ಕುಷ್ಟಗಿ: ತಾಲ್ಲೂಕಿನ ತುಗ್ಗಲದೋಣಿ ಗ್ರಾಮದಲ್ಲಿ ಬಿರುಗಾಳಿಗೆ ಸಿಲುಕಿ ವೀಳ್ಯದ ಎಲೆಬಳ್ಳಿ ಹಾಗೂ ಬಾಳೆ ಗಿಡಗಳು ನೆಲಕಚ್ಚಿ ಲಕ್ಷಾಂತರ ಹಾನಿ ಸಂಭವಿಸಿದೆ.
ದ್ಯಾಮಣ್ಣ ಮತ್ತು ಹನುಮಪ್ಪ ಎಂಬ ರೈತರಿಗೆ ಸೇರಿದ ತಲಾ ಒಂದು ಎಕರೆಯಲ್ಲಿ ಬೆಳೆಯಲಾಗಿದ್ದ ಎಲೆಬಳ್ಳಿ ತೋಟ ಈಗ ಅಕ್ಷರಶಃ ನೆಲಸಮಗೊಂಡಿದ್ದು ರೈತರನ್ನು ಕಂಗಾಲಾಗಿಸಿದೆ. ಎಲೆಬಳ್ಳಿ ಉತ್ತಮವಾಗಿ ಬೆಳೆದಿತ್ತು ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯೂ ಇದ್ದು ಉತ್ತಮ ಆದಾಯದ ನಿರೀಕ್ಷೆ ಇತ್ತು. ಇನ್ನೇನು ಕಟಾವು ಮಾಡಬೇಕೆನ್ನುವಷ್ಟರಲ್ಲಿ ಬಿರುಗಾಳಿ ಬೆಳೆಯನ್ನು ಹೊಸಕಿಹಾಕಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಅದೇ ರೀತಿ ಸುತ್ತಲಿನ ಅನೇಕ ಹಳ್ಳಿಗಳಲ್ಲಿ ಎಲೆಬಳ್ಳಿ, ಬಾಳೆ ಗಿಡ, ಪಪ್ಪಾಯಿ ಮತ್ತಿತರೆ ಬೆಳೆಗಳಿಗಳಿಗೂ ಬಹಳಷ್ಟು ಹಾನಿ ಸಂಭವಿಸಿದೆ, ಮಾವಿನ ಕಾಯಿಗಳು ಉದುರಿಬಿದ್ದಿವೆ ಎಂದು ಮೂಲಗಳು ತಿಳಿಸಿವೆ. ನೈಸರ್ಗಿಕ ವಿಕೋಪದಿಂದ ಬೆಳೆಹಾನಿ ಅನುಭವಿಸಿದ ರೈತರಿಗೆ ಪರಿಹಾರ ನೀಡಬೇಕು, ಈ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳಪರಿಶೀಲನೆ ನಡೆಸಬೇಕು ಎಂದು ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಮಧ್ಯೆ ಶನಿವಾರ ಮಧ್ಯಾಹ್ನ ವಿವಿಧ ಗ್ರಾಮಗಳಲ್ಲಿ ಸಾಧಾರಣ ಮಳೆಯಾಗಿದ್ದು ಬಿರುಗಾಳಿ, ಸಿಡಿಲು ಗುಡುಗಿನ ಆರ್ಭಟ ಜೋರಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.