ಮುನಿರಾಬಾದ್: ಇಂದಿನ ಕಲುಷಿತ ಸಾಮಾಜಿಕ ವ್ಯವಸ್ಥೆಗೆ ಭಗವಾನ್ ಮಹಾವೀರರ ಅಹಿಂಸಾ ತತ್ವ ದಾರಿದೀಪವಾಗಿದೆ ಎಂದು ಉಪನ್ಯಾಸಕ ಕೊಪ್ಪಳದ ಸಿದ್ದಲಿಂಗಪ್ಪ ಕೊಟ್ನೆಕಲ್ ಅಭಿಪ್ರಾಯಪಟ್ಟರು.
ಗುರುವಾರ ಹುಲಿಗಿಯ ಜೈನ ಸಮಾಜದ ವತಿಯಿಂದ ಪಾರ್ಶ್ವನಾಥ ದಿಗಂಬರ ಜೈನಬಸದಿಯಲ್ಲಿ ಭಗವಾನ್ ಮಹಾವೀರರ ಜನ್ಮ ಕಲ್ಯಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಹಾವೀರರ ತ್ರಿರತ್ನ ತತ್ವ ಸಮ್ಯಕ್ ಜ್ಞಾನ, ಸಮ್ಯಕ್ ದರ್ಶನ, ಸಮ್ಯಕ್ ಚರಿತ್ರೆ ಅಳವಡಿಸಿಕೊಂಡಲ್ಲಿ ಮನುಷ್ಯ ಪರಿಪೂರ್ಣನಾಗುತ್ತಾನೆ. ಪೂಜೆ ಅಥವಾ ಪ್ರಾರ್ಥನೆಯಿಂದ ಪಾಪ ತೊಲಗುವುದಿಲ್ಲ. ಸದ್ಗುಣ ನಡವಳಿಕೆಯಿಂದ ಮನುಷ್ಯನಿಗೆ ಮುಕ್ತಿ ಎಂಬುದು ಮಹಾವೀರರ ಸಂದೇಶವಾಗಿದೆ’ ಎಂದರು.
ಸಮಾಜದ ಪ್ರಮುಖ ಚಂದ್ರನಾಥ ತವನಪ್ಪನವರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸದಿಯಲ್ಲಿ ಮಹಾವೀರ ಮತ್ತು ತೀರ್ಥಂಕರರ ಬಿಂಬಗಳಿಗೆ ಅಭಿಷೇಕ ಮತ್ತು ವಿಶೇಷ ಪೂಜೆ ನಡೆಯಿತು. ಕುಂಭ-ಕಳಸ, ಮಂಗಳವಾದ್ಯದೊಂದಿಗೆ ಮಹಾವೀರರ ಭಾವಚಿತ್ರದ ಮೆರವಣಿಗೆ ನಡೆಯಿತು. ಸುಹಾಸ ಇಜಾರಿ ನಿರೂಪಿಸಿದರು. ಪುಷ್ಪದಂತೆ ಪಾಟೀಲ ವಂದಿಸಿದರು. ಸಮಾಜದ ಪ್ರಮುಖರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.