ADVERTISEMENT

ಕುಂಬಾರರಿಗೆ ಅನ್ನ ನೀಡುವ ಒಲೆ

ಮಡಿಕೆ ತಯಾರಿಕೆ ಕೈ ಬಿಟ್ಟು ಹೊಟ್ಟೆ ತುಂಬಿಸುವುದಕ್ಕಾಗಿ ಒಲೆ ತಯಾರಿಕೆ

ಕಿಶನರಾವ್‌ ಕುಲಕರ್ಣಿ
Published 18 ಜನವರಿ 2023, 5:19 IST
Last Updated 18 ಜನವರಿ 2023, 5:19 IST
ಹನುಮಸಾಗರದ ಕುಂಬಾರ ಓಣಿಯಲ್ಲಿ ಒಣಗಲು ಹಾಕಿರುವ ಮಣ್ಣಿನ ಒಲೆಗಳು
ಹನುಮಸಾಗರದ ಕುಂಬಾರ ಓಣಿಯಲ್ಲಿ ಒಣಗಲು ಹಾಕಿರುವ ಮಣ್ಣಿನ ಒಲೆಗಳು   

ಹನುಮಸಾಗರ: ಕುಂಬಾರರು ಹೊಸ ಕಾಲಮಾನಕ್ಕೆ ತಕ್ಕಂತೆ ತಮ್ಮ ವೃತ್ತಿಯಲ್ಲೂ ಬದಲಾವಣೆ ಕಂಡುಕೊಂಡಿದ್ದಾರೆ. ಮಡಿಕೆ ತಯಾರಿಕೆಯನ್ನು ಕೈ ಬಿಟ್ಟು ಹೊಟ್ಟೆ ತುಂಬಿಸುವುದಕ್ಕಾಗಿ ಮಣ್ಣಿನ ಒಲೆ ತಯಾರಿಕೆಯಲ್ಲಿಯೇ ತೊಡಗಿರುವುದು ಕಂಡು ಬರುತ್ತಿದೆ.

ಪ್ಲಾಸ್ಟಿಕ್, ಸ್ಟೀಲ್ ಕೊಡಗಳ ಹಾವಳಿಯಿಂದ ಇಲ್ಲಿನ ಕುಂಬಾರರು ತತ್ತರಿಸಿದ್ದಾರೆ.

‘ಈಗ ನಮ್ಮ ಮಣ್ಣಿನ ಕೊಡಗಳ ಬೇಡಿಕೆ ಕುಗ್ಗಿ ಹೋಗೈತ್ರಿ, ತಲಿಮ್ಯಾಗ ಹೊತ್ತು ಮಾರಿದ್ರೂ ಒಂದೊತ್ತು ಹೊಟ್ಟಿ ತುಂಬಂಗಿಲ್ಲ. ಅದ ಮಣ್ಣಿನ ಒಲಿ ಮಾಡಿ ಮಾರಿದ್ರ ಕುಟುಂಬ ನಡಿತೈತೆ’ ಎಂದು ಶಾಂತವ್ವ, ಈರಪ್ಪ ಹಾಗೂ ಜಗದೀಶ ಕುಂಬಾರರಂತೆ ಪ್ರತಿಯೊಬ್ಬರೂ ಹೇಳುತ್ತಾರೆ.

ADVERTISEMENT

ಅನಾದಿ ಕಾಲದಿಂದ ಮಡಿಕೆ ತಯಾರಿಸಿಕೊಂಡು ಬರುತ್ತಿರುವ ಇಲ್ಲಿನ 15ಕ್ಕೂ ಹೆಚ್ಚು ಕುಟುಂಬಗಳು ಈಗ ಮಣ್ಣಿನ ಒಲೆ ತಯಾರಿಸುವುದರಲ್ಲಿ ಮಗ್ನವಾಗಿವೆ.

ಗ್ರಾಮೀಣ ಪ್ರದೇಶದ ಜನರು ಈ ಹೈಟೆಕ್ ಯುಗದಲ್ಲೂ ಮಣ್ಣಿನ ಒಲೆಯ ಮೇಲೆ ಅಡುಗೆ ಬೇಯಿಸುವುದನ್ನು ಬಿಟ್ಟಿಲ್ಲ. ಅಲ್ಲದೆ, ಹೊಲ ಗದ್ದೆಗಳಲ್ಲಿ, ಬಯಲು ಪ್ರದೇಶದಲ್ಲಿ ವಾಸವಿರುವವರು, ಗುಡಿ ಗುಂಡಾರಗಳ ಆವರಣದಲ್ಲಿ ನೆಲೆಸಿರುವವರಿಗೆ, ಅಲೆಮಾರಿ ಜನಾಂಗದವರಿಗೆ ಈ ಮಣ್ಣಿನ ಒಲೆಗಳು ಅವಶ್ಯವಾಗಿ ಬೇಕಾಗುವುದರಿಂದ ಮಣ್ಣಿನ ಒಲೆಗಳಿಗೆ ಬೇಡಿಕೆ ಉಳಿಯಲು ಕಾರಣವಾಗಿದೆ.

ಇದೆಲ್ಲದರ ಜತೆಗೆ ಜಾತ್ರೆಗಳಂತಹ ಸಂದರ್ಭದಲ್ಲಿ ಸೇರಿರುವ ಸಾವಿರಾರು ಜನರು ತಾತ್ಕಾಲಿಕವಾಗಿ ಆ ಸ್ಥಳದಲ್ಲಿ ಉಳಿದುಕೊಂಡು ಅಡುಗೆ ಮಾಡಿಕೊಳ್ಳಲು ಕುಂಬಾರರ ಈ ಮಣ್ಣಿನ ಒಲೆಗಳನ್ನು ಬಳಸುತ್ತಾರೆ. ಈ ಎಲ್ಲ ಕಾರಣಗಳಿಂದ ಮಣ್ಣಿನ ಒಲೆಯ ಬೇಡಿಕೆ ಹೆಚ್ಚಾಗಿದೆ. ಮಡಿಕೆಯ ಬೇಡಿಕೆ ಮಾಯವಾಗಿದೆ ಎಂದು ಈರಪ್ಪ ಕುಂಬಾರ ಹೇಳುತ್ತಾರೆ.

ಕುಂಬಾರ ಓಣಿಯಲ್ಲಿ ಹೋದರೆ ಕಾಲೂರಲು ಕೂಡ ಜಾಗವಿಲ್ಲದಂತೆ ಮನೆಯ ಮುಂದೆ, ಕಟ್ಟೆಯ ಮೇಲೆ, ಮರದ ಕೆಳಗಡೆ ಹಸಿ ಒಲೆಗಳನ್ನು ನೆರಳಲ್ಲಿ ಒಣಗಲು ಇಟ್ಟಿರುವುದು ಕಾಣು ಸಿಗುತ್ತದೆ. ಈ ಹಿಂದೆ ಕೈಯಿಂದಲೇ ಮಣ್ಣಿನ ಒಲೆಗಳನ್ನು ತಯರಿಸುತ್ತಿದ್ದರು. ಆದರೆ ಈಗ ಅದಕ್ಕೂ ಅಚ್ಚು ಬಂದಿರುವುದರಿಂದ ಕುಂಬಾರರ ಕೆಲಸವೀಗ ಕೊಂಚ ಸರಳವಾಗಿದೆ.

ಮುದ್ದೆಯ ಹಾಗೆ ಮಣ್ಣು ತಯಾರಿಸಿಕೊಂಡು ಅಚ್ಚಿಗೆ ಹಾಕಿ ತಿಕ್ಕಿ ಮೆಲ್ಲಗೆ ಅಚ್ಚು ಮೇಲಕ್ಕೆ ಎತ್ತಿದರೆ ಒಳಗಡೆ ಹಸಿ ಒಲೆ ತಯಾರಾಗಿರುತ್ತದೆ. ನವೀರಾಗಿ ಆ ಒಲೆ ಎತ್ತಿ ನೆರಳಿಗೆ ಇಡುತ್ತಾರೆ. ಸುಮಾರು 15 ದಿನಗಳವರೆಗೆ ನೆರಳಲ್ಲಿ ಆರಿಸಿ ಭಟ್ಟಿಗೆ ಹಾಕಿ ಸುಡುತ್ತಾರೆ. ಭಟ್ಟಿ ಆರಿದ ನಂತರ ಮಾರುಕಟ್ಟೆಗೆ ಒಲೆಗಳನ್ನು ವಾಹನಗಳ ಮೂಲಕ ಸಾಗಿಸುತ್ತಾರೆ.

ಹೀಗೆ ಮನೆಗೆ ಬಂದ ಮಣ್ಣು ಒಲೆಯಾಗಿ ಮಾರುಕಟ್ಟೆಗೆ ಸಾಗಲು ಕನಿಷ್ಠ ಪಕ್ಷ ಒಂದು ತಿಂಗಳು ಬೇಕಾಗುತ್ತದೆ. ಕುಟುಂಬದಲ್ಲಿ ನಾಲ್ಕಾರು ಜನರು ಇದ್ದರೆ ದಿನಕ್ಕೆ 50 ಒಲೆಗಳನ್ನು ತಯಾರಿಸಬಹುದು. ಆದರೆ ತಯಾರಿಸಿದ ಮಣ್ಣಿನ ಒಲೆಗಳನ್ನು ಆರಲು ಇಡುವುದಾದರು ಎಲ್ಲಿ ಎಂಬ ಸಮಸ್ಯೆ ಉದ್ಭವವಾಗುವುದರಿಂದ ತಯಾರಾಗಿರುವ ಒಲೆಗಳು ಖಾಲಿಯಾಗುತ್ತಿದ್ದಂತೆ ಮತ್ತೆ ಪುನಃ ತಯಾರಿಸಲು ತೊಡಗುತ್ತಾರೆ. ಆದಾಗ್ಯೂ ಏರಿದ ಕೆರೆ ಮಣ್ಣಿನ ಬೆಲೆ, ಕಟ್ಟಿಗೆಯ ಬೆಲೆ, ಮಣ್ಣಿಗೆ ಸೇರಿಸುವ ಕಟುಗದ ಬೆಲೆ, ಸಾಗಾಣಿಕೆ ಮಾಡಲು ವಾಹನದ ಬಾಡಿಗೆ ಹೀಗೆ ಪ್ರತಿಯೊಂದು ಬೆಲೆ ಹೆಚ್ಚಿಸಿಕೊಂಡ ಕಾರಣವಾಗಿ ಹೇಳಿಕೊಳ್ಳುವಂತಹ ಲಾಭವೇನೂ ಇವರಿಗೆ ದಕ್ಕುವುದಿಲ್ಲ. ಮಣ್ಣಿನ ಒಲೆಯಿಂದ ಹೊಟ್ಟೆ ತುಂಬುತ್ತದೆ ಎಂಬುದು ಕುಂಬಾರರ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.