿತು ಮಹಿಳೆಯರಿಗೆ ಸಂಕೋಚ, ಆತಂಕ ಹಾಗೂ ಕೀಳರಿಮೆಗಳೇ ಹೆಚ್ಚಾಗಿದೆ. ಇದಕ್ಕೆ ಅದರ ಕುರಿತು ನಮ್ಮ ಸಮಾಜದಲ್ಲಿ ಇರುವ ಅಭಿಪ್ರಾಯಗಳೇ ಕಾರಣವಾಗಿವೆ.ಪುರುಷರಿಗೆ ಇದರ ಕುರಿತು ಜಾಗೃತಿ ಮೂಡಿಸಬೇಕಿದೆ. ಇದರಿಂದ ಕುಟುಂಬ ವ್ಯವಸ್ಥೆಗೆ ಒಳ್ಳೆಯದಾಗುತ್ತದೆ ಎಂದರು.

ADVERTISEMENT

ಲೇಖಕಿ ಜ್ಯೋತಿ ಹಿಟ್ನಾಳ ಮಾತನಾಡಿ,‘ಮುಟ್ಟಿನ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುವಾಗ ಬಹಳಷ್ಟು ವಿಷಯಗಳು ತಿಳಿದುಬಂದವು. ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ನಿರ್ಧರಿಸದಾಗ ಇಡೀ ನಾಡಿನ ಪ್ರಖ್ಯಾತ
ಬರಹಗಾರರು, ಸಾಮಾಜಿಕ ಕಾರ್ಯಕರ್ತರು ತಮ್ಮ ಬರಹಗಳನ್ನು ನೀಡಿ ಪ್ರೋತ್ಸಾಹಿಸಿದರು. ಇದನ್ನು ನಮ್ಮ ಜಿಲ್ಲೆಯಲ್ಲಿ ಬಿಡುಗಡೆಗೊಳಿಸುತ್ತಿರುವುದು ನಿಜಕ್ಕೂ ಖುಷಿ ಕೊಟ್ಟಿದೆ’ ಎಂದರು.

ಪತ್ರಕರ್ತ ಸಿರಾಜ್ ಬಿಸರಳ್ಳಿ ಮಾತನಾಡಿದರು.

ಗೌತಮಿ, ಪ್ರಭುಕುಮಾರ್ ಗಾಳಿ, ಬಸವರಾಜ್ ಮರಡೂರು, ಇಸ್ಮಾಯಿಲ್ ಹ್ಯಾಟಿ ಹಾಗೂ ಮಹೇಶ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.