ADVERTISEMENT

ಕುವೆಂಪು ರಾಷ್ಟ್ರದ ಶ್ರೇಷ್ಠ ಕವಿಗಳಲ್ಲಿ ಒಬ್ಬರು

ವಿಶ್ವ ಮಾನವ ದಿನಾಚರಣೆ: ಶಿಕ್ಷಕ ವೆಂಕಟೇಶ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 10:16 IST
Last Updated 30 ಡಿಸೆಂಬರ್ 2019, 10:16 IST
ಕುಕನೂರಿನ ಗವಿಶಿದ್ದೇಶ್ವರ ಪ್ರೌಢ ಶಾಲೆಯಲ್ಲಿ ಭಾನುವಾರ ಕುವೆಂಪು ಜನ್ಮ ದಿನಾಚರಣೆ ಆಚರಿಸಲಾಯಿತು
ಕುಕನೂರಿನ ಗವಿಶಿದ್ದೇಶ್ವರ ಪ್ರೌಢ ಶಾಲೆಯಲ್ಲಿ ಭಾನುವಾರ ಕುವೆಂಪು ಜನ್ಮ ದಿನಾಚರಣೆ ಆಚರಿಸಲಾಯಿತು   

ಕುಕನೂರು: ‘ರಾಷ್ಟ್ರ ಕಂಡ ಸರ್ವಶ್ರೇಷ್ಠ ಕವಿಗಳಲ್ಲಿ ಕುವೆಂಪು ಅವರು ಒಬ್ಬರಾಗಿದ್ದಾರೆ’ ಎಂದು ಮುಖ್ಯಶಿಕ್ಷಕ ವೆಂಕಟೇಶ ಬಂಡಿವಡ್ಡರ್ ಹೇಳಿದರು.

ಇಲ್ಲಿನ ಗವಿಸಿದ್ದೇಶ್ವರ ಪ್ರೌಢ ಶಾಲೆಯಲ್ಲಿ ಭಾನುವಾರ ಕುವೆಂಪು ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ವಿಶ್ವ ಮಾನವ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

ಕುವೆಂಪು ಅವರು ತಮ್ಮ ‌ಕೃತಿಗಳಲ್ಲಿ ವಿಶ್ವ ಮಾನವ ತತ್ವಗಳನ್ನು ಬಿತ್ತಿದ್ದಾರೆ. ಕನ್ನಡ ನಾಡಿಗೆ ಸುಂದರವಾದ ನಾಡಗೀತೆ‌ ಕೊಡುಗೆ ನೀಡಿದ್ದಾರೆ. ಎಲ್ಲ ಸಮುದಾಯದವರು ಒಂದೇ ಎನ್ನುವ ಮಾತನ್ನು ಕೂಡ ಹೇಳಿದ್ದಾರೆ ಎಂದು ತಿಳಿಸಿದರು.

ADVERTISEMENT

ರಾಷ್ಟ್ರಕವಿ ಕುವೆಂಪು ಅವರು ರಚಿಸಿರುವ ವಿಶ್ವದರ್ಜೆಯ ಸಾಹಿತ್ಯವನ್ನು ಪ್ರತಿಯೊಬ್ಬರು ಓದುವ ಮೂಲಕ ಆರೋಗ್ಯ ಪೂರ್ಣವಾದ ಸಮಾಜ ಸೃಷ್ಟಿಸಬೇಕು. ಅದು ಈಗಿನ ಅವಶ್ಯಕತೆಯಾಗಿದೆ ಎಂದರು.

ಶಿಕ್ಷಕ ಜಿ.ಎಂ ಹೊಸಮನಿ ಮಾತನಾಡಿ,‘ಕುವೆಂಪು ಅವರು ಕನ್ನಡ ಸಾರಸ್ವತ ಲೋಕಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. 23 ಕವನ ಸಂಕಲನಗಳು, 8 ನಾಟಕಗಳು, ಎರಡು ಕಾದಂಬರಿಗಳು ಮತ್ತು ರಾಮಾಯಣ ದರ್ಶನಂನಂತಹ ಒಂದು ಮಹಾಕಾವ್ಯವನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ’ ಎಂದರು.

‘ಅವರ ಕೃತಿಗಳಲ್ಲಿ ಅಸಮಾನತೆಯನ್ನು ವಿರೋಧಿಸುತ್ತಿದ್ದ ಅವರು, ವಿಶ್ವ ಮಾನವ ಗುಣಗಳನ್ನು ಬಿಂಬಿಸುವಂತೆ ಬರೆಯುತ್ತಿದ್ದರು. ಹೀಗಾಗಿಯೇ ಅವರು ‘ಜಲಗಾರ’ದಂತಹ ನಾಟಕಗಳಲ್ಲಿ ಶ್ರಮಿಕ ವರ್ಗದವರ ಪರವಾಗಿ ಬರೆದಿದ್ದಾರೆ’ ಎಂದು ತಿಳಿಸಿದರು.

‘ದೇಶದ ಉತ್ತರದಲ್ಲಿರುವ ಹಿಮಾಲಯ ಪರ್ವತ ಯಾವ ರೀತಿಯ ನಯನ ಮನೋಹರ ನಿಸರ್ಗ ಸಹಜತೆಯಿಂದ ಕಂಗೊಳಿಸುತ್ತದೆಯೋ ಅದೇ ರೀತಿ ಮಲೆನಾಡು ಕೂಡ ತನ್ನ ಸೌಂದರ್ಯದಿಂದ ಎಂತಹವರನ್ನಾದರೂ ಮಂತ್ರ ಮುಗ್ಧರನ್ನಾಗಿಸುತ್ತದೆ. ಕುವೆಂಪು ಅವರು ಈ ನಿಸರ್ಗದ ರಮಣಿಯತೆಯನ್ನು ತಮ್ಮ ಬರಹಗಳಲ್ಲಿ ಅಷ್ಟೇ ಸುಂದರವಾಗಿ ಚಿತ್ರಿಸಿದ್ದಾರೆ’ ಎಂದರು.

ಕೊಟ್ರಯ್ಯ ಕಟಗಿ, ಎನ್. ಟಿ ಸಜ್ಜನ್, ಎಸ್. ಎಸ್ ಗೂಡ್ಲಾನೂರ, ರುದ್ರಪ್ಪ ತಳವಾರ, ಡಿ. ಡಿ ಜೋಗಣ್ಣನವರ, ಶಿವಲಿಲಾ ಹಳ್ಳಿಕೇರಿ, ಗಂಗಮ್ಮ ಕವಲೂರ ಹಾಗೂ ಅರುಣಾ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.