ಕುಷ್ಟಗಿ: ಪಟ್ಟಣದಲ್ಲಿ ಎರಡು ವಾರಗಳ ಹಿಂದಷ್ಟೇ ರೈಲ್ವೆ ಸಚಿವ ವಿ.ಸೋಮಣ್ಣ ಅವರಿಂದ ಉದ್ಘಾಟನೆಗೊಂಡಿರುವ ರೈಲು ನಿಲ್ದಾಣ ಕೆಲ ದಿನಗಳಲ್ಲೇ ಕಿಡಿಗೇಡಿಗಳ ತಾಣವಾಗಿದೆ. ವಿಕೃತ ಮನಸ್ಸುಗಳು ತಮ್ಮ ಕೈಚಳಕ ತೋರಿದ್ದರಿಂದ ಮೂಗು ಮುಚ್ಚಿಕೊಂಡು ಹೋಗುವಷ್ಟರ ಮಟ್ಟಿಗೆ ಅಂದೆಗಟ್ಟಿದೆ.
ಪ್ಲಾಟ್‌ಫಾರ್ಮ್, ಮೆಟ್ಟಿಲು, ಜನರು ಕೂರುವ ಸ್ಥಳ ಸೇರಿ ಎಲ್ಲೆಡೆ ಗುಟ್ಕಾ, ಪಾನಬೀಡಾ ಜಿಗಿದು ಉಗುಳುವುದಕ್ಕೆ ಕಿಡಿಗೇಡಿಗಳು ಎಲ್ಲ ಜಾಗ ಬಳಕೆ ಮಾಡಿಕೊಂಡಿದ್ದಾರೆ. ಎಲ್ಲೆಂದರಲ್ಲಿ ಊಟ, ಉಪಹಾರ ಸೇವಿಸಿದ ನಂತರ ಉಳಿದ ಆಹಾರದ ತ್ಯಾಜ್ಯದ ಖಾಲಿ ಪಾಕೆಟ್‌ಗಳು, ಗುಟ್ಕಾ ಚೀಟು, ಸಿಗರೇಟ್, ನೀರಿನ ಬಾಟಲಿ ಸೇರಿ ಪ್ಲಾಸ್ಟಿಕ್ ತ್ಯಾಜ್ಯ ಕಣ್ಣಿಗೆ ರಾಚುತ್ತಿದ್ದು ಕೆಲವರು ನಿಲ್ದಾಣದ ಪ್ರದೇಶವನ್ನು ಸಾಧ್ಯವಾದಷ್ಟು ಹದಗೆಡಿಸಲು ಪ್ರಯತ್ನಿಸಿದ್ದಾರೆ.
ಸಿಬ್ಬಂದಿ ಹೇಳಿದ ಪ್ರಕಾರ ಹುಬ್ಬಳ್ಳಿವರೆಗೆ ಮಧ್ಯದಲ್ಲಿ ಬರುವ ಇತರೆ ಹೊಸ ಮತ್ತು ಹಳೆಯ ನಿಲ್ದಾಣಗಳಿಗೆ ಹೋಲಿಸಿದರೆ ಕುಷ್ಟಗಿಯ ನಿಲ್ದಾಣ ಸುಂದರವಾಗಿದೆ. ಬಹಳ ಜನರ ಪ್ರಯತ್ನದ ಫಲವಾಗಿ ಮತ್ತು ಸಾಕಷ್ಟು ಹಣ ಖರ್ಚುಮಾಡಿ, ಶ್ರಮವಹಿಸಿ ಕಟ್ಟಿರುವ ನಿಲ್ದಾಣದ ಸೌಂದರ್ಯ ಹಾಳಾಗದಂತೆ ಉಳಿಸಿಕೊಳ್ಳುವ ಜವಾಬ್ದಾರಿ ಜನರದು ಎನ್ನುತ್ತಾರೆ. ಇಲ್ಲಿಯ ಜನರಿಗೆ ಅಪರೂಪ ಎನಿಸಿದ್ದ ರೈಲು ನಿಲ್ದಾಣ ವೀಕ್ಷಣೆಗೆ ಬರುವ ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳಿಗೆ ಕಿಡಿಗೇಡಿಗಳ ಕಾಟ ಬೇಸರ ತರಿಸಿದೆ ಎನ್ನುತ್ತಾರೆ ಸಾರ್ವಜನಿಕರು.
ರಕ್ಷಣೆ ಇಲ್ಲ: ಕೇವಲ ಒಂದು ಬಾರಿ ಮಾತ್ರ ರೈಲು ಬಂದು ಹೋಗುವುದರಿಂದ ಇಲ್ಲಿ ತಾತ್ಕಾಲಿಕವಾಗಿ ಸ್ಟೇಶನ್ ಮಾಸ್ತರ್, ಪಾಯಿಂಟ್ ಮ್ಯಾನ್ ಹೊರತುಪಡಿಸಿ ಬೇರೆ ಸಿಬ್ಬಂದಿ ಇಲ್ಲ. ದೊಡ್ಡ ನಿಲ್ದಾಣವಾಗಿದ್ದು ಗಮನಿಸುವುದಕ್ಕೆ ಸಾಧ್ಯವಾಗಿಲ್ಲ. ರೈಲ್ವೆ ಇಲಾಖೆಯಿಂದ ಪೂರ್ಣಪ್ರಮಾಣದ ಸಿಬ್ಬಂದಿ ಮತ್ತು ರಕ್ಷಣಾ ಸಿಬ್ಬಂದಿ ಇಲ್ಲ, ಪೊಲೀಸರೂ ಇತ್ತ ಬರುವುದಿಲ್ಲ. ಈ ಕಾರಣಕ್ಕೆ ನಿಲ್ದಾಣದಲ್ಲಿ ಕಿಡಿಗೇಡಿಗಳಿಗೆ ಹೆದರಿಕೆ ಇಲ್ಲದಂತಾಗಿದೆ ಎಂದು ಮೂಲಗಳು ತಿಳಿಸಿವೆ.
ಮದ್ಯ, ಮಾದಕ ವ್ಯಸನಿಗಳ ಠಿಕಾಣಿ: ಹಗಲಿನಲ್ಲಿ ಬಾಲಕರು, ಯುವಕರು ಬೀಡು ಬಿಟ್ಟು ಮೊಬೈಲ್‌ಗಳಲ್ಲಿ ಕಾಲ ಕಳೆಯುತ್ತಿದ್ದರೆ, ಹೊತ್ತು ಇಳಿಯುತ್ತಿದ್ದಂತೆ ರೈಲು ನಿಲ್ದಾಣ ಮಾದಕ ವಸ್ತುಗಳ ವ್ಯಸನಿಗಳ ತಾಣವಾಗಿ ಪರಿವರ್ತನೆಗೊಳ್ಳುತ್ತದೆ. ಕೆಲವರು ಮದ್ಯ, ಮಾಂಸದ ಊಟದೊಂದಿಗೆ ಅಲ್ಲಿ ಬೀಡುಬಿಟ್ಟರೆ ಇನ್ನೂ ಕೆಲ ಯುವಕರಂತೂ ಗಾಂಜಾ ಸೇರಿದಂತೆ ಇತರೆ ಮಾದಕ ವಸ್ತುಗಳ ಸೇವೆನೆಯಲ್ಲಿ ತೊಡಗುವುದು ಸಾಮಾನ್ಯ ಸಂಗತಿಯಾಗಿದೆ.
ಇಂಥ ಕೃತ್ಯಕ್ಕೆ ಅಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಖಾಲಿ ಬಾಟಲಿ, ಪಾಕೆಟ್ ಇತರೆ ವಸ್ತುಗಳೇ ಸಾಕ್ಷಿ. ಇನ್ನು ಎರಡನೇ ಪ್ಲಾಟ್‌ಫಾಮ್‌ದಲ್ಲಿ ಯಾರೂ ಹೇಳುವವರು ಕೇಳುವವರೇ ಇರುವುದಿಲ್ಲ. ಯುವಕ ಯುವತಿಯರು ಯಾರ ಅಂಜಿಕೆ, ಅಳುಕಿಲ್ಲದೆ ಹರಟೆ ಹೊಡೆಯುತ್ತ ಕಾಲ ಕಳೆಯುವುದೂ ಸಾಮಾನ್ಯ ಕೆಲ ಜನರಂತೂ ಮಧ್ಯರಾತ್ರಿವರೆಗೂ ಇಲ್ಲಿಯೇ ಠಿಕಾಣಿ ಹೂಡಿರುತ್ತಾರೆ. ನಿಲ್ದಾಣದಲ್ಲಿ ತಂಗಿರುವ ರೈಲಿಗೆ ಧಕ್ಕೆ ಮಾಡಿಯಾರು ಎಂಬ ಕಾರಣಕ್ಕೆ ರಾತ್ರಿ ಬರುವ ರೈಲಿನ ಸಿಬ್ಬಂದಿ ಕಿಡಿಗೇಡಿಗಳನ್ನು ಹೊರಹಾಕುವುದಕ್ಕೆ ಪ್ರಯಾಸ ಪಡಬೇಕಾಗುತ್ತದೆ ಎಂಬುದು 'ಪ್ರಜಾವಾಣಿ' ಸ್ಥಳಕ್ಕೆ ಭೇಟಿ ನೀಡಿದಾಗ ತಿಳಿಯಿತು.
ರೈಲು ನಿಲ್ದಾಣದಲ್ಲಿ ಇನ್ನೂ ಕಾಮಗಾರಿ ನಡೆಯುತ್ತಿದೆ. ಈಗಲೇ ಕಿಡಿಕೇಡಿಗಳ ಹಾವಳಿ ಕಂಡುಬಂದಿದ್ದು ಪೊಲೀಸ್ ಠಾಣೆಗೆ ಪತ್ರ ಬರೆಯುತ್ತೇವೆ.ಅಶೋಕ ಮುದಗೌಡರ ಎಇಇ ನೈರುತ್ಯ ರೈಲ್ವೆ
ರೈಲ್ವೆ ಇಲಾಖೆಯಿಂದ ಬೇಡಿಕೆ ಬಂದರೆ ಪೊಲೀಸ್ (ಬೀಟ್) ಗಸ್ತು ವ್ಯವಸ್ಥೆಗೆ ಕ್ರಮ ಕೈಗೊಳ್ಳುತ್ತೇವೆ.ಹನುಮಂತಪ್ಪ ತಳವಾರ ಸಬ್ ಇನ್‌ಸ್ಪೆಕ್ಟರ್
ರೈಲು ನಿಲ್ದಾಣ ನಮ್ಮ ಹೆಮ್ಮೆಯ ತಾಣ ಅದನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯೂ ಹೌದು. ಬೇರೆ ಊರಿನವರು ಮೆಚ್ಚುಗೆ ವ್ಯಕ್ತಪಡಿಸುವಷ್ಟರ ಮಟ್ಟಿಗೆ ನೈರ್ಮಲ್ಯ ಉಳಿಸಿಕೊಳ್ಳಬೇಕಿದೆ.ಎಂ.ದೇವಪ್ಪ ಗ್ರಾಮೀಣ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.