ADVERTISEMENT

ಕುಷ್ಟಗಿ–ಬೆಂಗಳೂರು ರೈಲು ಸೇವೆ ಪರಿಶೀಲನೆ

ರೈಲ್ವೆ ಹೋರಾಟ ಸಮಿತಿ ನಿಯೋಗಕ್ಕೆ ಸಚಿವ ವಿ.ಸೋಮಣ್ಣ ಭರವಸೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 14:05 IST
Last Updated 13 ಜೂನ್ 2025, 14:05 IST
ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯವರು ಗುರುವಾರ ಹುಬ್ಬಳ್ಳಿಯಲ್ಲಿ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು
ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯವರು ಗುರುವಾರ ಹುಬ್ಬಳ್ಳಿಯಲ್ಲಿ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು   

ಕುಷ್ಟಗಿ: ಯಶವಂತಪುರ, ಬೆಂಗಳೂರು, ಹೊಸಪೇಟೆ ಹಾಗೂ ಹೊಸಪೇಟೆ ಹರಿಹರ ರೈಲುಗಳ ಸಂಚಾರವನ್ನು ಕುಷ್ಟಗಿವರೆಗೆ ವಿಸ್ತರಿಸುವ ವಿಷಯ ಪರಿಶೀಲನೆ ಹಂತದಲ್ಲಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ ಎಂದು ತಿಳಿಸಲಾಗಿದೆ.

ಈ ಕುರಿತು ಗುರುವಾರ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿ ರೈಲು ನಿಲ್ದಾಣದಲ್ಲಿ ಸಚಿವರನ್ನು ಭೇಟಿ ಮಾಡಿದ ನಿಯೋಗ ಮನವಿ ಸಲ್ಲಿಸಿದ್ದು ನೂತನ ರೈಲು ಸಂಚಾರ ಸೇವೆಗಳಿಗೆ ಸಂಬಂಧಿಸಿದ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ ಎಂದು ಇಲ್ಲಿಯ ರೈಲ್ವೆ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ವೀರೇಶ ಬಂಗಾರಶೆಟ್ಟರ ವಿವರಿಸಿದರು.

ಕುಷ್ಟಗಿಯಿಂದ ಯಶವಂತಪುರ, ಬೆಂಗಳೂರುವರೆಗೆ ರೈಲು ಸಂಚಾರ ಸೇವೆ ವಿಷಯಕ್ಕೆ ಸಂಬಂಧಿಸಿದಂತೆ ಸಾಧಕ ಬಾಧಕಗಳ ಬಗ್ಗೆ ಪರಿಶೀಲನೆ ನಡೆಸಿ ಎರಡು ವಾರಗಳಲ್ಲಿ ನಿರ್ಧರಿಸಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು ಎಂದೂ ಬಂಗಾರಶೆಟ್ಟರ ಹೇಳಿದರು.

ADVERTISEMENT

ಗದಗ– ವಾಡಿ ರೈಲು ಮಾರ್ಗದಲ್ಲಿ ಒಂದು ರೈಲು ಮಾತ್ರ ಹುಬ್ಬಳ್ಳಿ–ಕುಷ್ಟಗಿ ಮಧ್ಯೆ ಸಂಚರಿಸುತ್ತಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿತ್ಯ ನೂರಾರು ಪ್ರಯಾಣಿಕರು ಕುಷ್ಟಗಿಯಿಂದಲೇ ಸಂಚರಿಸುತ್ತಿದ್ದಾರೆ. ಹಾಗಾಗಿ ಇಲ್ಲಿಂದ ಯಶವಂತಪುರ ಬೆಂಗಳೂರುವರೆಗೂ ರೈಲು ಸೇವೆ ಆರಂಭಗೊಂಡರೆ ಈ ಭಾಗದ ಜನರಿಗೆ ಅನುಕೂಲವಾಗುತ್ತದೆ. ಅಲ್ಲದೆ ಈ ಪ್ರದೇಶದ ಅಭಿವೃದ್ಧಿಗೂ ಪೂರಕವಾಗುತ್ತದೆ ಎಂಬುದು ಈ ಭಾಗದ ಜನರ ಆಶಯವಾಗಿದ್ದು ಈ ಬಗ್ಗೆ ಶೀಘ್ರದಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ರೈಲ್ವೆ ಹೋರಾಟ ಸಮಿತಿಯವರು ಸಚಿವ ಸೋಮಣ್ಣ ಅವರಿಗೆ ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ.

ಇದೇ ಸಂದರ್ಭದಲ್ಲಿ ಹಾಜರಿದ್ದ ಕುಷ್ಟಗಿ ನರಗುಂದ ಘಟಪ್ರಭ ನೂತನ ರೈಲು ಮಾರ್ಗದ ಹೋರಾಟ ಸಮಿತಿ ಅಧ್ಯಕ್ಷ ಚನ್ನಬಸಪ್ಪ ನಂದಿ, ಆರ್‌.ಕೆ.ಕದಂ ಇತರರು ಈ ಮಾರ್ಗದ ಸಮೀಕ್ಷೆಗೆ ಮುಂದಾಗುವಂತೆ ಪ್ರತ್ಯೇಕ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರೈಲ್ವೆ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ವೀರೇಶ ಬಂಗಾರಶೆಟ್ಟರ, ಎಸ್‌.ಎನ್‌.ಘೋರ್ಪಡೆ, ಮಹಾಂತೇಶ ಮಂಗಳೂರು, ಮಂಜುನಾಥ ಮಹಾಲಿಂಗಪುರ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.