ಕೊಪ್ಪಳ: ಇಲ್ಲಿನ ಗವಿಮಠದ ಆವರಣದಲ್ಲಿ ಪತಿಯೇ ಪತ್ನಿಯ ಮೇಲೆ ಚಾಕು ಇರಿದಿದ್ದು ಮಹಿಳೆ ಮೃತಪಟ್ಟಿದ್ದಾಳೆ.
ತುಮಕೂರು ಜಿಲ್ಲೆಯ ತುರವೇಕೇರೆ ಬಳಿಯ ಭುವನಹಳ್ಳಿಯ ಗೀತಾ ರಾಜೇಶ್ (25) ಮೃತಪಟ್ಟವರು. ಮಠದ ಆವರಣದಲ್ಲಿ ಜಾತ್ರೆಯ ಸಂಭ್ರಮ ಮನೆ ಮಾಡಿದ್ದು ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು. ಗೀತಾ ಹಾಗೂ ರಾಜೇಶ್ ನಡುವೆ ಹಿಂದೆಯೂ ಅನೇಕ ಬಾರಿ ವೈಮನಸ್ಸು ಉಂಟಾಗಿತ್ತು. ಇವರು ಇಲ್ಲಿ ಜಾತ್ರೆಯಲ್ಲಿ ಸ್ಟೀಲ್ ಸಾಮಗ್ರಿ ಮಾರಾಟ ಮಾಡಲು ಬಂದಿದ್ದರು. ಶನಿವಾರ ಇಬ್ಬರ ನಡುವಿನ ಜಗಳ ತಾರಕಕ್ಕೆ ಎರಿತ್ತು.
ಘಟನೆ ನಡೆದಾಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಮಠದ ಸಮೀಪದಲ್ಲಿಯೇ ಇದ್ದರು.
ಮಾಧ್ಯಮಗಳಿಗೆ ಮಾಹಿತಿ ನೀಡಿದ ಅರಸಿದ್ದಿ 'ಅಕ್ರಮ ಸಂಬಂಧದ ಶಂಕೆ ಹಾಗೂ ಪತ್ನಿಯ ಮೇಲೆ ಪದೇ ಪದೇ ಸಂಶಯ ಪಡುತ್ತಿದ್ದ ಎಂದು ಕುಟುಂಬದವರು ಆರೋಪಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು‘ ಎಂದರು. ಇವರು ಆರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು.
ಕುಟುಂಬದ ಸಂಬಂಧಿಯೊಬ್ಬರು ’ರಾಜೇಶ್ ಯಾವಾಗಲೂ ಕುಡಿದು ಪತ್ನಿ ಜೊತೆ ಗಲಾಟೆ ಮಾಡುತ್ತಿದ್ದ. ಅನೇಕ ಬಾರಿ ಬುದ್ಧಿವಾದ ಹೇಳಿದರೂ ಕೇಳಿರಲಿಲ್ಲ’ ಎಂದರು. ಈ ಕುರಿತು ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.