ಕುಕನೂರು: ಪಟ್ಟಣದ 18ನೇ ವಾರ್ಡ್‌ನಲ್ಲಿ ₹1 ಕೋಟಿ ವೆಚ್ಚದಲ್ಲಿ ಸುಮಾರು 7 ವರ್ಷಗಳ ಹಿಂದೆ ನಿರ್ಮಾಣವಾದ ಬಾಲಭವನ ಕಟ್ಟಡವು ಪಾಳುಬಿದ್ದಿದೆ. ಅಗತ್ಯ ಉದ್ದೇಶಕ್ಕೆ ಬಳಕೆಯಾಗದೇ ಸರ್ಕಾರದ ಹಣ ಪೋಲಾಗುತ್ತಿದೆ.
ಮಕ್ಕಳಲ್ಲಿ ಸೃಜನಶೀಲತೆಯನ್ನು ಹೆಚ್ಚಿಸಲು ಸಂಗೀತ, ನೃತ್ಯ, ಚಿತ್ರಕಲೆ, ಕಂಪ್ಯೂಟರ್ ಜ್ಞಾನ ಬೆಳೆಸಲು, ವಿಜ್ಞಾನ ಸೇರಿದಂತೆ ಪಠ್ಯೇತರ ಚಟುವಟಿಕೆ ನಡೆಸಲು ಬಾಲಭವನ ಬಳಕೆಯಾಗುತ್ತದೆ.
ಸಂಗೊಳ್ಳಿ ರಾಯಣ್ಣ ನಗರದಲ್ಲಿ 2017–18ನೇ ಸಾಲಿನ ಖನಿಜ ಪ್ರತಿಷ್ಠಾನ ನಿಧಿ ಯೋಜನೆ ಅಡಿಯಲ್ಲಿ ನಿರ್ಮಾಣವಾಗಿರುವ ಈ ಕಟ್ಟಡವು ಅಂದಿನಿಂದ ಇಂದಿನವರೆಗೂ ಬಳಕೆಯಾಗಿಲ್ಲ. ಜನಪ್ರತಿನಿಧಿಗಳ ಬೇಜಾಬ್ದಾರಿತನ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಸಾರ್ವ ಜನಿಕರು ಹಿಡಿಶಾಪ ಹಾಕುವಂತಾಗಿದೆ.
ಬೇಸಿಗೆ ಸಮಯದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ 6ರಿಂದ 16 ವರ್ಷದೊಳಗಿನ ಮಕ್ಕಳಿಗೆ ಸಂಗೀತ, ನೃತ್ಯ, ಚಿತ್ರಕಲೆ, ಕಂಪ್ಯೂಟರ್ ಜ್ಞಾನ, ವಿಜ್ಞಾನ, ಒಳ ಆಟಗಳು, ಮಕ್ಕಳ ಮನರಂಜನೆಯ ಕುರಿತಾದ ವಿಶೇಷ ತರಬೇತಿ ಶಿಬಿರಗಳ ಆಯೋಜನೆ, ಅಂಗನವಾಡಿ ಆಶಾ ಕಾರ್ಯಕರ್ತೆಯರಿಗೆ ಸಭೆ ಮತ್ತು ಸಮಾರಂಭ ಆಯೋಜಿಸಲು ಹಾಗೂ ಚಿಕ್ಕ ಮಕ್ಕಳ ಬೌದ್ಧಿಕ ಬೆಳವಣಿಗೆ ಆಗಲಿ ಎಂಬ ಉದ್ದೇಶದೊಂದಿಗೆ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಟ್ಟಡಗಳನ್ನೇನೋ ನಿರ್ಮಿಸುತ್ತಿದೆ. ಆದರೆ ಅದರ ಉದ್ದೇಶ ಸಾಕಾರಗೊಳ್ಳದೆ, ಬಾಲಭವನ ಬಳಕೆ ಇಲ್ಲದೆ ಕಟ್ಟಡಕ್ಕೆ ಬೀಗ ಹಾಕಲಾಗಿದೆ.
ನೂತನ ತಾಲ್ಲೂಕು ಕೇಂದ್ರ ಆಗಿರುವುದರಿಂದ ಸರ್ಕಾರಿ ಕಚೇರಿಗಳಿಗೆ ಕಟ್ಟಡಗಳ ಕೊರತೆ ಉಂಟಾಗುತ್ತಿದೆ. ತಹಶೀಲ್ದಾರ್ ಕಚೇರಿಯು ತಾತ್ಕಾಲಿಕವಾಗಿ ಸಮುದಾಯ ಭವನದ ಕಟ್ಟಡಗಳಲ್ಲಿ ನಡೆಯುತ್ತಿದೆ. ಆದರೆ ಇಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾದರೂ ವರ್ಷಗಳಿಂದ ಬಳಕೆಯಾಗದೆ ಉಳಿದಿದೆ.
ಈಗಿನ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಶಾಸಕ ಬಸವರಾಜ ರಾಯರಡ್ಡಿ, ಅವಧಿಯಲ್ಲಿ ಮಂಜೂರಾಗಿ ಈ ಕಟ್ಟಡ ನಿರ್ಮಾಣವಾಗಿದೆ. ಪ್ರಸ್ತುತ ಶಾಸಕರೂ ಆಗಿರುವ ರಾಯರಡ್ಡಿ ಅವರು ಇತ್ತ ಕಡೆ ಗಮನಹರಿಸಿ ಸುಸಜ್ಜಿತ ಕಟ್ಟಡವನ್ನು ಸದುದ್ದೇಶಕ್ಕೆ ಬಳಕೆಯಾಗುವಂತೆ ಕ್ರಮ ವಹಿಸಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.