ಪ್ರಜಾವಾಣಿ ವಾರ್ತೆ
ಕುಷ್ಟಗಿ: ನ್ಯಾಯಾಂಗ ಇಲಾಖೆ ಸೇರಿ ಹಲವು ಇಲಾಖೆಗಳು ದತ್ತು ತೆಗೆದುಕೊಂಡಿರುವ ತಾಲ್ಲೂಕಿನ ಜಿ.ಬೆಂಚಮಟ್ಟಿ ಗ್ರಾಮದಲ್ಲಿ ಈಚೆಗೆ ಸಸಿ ನೆಡುವ ಮತ್ತು ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ನಡೆಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಮಂಜುನಾಥ ಚಾಲನೆ ನೀಡಿ ಪರಿಸರ ಸಂರಕ್ಷಣೆ ವಿಷಯದಲ್ಲಿ ಮಕ್ಕಳಲ್ಲಿ ಅರಿವು ಮೂಡಿಸುವುದು, ಗ್ರಾಮದ ಸಾಮಾಜಿಕ, ಶೈಕ್ಷಣಿಕ ಬೆಳವಣಿಗೆ, ಜನರ ಸಹಭಾಗಿತ್ವದ ಬಗ್ಗೆ ಸಲಹೆ ನೀಡಿದರು. ಅಲ್ಲದೆ ಉಚಿತ ಕಾನೂನು ಸೇವೆ ಹಾಗೂ ನೆರವು ಕುರಿತು ಮಾಹಿತಿ ನೀಡಿದರು.
ಈ ಸಂದರ್ಭ ಶಾಲೆಗೆ ಭೂಮಿ ದಾನ ನೀಡಿದ ಗ್ರಾಮದ ಲಕ್ಷ್ಮವ್ವ ದುರುಗನಗೌಡ ಪಾಟೀಲ ಅವರನ್ನು ನ್ಯಾಯಾಧೀಶರು ಸನ್ಮಾನಿಸಿ ಶೈಕ್ಷಣಿಕ ಅಭಿವೃದ್ಧಿಗೆ ಕೊಡುಗೆ ನೀಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ನ್ಯಾಯಾಧೀಶರಾದ ಎಂ.ಎಲ್.ಪೂಜೇರಿ, ಮಹಾಂತೇಶ ಚೌಳಗಿ, ತಹಶೀಲ್ದಾರ್ ಅಶೋಕ ಶಿಗ್ಗಾವಿ, ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ, ಅರಣ್ಯಾಧಿಕಾರಿ ಸತೀಶ್ ಲುಕ್ಕ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪಂಪಾಪತಿ ಹಿರೇಮಠ, ಸಿಡಿಪಿಒ ಯಲ್ಲಮ್ಮ ಹಂಡಿ, ಸರ್ಕಾರಿ ವಕೀಲ ಎಲ್.ರಾಯನಗೌಡ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ, ಮುಖ್ಯಶಿಕ್ಷಕ ನಿಂಗಪ್ಪ ಗುನ್ನಾಳ, ಪಿಡಿಒ ದಸ್ತಗೀರಸಾಬ್ ಇದ್ದರು.
ಗ್ರಾಮದ ಹಿರಿಯರು, ಯುವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ ಜನರ ಆರೋಗ್ಯ ತಪಾಸಣೆ, ಕಾನೂನು ಸೇವಾ ಸಮಿತಿಯಿಂದ ದೊರೆಯುವ ಅನುಕೂಲ ಕುರಿತು ಜನರಲ್ಲಿ ಅರಿವು ಮೂಡಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.