ADVERTISEMENT

ಮಹಿಳೆ, ಮಕ್ಕಳ ಸುರಕ್ಷತೆಗೆ ಸಖಿ ಕೇಂದ್ರ: ಹಾಲಪ್ಪ ಆಚಾರ

ಜಿಲ್ಲೆಯ ವಿವಿಧೆಡೆ 74ನೇ ಕಲ್ಯಾಣ- ಕರ್ನಾಟಕ ಉತ್ಸವ ದಿನ ಆಚರಣೆ: ಭಾರತದ ಉಕ್ಕಿನ ಮನುಷ್ಯ ಸರ್ದಾರ ವಲ್ಲಭಭಾಯಿ ಪಟೇಲ್‌ ಕೊಡುಗೆ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 3:56 IST
Last Updated 18 ಸೆಪ್ಟೆಂಬರ್ 2021, 3:56 IST
ಕುಷ್ಟಗಿ ಸಮೀಪದ ಮುರಡಿ ಬಳಿ ಸ್ವಾತಂತ್ರ್ಯ ಹೋರಾಟಗಾರ ಭೀಮಜ್ಜ ಅವರ ತಪೋಭೂಮಿ ಬಳಿ ನಡೆದ ಉತ್ಸವದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು
ಕುಷ್ಟಗಿ ಸಮೀಪದ ಮುರಡಿ ಬಳಿ ಸ್ವಾತಂತ್ರ್ಯ ಹೋರಾಟಗಾರ ಭೀಮಜ್ಜ ಅವರ ತಪೋಭೂಮಿ ಬಳಿ ನಡೆದ ಉತ್ಸವದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು   

ಕೊಪ್ಪಳ: ‘ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಒಂದೇ ಸೂರಿನಡಿ ವೈದ್ಯಕೀಯ ಚಿಕಿತ್ಸೆ, ಪೊಲೀಸ್ ಮತ್ತು ಕಾನೂನು ನೆರವು ಹಾಗೂ ಸಮಾಲೋಚನಾ ವ್ಯವಸ್ಥೆ ಒದಗಿಸಲು ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಸಖಿ ಕೇಂದ್ರ ಆರಂಭಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಬಸಪ್ಪ ಆಚಾರ ಹೇಳಿದರು.

74ನೇ ಕಲ್ಯಾಣ-ಕರ್ನಾಟಕ ಉತ್ಸವದ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಕೊಪ್ಪಳದಲ್ಲಿ ನವೆಂಬರ್-2019 ರಿಂದ ‘ಸಖಿ’ ಒನ್ ಸ್ಟಾಫ್ ಸೆಂಟರ್ ಯೋಜನೆ ಆರಂಭಿಸಿದ್ದು,ಇಲ್ಲಿಯವರೆಗೆ 42 ಪ್ರಕರಣ ದಾಖಲಾಗಿರುತ್ತವೆ. ಕೋವಿಡ್‌ನಿಂದ ಒಬ್ಬ ಪೋಷಕರನ್ನು ಕಳೆದುಕೊಂಡ ಒಟ್ಟು 313 ಮಕ್ಕಳನ್ನು ಗುರುತಿಸಲಾಗಿದ್ದು, ಮೊದಲು ಪೋಷಕರನ್ನು ಬೇರೆ ಕಾರಣದಿಂದ ಕಳೆದುಕೊಂಡು ಇನ್ನೊಬ್ಬ ಪೋಷಕರನ್ನು ಕೋವಿಡ್-19ನಿಂದ ಕಳೆದುಕೊಂಡ ಒಬ್ಬ ಮಗುವಿಗೆ ರಾಜ್ಯ ಸರ್ಕಾರದಿಂದ ಘೋಷಿಸಲಾದ ಮುಖ್ಯಮಂತ್ರಿ ಬಾಲಸೇವಾ ಯೋಜನೆಯಡಿ ಪ್ರತಿತಿಂಗಳು ₹3,500 ನೀಡಲಾಗಿದೆ ಎಂದು ಅವರು ಹೇಳಿದರು.

ADVERTISEMENT

ಸರ್ಕಾರವು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಅಭಿವೃದ್ಧಿಗಾಗಿ ವಿಶೇಷ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕಾಗಿಯೇ ಕಲ್ಯಾಣ ಕರ್ನಾಟಕ ಪ್ರದೇಶಾ ಭಿವೃದ್ಧಿ ಮಂಡಳಿ ಸ್ಥಾಪಿಸಿ ಹಲವಾರು ಯೋಜನೆ ಜಾರಿಗೆ ತಂದಿದ್ದು, ಪ್ರಸ್ತುತ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಕೃಷಿ, ಸಾಂಸ್ಕೃತಿಕ, ಮಾನವ ಸಂಪನ್ಮೂಲ ಅಭಿವೃದ್ಧಿ ಸಂಘವನ್ನು ರಚಿಸಿ, ಅಭಿವೃದ್ಧಿಗಾಗಿ ಅನುದಾನ ನೀಡಿದೆ ಎಂದರು.

ಭಾರತದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿಗಾಗಿ ರಾಜ್ಯ ಸರ್ಕಾರದಿಂದ ವಿಶೇಷ ಕಾರ್ಯಕ್ರಮ ಅಮೃತಯೋಜನೆ ಅಡಿ ಕಾರ್ಯಕ್ರಮ ಹಮ್ಮಿಕೊಂಡಿದ್ದು,ಮಂಡಳಿ ವತಿಯಿಂದ 2021-22ನೇ ಸಾಲಿನಲ್ಲಿ ಜಿಲ್ಲೆಗೆ ಮೈಕ್ರೊ ವಲಯದಲ್ಲಿ ₹100 ಕೋಟಿ ಹಾಗೂ ಮ್ಯಾಕ್ರೊ ವಲಯದಲ್ಲಿ ₹42.86 ಕೋಟಿ ಅನುದಾನ ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಜೀವಿನಿ ಯೋಜನೆಯಡಿ ಗುಂಪು ರಚನೆ ಮಾಡಲಾಗಿದ್ದು, ಸದರಿ ಒಕ್ಕೂಟಗಳಲ್ಲಿ 6714 ಸ್ವ ಸಹಾಯ ಗುಂಪು ರಚನೆ ಮಾಡಲಾಗಿದೆ ಹಾಗೂ ಒಟ್ಟು 75,820 ಸದಸ್ಯರನ್ನು ಒಳಗೊಂಡಿದೆ.ನರೇಗಾ ಯೋಜನೆಯಡಿಯಲ್ಲಿ ನಮ್ಮ ಜಿಲ್ಲೆಯಲ್ಲಿ 2,80,561 ಕುಟುಂಬಗಳನ್ನು ನೋಂದಾಯಿಸಿ ಉದ್ಯೋಗ ಚೀಟಿ ನವೀಕರಿಸಿ ದೃಢೀಕರಣಗೊಳಿಸಲಾಗಿದೆ ಎಂದರು.

ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ಅಧ್ಯಕ್ಷತೆ ವಹಿಸಿದ್ದರು. ಸಂಸದ ಕರಡಿ ಸಂಗಣ್ಣ, ನಗರಸಭೆ ಅಧ್ಯಕ್ಷೆ ಲತಾ ಗವಿಸಿದ್ದಪ್ಪ ಚಿನ್ನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ.ಎಸ್. ಪಾಟೀಲ್, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪಂಚಾಯಿತಿ ಸಿಇಒ ಫೌಜಿಯಾ ತರನ್ನುಮ್,ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ಹೇಮಂತ್ ಕುಮಾರ್, ಉಪವಿಭಾಗಾಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿ, ಡಿವೈಎಸ್‌ಪಿ ಗೀತಾ ಬೇನಾಳಇದ್ದರು.

‘ಯೋಧರ ತ್ಯಾಗ, ಬಲಿದಾನ ಸ್ಮರಿಸಿ’

ಯಲಬುರ್ಗಾ: ‘ಅಭಿವೃದ್ಧಿಯತ್ತ ಸಾಗಿರುವ ಕಲ್ಯಾಣ ಕರ್ನಾಟಕ ಪ್ರದೇಶದ ಇತಿಹಾಸದ ಘಟನಾವಳಿಗಳು ಅತ್ಯಂತ ರೋಚಕ ಹಾಗೂ ಗಂಭೀರ ಸ್ವರೂಪದ್ದಾಗಿದ್ದವು’ ಎಂದು ತಹಶೀಲ್ದಾರ್ ಶ್ರೀಶೈಲ್ ತಳವಾರ ಹೇಳಿದರು.

ಪಟ್ಟಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು,‘ಸ್ವಾತಂತ್ರ್ಯ ಪೂರ್ವದಲ್ಲಿ ಸಂಸ್ಥಾನಕ್ಕೆ ಒಳಪಟ್ಟಿದ್ದ ಈ ಪ್ರದೇಶದ ಜನರ ಜೀವನ ಅತ್ಯಂತ ಕಷ್ಟದಾಯಕ ಹಾಗೂ ತೀರಾ ಅಸಹಾಯಕವಾಗಿತ್ತು. ಆದರೆ ಯೋಧರ ತ್ಯಾಗ ಹಾಗೂ ಪರಿಶ್ರಮದ ಫಲವಾಗಿ ಈ ಭಾಗದ ಜನರಿಗೆ ಸ್ವಾತಂತ್ರ್ಯ ದೊರೆತಿದೆ’ ಎಂದರು.

ನಿಜಾಮನ ಸರ್ವಾಧಿಕಾರ ಧೋರಣೆ, ರಜಾಕಾರರ ಹಾವಳಿಗೆ ಕಂಗೆಟ್ಟು ಅನೇಕ ದಿಟ್ಟ ಯೋಧರು ಅವರ ವಿರುದ್ಧ ಹೋರಾಡಿ ವಿಮೋಚನೆಗೊಂಡಿದ್ದು, ಈ ಪ್ರದೇಶದ ದೊಡ್ಡ ಇತಿಹಾಸ. ಈ ವಿಮೋಚನಾ ಹೋರಾಟದಲ್ಲಿ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಅನೇಕ ಶಿಬಿರಗಳನ್ನು ಆಯೋಜಿಸಿದ್ದ ಯೋಧರು ಜನರಲ್ಲಿ ಧೈರ್ಯತುಂಬಿ ರಜಾಕಾರರ ವಿರುದ್ಧ ದಂಗೆ ಏಳುವಂತೆ ಮಾಡಿದ್ದರು ಎಂದು ಸ್ಮರಿಸಿದರು.

ಸ್ಥಳೀಯ ಕೋರ್ಟ್‌ನ ಎಪಿಪಿ ಎ.ಐ ಹಾದಿಮನಿ ಮಾತನಾಡಿ,‘ಇತಿಹಾಸದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಹಾಗೆಯೇ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ಅರಿವು ಹಾಗೂ ಸೇವೆ ದೊರೆಯುತ್ತದೆ. ಇದನ್ನು ಪಡೆದುಕೊಳ್ಳಲು ಪ್ರತಿಯೊಬ್ಬರೂ ಮುಂದೆ ಬರಬೇಕು. ಕಾನೂನಿನ ಅರಿವು ಕೂಡ ಸ್ವಾತಂತ್ರ್ಯದ ಯಶಸ್ಸಿನ ಒಂದು ಭಾಗ’ ಎಂದರು.

ಪ.ಪಂ. ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಮಾತನಾಡಿ,‘ಅಂದು ರಜಾಕಾರರಿಂದ ದೌರ್ಜನ್ಯ, ದಬ್ಬಾಳಿಕೆ ಹಾಗೂ ಮಾನಭಂಗದಂಥ ಹೀನ ಕೃತ್ಯಗಳನ್ನು ಅನುಭಸಿದ ಹಿರಿಯ ಯೋಧರ ತ್ಯಾಗ ಮರೆಯುವಂತಿಲ್ಲ’ ಎಂದು ಅವರು ಹೇಳಿದರು.

ಪ.ಪಂ. ಉಪಾಧ್ಯಕ್ಷೆ ಶಾಂತಾ ಮಾಟೂರು, ಸದಸ್ಯರಾದ ಕಳಕಪ್ಪ ತಳವಾರ, ರೇವಣಪ್ಪ ಹಿರೇಕುರಬರ, ಶ್ರೀದೇವಿ ಗುರುವಿನ, ರಿಯಾಜ ಖಾಜಿ, ಹನಮಂತಪ್ಪ ಭಜಂತ್ರಿ, ಬಿಇಒ ಮೌನೇಶ ಬಡಿಗೇರ, ಬಿಸಿಎಂ ಅಧಿಕಾರಿ ಎಸ್.ವಿ.ಭಜಂತ್ರಿ, ಸಮಾಜ ಕಲ್ಯಾಣಾಧಿಕಾರಿ ವ್ಹಿ.ಎಸ್.ಬಡಿಗೇರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಶಿವರಾಜ ಗುರಿಕಾರ ಇದ್ದರು.

‘ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗಲಿ’

ಹನುಮಸಾಗರ: ‘ಕಲ್ಯಾಣ ಕರ್ನಾಟಕ ಉತ್ಸವ ಕೇವಲ ಆಚರಣೆಗೆ ಸೀಮಿತವಾಗದೆ ಈ ಭಾಗ ನಿಜಕ್ಕೂ ಕಲ್ಯಾಣ ಕರ್ನಾಟಕವಾಗಿ ಅಭಿವೃದ್ಧಿ ಹೊಂದಬೇಕು’ ಎಂದು ಅನ್ನದಾನೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂಗಯ್ಯ ವಸ್ತ್ರದ ಹೇಳಿದರು.

ಇಲ್ಲಿನ ಅನ್ನದಾನೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

371ಜೆ ಅಡಿಯಲ್ಲಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಪರಿಚಯಿಸಿದೆ. ಆದರೆ ಅದು ಜಾರಿಯಾಗಿ ದಶಕ ಸಮೀಪಿಸುತ್ತಿದ್ದರೂ ನಿರೀಕ್ಷಿತ ಬದಲಾವಣೆ ಹಾಗೂ ಪೂರಕ ಅನುದಾನ ದೊರಕುತ್ತಿಲ್ಲ ಎಂದು ವಿಷಾದಿಸಿದರು.

ಮಲ್ಲಯ್ಯ ಕೋಮಾರಿ ಮಾತನಾಡಿ,‘ಹೈದರಾಬಾದ್ ನಿಜಾಮ ತನ್ನ ಸಂಸ್ಥಾನವನ್ನು ಸ್ವತಂತ್ರ ಭಾರತದಲ್ಲಿ ವಿಲೀನಗೊಳಿಸಲು ಒಪ್ಪದ ಕಾರಣ ಹೈದರಾಬಾದ್ ಕರ್ನಾಟಕ ಭಾಗಕ್ಕೆ 1947ರ ಸ್ವಾತಂತ್ರ್ಯ ಮರೀಚಿಕೆಯಾಗಿತ್ತು. ಅಂದಿನ ಕೇಂದ್ರ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಬಿಗಿ ನಿಲುವಿನಿಂದಾಗಿ ಹೈದರಾಬಾದ್ ನಿಜಾಮ ಸಂಸ್ಥಾನ 1948 ಸೆಪ್ಟೆಂಬರ್ 17 ರಂದು ಭಾರತ ಒಕ್ಕೂಟದಲ್ಲಿ ವಿಲೀನವಾಯಿತು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಶೈಲಪ್ಪ ಮೋಟಗಿ, ಶಿವಪ್ಪ ಕಂಪ್ಲಿ, ಕಾರ್ಯದರ್ಶಿ ಗಳಾದ ಶ್ರೀ ಮಲ್ಲಯ್ಯ ಕೋಮಾರಿ, ಸಂಸ್ಥೆಯ ನಿರ್ದೇಶಕರು ಹಾಗೂ ಗ್ರಾಮದ ಹಿರಿಯರು ಇದ್ದರು.

‘ಈ ಭಾಗದ ಅಭಿವೃದ್ಧಿಗೆ ಒತ್ತು ನೀಡಿ’

ಕನಕಗಿರಿ: ‘ತ್ಯಾಗ, ಬಲಿದಾನ ಹಾಗೂ ಹೋರಾಟದ ಪ್ರತಿಫಲದಿಂದ ಹೈದರಾಬಾದ್ ಕರ್ನಾಟಕ ವಿಮೋಚನೆಗೊಂಡಿದೆ. ರಾಜಕಾರಣಿಗಳು ಇಚ್ಛಾಶಕ್ತಿ ಪ್ರದರ್ಶಿಸುವ ಮೂಲಕ ಹಿಂದುಳಿದ ಈ ಭಾಗದ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಬೇಕು’ ಎಂದು ಉಪನ್ಯಾಸಕ ಈಶ್ವರ ಹಲಗಿ ಆಗ್ರಹಿಸಿದರು.

ತಾಲ್ಲೂಕು ಆಡಳಿತದ ವತಿಯಿಂದ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಶುಕ್ರವಾರ ನಡೆದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕ ಪ್ರಾಂತ್ಯ ನಿಜಾಮನ ಕಪಿಮುಷ್ಠಿಯಿಂದ ಬಿಡುಗಡೆಗೊಂಡು 74 ವರ್ಷಗಳು ಕಳೆದರೂ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಈ ಭಾಗ ತೀರ ಹಿಂದುಳಿದಿದೆ. ಶಿಕ್ಷಣ ಸಂಸ್ಥೆ ಅದರಲ್ಲಿಯೂ ವೃತ್ತಿ ಪರ ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಮೂಲಕ ನಿರುದ್ಯೋಗದ ಸಮಸ್ಯೆ ಹೋಗಲಾಡಿಸಬೇಕು ಎಂದು ಹೇಳಿದರು.

ಬಹುತ್ವ ಭಾರತವನ್ನು ದುರ್ಬಲಗೊಳಿಸುವ ದುಷ್ಟ ಶಕ್ತಿಗಳ ವಿರುದ್ದ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಸವಾಲುಗಳನ್ನು ಎದುರಿಸಿ ಭವ್ಯ ಭಾರತ ನಿರ್ಮಾಣ ಮಾಡಬೇಕು ಎಂದು ಅವರು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕಾವ್ಯಾರಾಣಿ ಮಾತನಾಡಿ,‘ಈ ಭಾಗದ ಜನರಿಗೆ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳನ್ನು ಒದಗಿಸಲು ಸಂವಿಧಾನದ 371 ಜೆ ತಿದ್ದುಪಡಿ ತುಂಬಾ ಸಹಾಯಕವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಹುದ್ದೆಗಳನ್ನು ಪಡೆಯಬೇಕು’ ಎಂದು ಅವರು ಹೇಳಿದರು.

ತಾ.ಪಂ. ಯೋಜನಾ ಸಹಾಯಕ ರಾಜಶೇಖರ, ಶಿಕ್ಷಣ ಸಂಯೋಜಕ ಆನಂದ ನಾಗಮ್ಮನವರ್, ಪ್ರಭಾರ ಪ್ರಾಂಶುಪಾಲ ಮಾರೆಪ್ಪ, ಅಧಿಕಾರಿಗಳಾದ ಇಮಾಲೆಪ್ಪ ಹಾಗೂ ಗಂಗಾಧರ ಸೇರಿ ಹಲವರು ಈ ವೇಳೆ ಇದ್ದರು.

ಶಾಮೀದಾಬ ಸ್ವಾಗತಿಸಿದರು. ಪ್ರಭುಲಿಂಗ ವಸ್ತ್ರದ ಅವರು ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.