ಕಾರಟಗಿ: ಪಟ್ಟಣದ ಅಬ್ದುಲ್ ನಜೀರ್‌ಸಾಬ್ ಕಾಲೊನಿಯಲ್ಲಿ ಪುರಸಭೆಯಿಂದ ರಸ್ತೆ ನಿರ್ಮಾಣ ಕಾರ್ಯ ಭರದಿಂದ ನಡೆದಿದ್ದು, ವಾರದೊಳಗೆ ನಿರ್ಮಾಣ ಕಾರ್ಯ ಮುಗಿಯಲಿದೆ.ಇದರ ಬಗ್ಗೆ ಭುಗಿಲೆದ್ದಿದ್ದ ವಿವಾದ ಈ ಮೂಲಕ ಅಂತ್ಯವಾಗಲಿದೆ.
ಕಾಲೊನಿಯ ಇನ್ನೊಂದು ಭಾಗದಲ್ಲಿ ರಸ್ತೆ ನಿರ್ಮಾಣದ ಬೇಡಿಕೆ ಇದ್ದು, ಆದ್ಯತೆಯ ಮೇರೆಗೆ ಮಾಡಲಾಗುವುದು ಎಂದು ಪುರಸಭೆಯ ಮೂಲಗಳು ತಿಳಿಸಿವೆ.
’ವಿದ್ಯುತ್ ಕಂಬ ಸ್ಥಳಾಂತರಕ್ಕೆ ರಸ್ತೆ ನಿರ್ಮಾಣದ ಸಿದ್ಧತೆಗೂ ಮುನ್ನ ಜೆಸ್ಕಾಂಗೆ ಮನವಿ ಸಲ್ಲಿಸಲಾಗಿತ್ತು. ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ ಇದ್ದುದರಿಂದ ಅವರಿಗೆ ತೊಂದರೆಯಾಗದಿರಲಿ ಹಾಗೂ ಇದೇ ಮಾರ್ಗವಾಗಿ ಹತ್ತಾರು ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಲಾಗುವುದರಿಂದ ವಿದ್ಯುತ್ ಕಂಬಗಳ ಸ್ಥಳಾಂತರ ವಿಳಂಬವಾಯಿತು. ಈಗಾಗಲೇ ವಿದ್ಯುತ್ ಸ್ಥಗಿತದ ಬಗ್ಗೆ ಸಾರ್ವಜನಿಕ ಮಾಹಿತಿ ನೀಡಿ ಮಂಗಳವಾರ ಕಂಬಗಳನ್ನು ಸ್ಥಳಾಂತರಿಸಲಾಗಿದೆ. ಇದೇ ವಿಷಯಕ್ಕೆ ಅನೇಕರು ಅಪಪ್ರಚಾರ ನಡೆಸಿರುವುದಕ್ಕೆ ಬೇಜಾರು ಅನಿಸಿತು. ಏನಾದರೂ ಅಭಿವೃದ್ಧಿ ಮಾಡೋಣ ಎಂಬ ನಮ್ಮ ಆಶಯಕ್ಕೆ ಜನರೂ ಕೈಜೋಡಿಸಿ, ಸಹಕರಿಸಬೇಕು’ ಎಂದು ಪುರಸಭೆ ಮುಖ್ಯಾಧಿಕಾರಿ ಸುರೇಶ ಹೇಳಿದರು.
’ಪುರಸಭೆ ಎಂಜಿನಿಯರ್ ಮಂಜುನಾಥ ನಾಯಕ ಪ್ರತಿಕ್ರಿಯಿಸಿ, 15ನೇ ಹಣಕಾಸು ಯೋಜನೆಯಡಿ ₹23ಲಕ್ಷ ವೆಚ್ಚದಲ್ಲಿ 350 ಮೀಟರ್ ರಸ್ತೆ ನಿರ್ಮಿಸಲಾಗುತ್ತಿದೆ. ಕಂಬಗಳ ತೆರವಿಗೆ ತಿಂಗಳ ಹಿಂದೆಯೇ ಜೆಸ್ಕಾಂ ಅರ್ಜಿ ಸಲ್ಲಿಸಲಾಗಿತ್ತು’ ಎಂದರು.
’ಜಲ್ಲಿಕಲ್ಲು ಹಾಕಿ, ನೀರು, ಮರಳಿನಿಂದ ರೋಲರ್ ಮಾಡಲಾಗಿದೆ. ನಾಲ್ಕು ದಿನ ಬಿಟ್ಟು ಡಾಂಬರೀಕರಣ ಕಾರ್ಯ ನಡೆಸಲಾಗುವುದು’ ಎಂದು ಕಾಮಗಾರಿಯ ಉಸ್ತುವಾರಿ ವಹಿಸಿದ್ದ ಸಿದ್ದಪ್ಪ ಬೇವಿನಾಳ ತಿಳಿಸಿದರು.
’ನಾಲೆಯ ಮೇಲೆ ತಗ್ಗುದಿನ್ನೆಗಳಲ್ಲಿ ಸಂಚರಿಸಬೇಕಾಗಿತ್ತು. ಈಗ ಸುಸ್ಥಿತಿಯ ರಸ್ತೆ ನಿರ್ಮಾಣ ಮಾಡುತ್ತಿರುವುದರಿಂದ ಜನರಿಗೆ ತುಂಬಾ ಅನುಕೂಲವಾಗುವುದು’ ಎಂದು ನಿವಾಸಿಗಳಾದ ಶರಣಪ್ಪ ಮೇಸ್ತ್ರಿ, ಬಸಪ್ಪ ಹಡಪದ ಪುರಸಭೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.