ಯಲಬುರ್ಗಾ: ‘ಯುವಕರು ಕೆಟ್ಟ ಚಟಗಳಿಗೆ ಒಳಗಾಗದೇ ಸದ್ಗುಣ, ಮಾನವೀಯ ಮೌಲ್ಯ ಹಾಗೂ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವ ಮೂಲಕ ನವ ಯುವ ಭಾರತ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ತಾಳಿಕೋಟೆಯ ಮಹಾಂತದೇವರು ಹೇಳಿದರು.
ತಾಲ್ಲೂಕಿನ ಬಂಡಿಹಾಳ ಗ್ರಾಮದಲ್ಲಿ ನಡೆದ ದುಶ್ಚಟಗಳ ಜೋಳಿಗೆ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಣ್ಣ ವಯಸ್ಸಿನಲ್ಲಿಯೇ ವಿವಿಧ ಚಟಗಳಿಗೆ ದಾಸರಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಆತಂಕದ ಸಂಗತಿಯಾಗಿದೆ. ನಿಯಂತ್ರಣಕ್ಕೆ ಮುಂದಾಗದೇ ಹೋದರೆ ಯುವಪಡೆ ಸಂಪೂರ್ಣ ನಶಿಸುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಪಾಲಕರು ಮತ್ತು ನಾಗರಿಕ ಸಮಾಜ ಎಚ್ಚೆತ್ತುಕೊಂಡು ಯುವಕರನ್ನು ಸಂರಕ್ಷಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಮುಖಂಡ ಶ್ರೀನಿವಾಸ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿನ ಯುವಪಡೆಯು ವಿವಿಧ ಜನಪದ ಕಲೆ, ಸಂಸ್ಕøತಿ ಹಾಗೂ ಕ್ರೀಡೆಗಳನ್ನು ಮೈಗೂಡಿಸಿಕೊಂಡು ಅಭಿವೃದ್ಧಿಗೊಳಿಸುವತ್ತ ಚಿಂತನೆ ನಡೆಸಬೇಕು ಎಂದರು.
ಗಣ್ಯರಾದ ಬಸವರಾಜ ಕಳಸಪ್ಪನವರ, ರಮೇಶ ಮಳಗೌಡ್ರ, ವೀರನಗೌಡ ಗೋಣಿ, ಶರಣಪ್ಪ ಬೂಸಣ್ಣನವರ, ಮಲ್ಲೇಶಪ್ಪ ಬಂಡ್ರಿ, ವಿರುಪಾಕ್ಷಪ್ಪ ಗೋಣಿ, ಕೆರಿಬಸಪ್ಪ ತಳವಾರ, ಫಕೀರಪ್ಪ ದಿಂಡೂರು, ಕರಿಬಸಪ್ಪ ಪಟ್ಟೇದ, ಕಳಕನಗೌಡ ಪೊಲೀಸಪಾಟೀಲ, ಶಂಕರ ದಿಂಡೂರು, ಭೀಮನಗೌಡ ಹುಲಿಗಿ, ಕಳಕೇಶ ಶ್ರೀಗಿರಿ, ದೇವಪ್ಪ ಕರಿಗಾರ ಸೇರಿ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.