ಕುಕನೂರು: ರೈತ ವರ್ಗದಲ್ಲಿ ಮಣ್ಣೆತ್ತಿನ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ರೈತಮಿತ್ರ ಎಂದು ಕರೆಯಲಾಗುವ ಎತ್ತುಗಳ ಹೆಸರಿನಲ್ಲಿ ಈ ಹಬ್ಬ ಆಚರಿಸುವುದು ಎಂದರೆ ಕೃಷಿ ಕುಟುಂಬದವರಿಗೆ ಎಲ್ಲಿಲ್ಲದ ಹಿಗ್ಗು.
ಮಣ್ಣೆತ್ತು, ಗುಳ್ಳವ್ವ, ನಾಗಪ್ಪ, ಗಣಪತಿ ಹಾಗೂ ಜೋಕುಮಾರ; ಈ ಐದು ಹಬ್ಬಗಳಲ್ಲಿ ರೈತರು ಮಣ್ಣಿನ ಮೂರ್ತಿಗಳಿಗೆ ಪೂಜೆ ಮಾಡುತ್ತಾರೆ. ಮಣ್ಣು ಹಾಗೂ ಎತ್ತು ಅನ್ನದಾತನ ಬದುಕಿನಲ್ಲಿ ಮಹತ್ವದ ಸ್ಥಾನ ವಹಿಸುತ್ತವೆ. ಭೂತಾಯಿ ರೂಪವಾದ ಮಣ್ಣು ಹಾಗೂ ಬೇಸಾಯಕ್ಕೆ ಹೆಗಲು ಕೊಡುವ ಮಿತ್ರ ಎತ್ತು ಇವೆರಡರ ಸಂಗಮವಾದ ಮಣ್ಣೆತ್ತನ್ನು ಪೂಜಿಸುವ ಸಂಪ್ರದಾಯ ಬೆಳೆದುಬಂದಿದೆ. ಮಣ್ಣೆತ್ತಿನ ಪೂಜೆ ಮಾಡಿದರೆ ರೈತರ ಬದುಕು ಹಸನಾಗುತ್ತದೆ. ಮಳೆ-ಬೆಳೆ ಚೆನ್ನಾಗಿ ಆಗುತ್ತದೆ ಎಂಬ ನಂಬಿಕೆ ಗ್ರಾಮೀಣ ಭಾಗದಲ್ಲಿದೆ.
ಪ್ರತಿ ವರ್ಷ ಮುಂಗಾರು ಹಂಗಾಮು ಆರಂಭವಾದ ನಂತರ ಬರುವ ಮೊದಲ ಹಬ್ಬವೇ ಮಣ್ಣೆತ್ತಿನ ಅಮಾವಾಸ್ಯೆ. ಇದಕ್ಕೂ ಮೊದಲು ಬರುವ ಕಾರಹುಣ್ಣಿಮೆ ಸಂದರ್ಭದಲ್ಲಿ ಎತ್ತುಗಳನ್ನು ಸಿಂಗರಿಸಿ ಮೆರವಣಿಗೆ ಮಾಡುವ ರೈತರು, ಮಣ್ಣೆತ್ತಿನ ಅಮಾವಾಸ್ಯೆ ದಿನ ತಮ್ಮ ಹೊಲಗಳಿಂದ ಮಣ್ಣು ತಂದು ಅದರಲ್ಲೇ ಬಸವನ ಮೂರ್ತಿಗಳನ್ನು ಮಾಡಿ ಪೂಜಿಸುತ್ತಾರೆ.
ಈ ಹೊತ್ತಲ್ಲಿ, ಹೊಲದಲ್ಲಿ ಮುಂಗಾರು ಬೆಳೆಗಳು ತಕ್ಕಮಟ್ಟಿಗೆ ಬೆಳೆದು ನಿಂತಿರುತ್ತವೆ. ಮಳೆ-ಬೆಳೆ ಇನ್ನಷ್ಟು ಉತ್ತಮವಾಗಿ ಬರಲಿ, ಮನೆಯಲ್ಲಿ ಧಾನ್ಯಗಳ ಕಣಜವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಮಣ್ಣಿನ ಬಸವಣ್ಣನಿಗೆ ಪೂಜೆ ಸಲ್ಲಿಸಲಾಗುತ್ತದೆ.
ಹೊಲದಲ್ಲಿ ಸದಾಕಾಲ ದುಡಿದು ಬಸವಳಿದ ಎತ್ತುಗಳಿಗೆ ಈ ದಿನ ವಿಶ್ರಾಂತಿ ನೀಡಲಾಗುತ್ತದೆ. ರೈತ ಕುಟುಂಬಗಳ ಮನೆಯಲ್ಲಿ ತರಹೇವಾರಿ ಭಕ್ಷ್ಯಗಳನ್ನು ತಯಾರಿಸಿ ಮಣ್ಣೆತ್ತಿಗೆ ನೈವೇದ್ಯ ಮಾಡಲಾಗುತ್ತದೆ.
ಅಮಾವಾಸ್ಯೆ ದಿನ ಪೂಜೆ ಮಾಡಿದ 8 ಎತ್ತುಗಳನ್ನು ಮರುದಿನ ಬೆಳಗ್ಗೆ ಮಕ್ಕಳು ಮಣೆಯ ಮೇಲೆ ಕೂಡಿಸಿಕೊಂಡು ಪ್ರತಿ ಮನೆಮನೆಗೆ ತೆರಳಿ ಎಂಟತ್ನಲ್ಲಿ ಕುಂಟೆತ್ತು ಬಂದೈತೆ ಬಸವ ಏನಂದ ಹಿಂಗಾರಿ ಮುಂಗಾರಿ ಬೆಳೆ ಎಂದ ಎಂಬ ಹಾಡನ್ನು ಹಾಡುತ್ತ ಜೋಳ, ಅಕ್ಕಿ ದವಸ ಧಾನ್ಯಗಳನ್ನ ಪಡೆದು ಗ್ರಾಮದ ಹಳ್ಳದ ದಂಡೆಗೆ ಹೋಗಿ ಮಣ್ಣಿನ ಎತ್ತುಗಳನ್ನು ಪೂಜೆ ಮಾಡಿ ಸಂಗಟಿ ಸಾರನ್ನು ಊಟ ಮಾಡಿ ಬರುವುದು ವಾಡಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.