ಕುಷ್ಟಗಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ವಕೀಲರ ಒಕ್ಕೂಟದ ತಾಲ್ಲೂಕು ಸಮಿತಿ ಪ್ರತಿನಿಧಿಗಳು ಒತ್ತಾಯಿಸಿದರು.
ಶುಕ್ರವಾರ ಇಲ್ಲಿ ನ್ಯಾಯಾಲಯದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಅನೇಕ ವಕೀಲರು ನಂತರ ಪ್ರಧಾನಮಂತ್ರಿಗೆ ಬರೆದ ಮನವಿಯನ್ನು ಉಪ ತಹಶೀಲ್ದಾರ್ ವಿಜಯಾ ಅವರಿಗೆ ಸಲ್ಲಿಸಿದರು.
ಪೊಲೀಸರ ಏಕಪಕ್ಷಿಯ ವರ್ತನೆಗಳಿಂದ ವಕೀಲರಿಗೆ ರಕ್ಷಣೆ ನೀಡಬೇಕು. ವಕೀಲರ ಸಂರಕ್ಷಣಾ ಕಾಯ್ದೆಗೆ ಸೂಕ್ತ ತಿದ್ದುಪಡಿಯಾಗಬೇಕು. ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಮಾರ್ಗಸೂಚಿಯನ್ನು ಪಾಲಿಸಬೇಕು. ಅವೈಜ್ಞಾನಿಕವಾಗಿರುವ ಅಖಿಲ ಭಾರತ ಬಾರ್ ಪರೀಕ್ಷೆಯನ್ನು ರದ್ದುಪಡಿಸುವುದು, ಕಿರಿಯ ವಕೀಲರಿಗೆ ಎರಡು ವರ್ಷಗಳವರೆಗೆ ₹10 ಸಾವಿರ ಮಾಸಿಕ ಸ್ಟೈಫಂಡ್ ನೀಡುವುದು ಸೇರಿದಂತೆ ಇತರೆ ಪ್ರಮುಖ ಬೇಡಿಕೆಗಳು ಮನವಿಯಲ್ಲಿದ್ದವು.
ಈ ಸಂದರ್ಭದಲ್ಲಿ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ ಸೇರಿದಂತೆ ವಕೀಲರ ಒಕ್ಕೂಟದ ತಾಲ್ಲೂಕು ಸಮಿತಿ ಪದಾಧಿಕಾರಿಗಳು, ಹಿರಿಯ ವಕೀಲರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.