ADVERTISEMENT

ರಾಜಧಾನಿಯಲ್ಲೇ ಕನ್ನಡಕಕ್ಕೆ ಕಂಟಕ: ದೊಡ್ಡನಗೌಡ ಪಾಟೀಲ

ಶಾಸಕ ದೊಡ್ಡನಗೌಡ ಪಾಟೀಲ ಕಳವಳ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2023, 13:42 IST
Last Updated 1 ನವೆಂಬರ್ 2023, 13:42 IST
ಕುಷ್ಟಗಿಯಲ್ಲಿ ಕನ್ನಡ ರಾಜ್ಯೋತ್ಸವದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿದರು. ತಹಶೀಲ್ದಾರ್ ಶ್ರುತಿ ಮಳ್ಳಪ್ಪಗೌಡ್ರ ಇತರರು ಇದ್ದರು
ಕುಷ್ಟಗಿಯಲ್ಲಿ ಕನ್ನಡ ರಾಜ್ಯೋತ್ಸವದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿದರು. ತಹಶೀಲ್ದಾರ್ ಶ್ರುತಿ ಮಳ್ಳಪ್ಪಗೌಡ್ರ ಇತರರು ಇದ್ದರು   

ಕುಷ್ಟಗಿ: ಅನ್ಯ ಭಾಷೆಗಳ ಪ್ರಭಾವ ಮತ್ತು ಕನ್ನಡಿಗರ ಉದಾಸೀನತೆಯಿಂದ ಕನ್ನಡ ಭಾಷೆಗೆ ಕಂಟಕ ಎದುರಾಗಿದೆ. ಕನ್ನಡದ ರಾಜಧಾನಿ ಬೆಂಗಳೂರಿನಲ್ಲಿಯೇ ಕನ್ನಡ ಭಾಷೆ ಕಣ್ಮರೆಯಾಗುತ್ತಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಕಳವಳ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ 68ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೆ ಸಂಸ್ಕೃತ ಕನ್ನಡದ ಮೇಲೆ ದಬ್ಬಾಳಿಕೆ ನಡೆಸಿದರೆ, ಈಗ ಆಂಗ್ಲಭಾಷೆಯಿಂದ ನಮ್ಮ ಮಾತೃಭಾಷೆಗೆ ಕುತ್ತು ಎದುರಾಗಿದೆ. ಕಲಿಯುವುದಕ್ಕೆ ಎಲ್ಲ ಭಾಷೆಗಳ ಅಗತ್ಯವಿದೆಯಾದರೂ ಮಾತೃಭಾಷೆಯನ್ನು ಕಡೆಗಣಿಸದೆ ಮಹತ್ವ ನೀಡಬೇಕು ಎಂದು ಹೇಳಿದರು.

ರಾಷ್ಟ್ರಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ಶ್ರುತಿ ಮಳ್ಳಪ್ಪಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ   ಮಾತನಾಡಿದರು. ಇದೇ ಸಂದರ್ಭದಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಾದ ಶರಣಬಸವ ಬೊಮ್ಮನಾಳ, ಸವಿತಾ ಅಯ್ಯನಗೌಡರ, ಶಿವರಾಜ ಹೊಕ್ರಾಣಿ ಅವರಿಗೆ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಯಿತು.

ADVERTISEMENT

ಗ್ರೇಡ್‌ 2 ತಹಶೀಲ್ದಾರ್ ಮುರಳೀಧರ ಮುಕ್ತೆದಾರ, ಕಾರ್ಯನಿರ್ವಹಣಾಧಿಕಾರಿ ನಿಂಗಪ್ಪ ಮಸಳಿ, ಸರ್ಕಲ್‌ ಇನ್‌ಸ್ಪೆಕ್ಟರ್ ಯಶವಂತ ಬಿಸನಹಳ್ಳಿ, ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ ಇತರರು ಇದ್ದರು.

ಶಿಕ್ಷಕರಾದ ನಾಗಪ್ಪ ಬಿಳಿಯಪ್ಪನವರ, ಶರಣಪ್ಪ ತೆಮ್ಮಿನಾಳ ನಿರೂಪಿಸಿದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಂತರ ಪ್ರಮುಖ ಬೀದಿಗಳ ಮೂಲಕ ಕಾರ್ಗಿಲ್ ಯೋಧ ಮಲ್ಲಯ್ಯ ವೃತ್ತದವರೆಗೆ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ನಡೆಯಿತು.

ಅದೇ ರೀತಿ ಕಾರ್ಗಿಲ್‌ ವೃತ್ತದಲ್ಲಿ ಡಾ.ರಾಜಕುಮಾರ ಅಭಿಮಾನಿಗಳ ಸಂಘದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಶಾಸಕ ದೊಡ್ಡನಗೌಡ ಕನ್ನಡ ಧ್ವಜಾರೋಹಣ ನೆರವೇರಿಸಿದರು.  ತಾಲ್ಲೂಕು ಪಂಚಾಯಿತಿಯಲ್ಲಿ ನಿಂಗಪ್ಪ ಮಸಳಿ, ಪುರಸಭೆಯಲ್ಲಿ ಧರಣೇಂದ್ರಕುಮಾರ, ಎಪಿಎಂಸಿಯಲ್ಲಿ ಕಾರ್ಯದರ್ಶಿ ನೀಲಪ್ಪ ಶೆಟ್ಟರ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸಾರಿಗೆ ಸಂಸ್ಥೆ ಘಟಕದ ಬಸ್‌ ಅನ್ನು ಸಿಬ್ಬಂದಿ ಕನ್ನಡ ರಾಜ್ಯೋತ್ಸವದ ನಿಮಿತ್ತ ಸಿಂಗರಿಸಿದ್ದು ಗಮನಸೆಳೆಯಿತು. ಅಕನ್ನಡದ ಅಭಿಮಾನಿ ಶರಣಪ್ಪ ಹೂಗಾರ ಅವರ ನಿವಾಸದಲ್ಲಿ ತಹಶೀಲ್ದಾರ್ ಶ್ರುತಿ ಅವರು ಧ್ವಜಾರೋಹಣ ನೆರವೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.