ADVERTISEMENT

ವಸತಿ ಯೋಜನೆ ಸದ್ಬಳಕೆಗೆ ಪ್ರತಿನಿಧಿಗಳೇ ಅಡ್ಡಿ..!

ಬಿಜಕಲ್ಲ ಗ್ರಾಮ ಪಂಚಾಯಿತಿ ಪಿಡಿಒ ನೀಡಿದ ಹಿಂಬರಹದಲ್ಲಿ ಬಹಿರಂಗ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2018, 12:39 IST
Last Updated 2 ಅಕ್ಟೋಬರ್ 2018, 12:39 IST
ಆದೇಶ ಪ್ರತಿ
ಆದೇಶ ಪ್ರತಿ   

ಕುಷ್ಟಗಿ: ಬಸವ ವಸತಿ ಯೋಜನೆಯಲ್ಲಿ ಉಳ್ಳವರು ಮತ್ತು ಅನರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವ ಮೂಲಕ ಸೂರು ರಹಿತರಿಗಾಗಿ ಇರುವ ಯೋಜನೆಯನ್ನು ದುರ್ಬಳಕೆ ಮಾಡಿಕೊಂಡಿರುವುದು ತಾಲ್ಲೂಕಿನ ಬಿಜಕಲ್ಲ ಗ್ರಾಮ ಪಂಚಾಯಿತಿಯಲ್ಲಿ ಬೆಳಕಿಗೆ ಬಂದಿದೆ.

ಗ್ರಾಮ ಸಭೆಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡದೆ ಮತ್ತು ರಾಜೀವ್ ಗಾಂಧಿ ವಸತಿ ನಿಗಮ ನೀಡಿದ ಮಾರ್ಗದರ್ಶನ ಹಾಗೂ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಕೇವಲ 38 ಫಲಾನುಭವಿಗಳ ಪಟ್ಟಿ ಮಾತ್ರ ತಾಲ್ಲೂಕು ಪಂಚಾಯಿತಿ ಅನುಮೋದನೆಗೆ ಕಳುಹಿಸಲಾಗಿದೆ. ಯೋಜನೆಯನ್ನು ತಮಗೆ ತೋಚಿದ ರೀತಿಯಲ್ಲಿ ಅನುಷ್ಠಾನಗೊಳಿಸಲು ಮುಂದಾಗಿರುವುದಕ್ಕೆ ಗ್ರಾಮಸ್ಥರ ವಿರೋಧ ವ್ಯಕ್ತವಾಗಿದೆ.

ಅಷ್ಟೆ ಅಲ್ಲದೇ ಯೋಜನೆಯ ದುರ್ಬಳಕೆಗೆ ಸ್ವತಃ ಪಂಚಾಯಿತಿ ರಾಜ್‌ ವ್ಯವಸ್ಥೆಯಲ್ಲಿನ ಮೂರೂ ಹಂತದ ಚುನಾಯಿತ ಪ್ರತಿನಿಧಿಗಳೇ ಕುಮ್ಮಕ್ಕು ನೀಡಿರುವುದನ್ನು ಪಂಚಾಯಿತಿ ಅಧಿಕಾರಿಯೇ ಒಪ್ಪಿಕೊಂಡಿದ್ದಾರೆ.

ADVERTISEMENT

ಈ ವಿಷಯ ಬಹಿರಂಗಗೊಂಡ ನಂತರ ಗ್ರಾಮಸ್ಥರು ಪಂಚಾಯಿತಿ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಜನರ ಆಕ್ರೋಶಕ್ಕೆ ಗುರಿಯಾದ ಅಭಿವೃದ್ಧಿ ಅಧಿಕಾರಿ, ರಾಜಕೀಯ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಗ್ರಾಮಸಭೆ ನಡೆಸದೆ ತಾವು ಫಲಾನುಭವಿಗಳ ಪಟ್ಟಿಯನ್ನು ಅನುಮೋದನೆಗೆ ಕಳಿಸಿರುವುದಾಗಿ ಸ್ವತಃ ಒಪ್ಪಿಕೊಂಡು ಗ್ರಾಮಸ್ಥರಿಗೆ ಹಿಂಬರಹ ನೀಡಿರುವುದು ಈ ಪಂಚಾಯಿತಿಯಲ್ಲಿ ಯೋಜನೆ ಹಳ್ಳ ಹಿಡಿದಿದೆ ಎನ್ನುವುದಕ್ಕೆ ಪ್ರಮುಖ ಪುರಾವೆ ಒದಗಿಸಿದೆ.

ಮಾನದಂಡ ನಿಯಮ: ಫಲಾನುಭವಿ ಸ್ವಂತ ಮನೆ ಹೊಂದಿರಬಾರದು, ಬಡತನ ರೇಖೆಗಿಂತ ಕೆಳಗಿನವರ ಪಟ್ಟಿಯಲ್ಲಿ ಇರಬೇಕು, ಖಾಲಿ ನಿವೇಶನ ಇರಬೇಕು. ಅರ್ಹ ಫಲಾನುಭವಿಗಳನ್ನು ಗ್ರಾಮಸಭೆಯಲ್ಲಿಯೇ ಆಯ್ಕೆ ಮಾಡಿ ಸಂಬಂಧಿಸಿದ ದಾಖಲೆಗಳು ಇರಬೇಕು ಎಂಬುದು ವಸತಿ ನಿಗಮದ ಸ್ಪಷ್ಟ ಸೂಚನೆ. ಆದರೆ, ಈ ಯಾವ ನಿಯಮಗಳನ್ನೂ ಪಂಚಾಯಿತಿ ಅನುರಿಸಿಲ್ಲ.

ಏನಿದೆ ಹಿಂಬರಹದಲ್ಲಿ?: ಅಭಿವೃದ್ಧಿ ಅಧಿಕಾರಿ ತಮ್ಮ ಕೈಬರಹದಲ್ಲಿ ಸೆ. 29ರಂದು ಗ್ರಾಮಸ್ಥರಿಗೆ ನೀಡಿರುವ ಹಿಂಬರದಲ್ಲಿ 'ಪಂಚಾಯಿತಿಗೆ 110 ವಸತಿ ಮನೆಗಳು ಮಂಜೂರಾಗಿದ್ದವು. ಪಂಚಾಯಿತಿ ಸದಸ್ಯರು ಫಲಾನುಭವಿಗಳ ಪಟ್ಟಿಗೆ ಅನುಮೋದನೆ ಪಡೆದುಕೊಳ್ಳುವಂತೆ ಒತ್ತಡ ಹೇರಿದ್ದರು.

ಆದರೆ, ಹಿಂದಿನ ಅವಧಿಯ ಅಭಿವೃದ್ಧಿ ಅಧಿಕಾರಿ ಕೆಲವು ಫಲಾನುಭವಿಗಳನ್ನು ಆಯ್ಕೆ ಮಾಡಿದ್ದಕ್ಕೆ ಜನರಿಂದ ತಕರಾರು ಬಂದಿತ್ತು. ಹಾಗಾಗಿ ಗ್ರಾಮ ಸಭೆ ನಡೆಸದೆ ಪುನಃ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಸಿರಲಿಲ್ಲ. ಆದರೂ38 ಜನ ಫಲಾನುಭವಿಗಳನ್ನು ಆಯ್ಕೆ ಮಾಡಿದ ಪಟ್ಟಿಯನ್ನು ಕಳಿಸುವಂತೆ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರು ಒತ್ತಡ ಹೇರಿದ್ದರಿಂದ ಗ್ರಾಮ ಸಭೆ ನಡೆಸದೆ ಅನಿವಾರ್ಯವಾಗಿ38 ಫಲಾನುಭವಿಗಳ ಪಟ್ಟಿಯನ್ನು ಅನುಮೋದನೆ ಪಡೆಯಲು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕರಿಗೆ ಕಳುಹಿಸಿದ್ದೇನೆ' ಎಂದು ಸ್ಪಷ್ಟಪಡಿಸಿದ್ದಾರೆ.

ಅವ್ಯವಹಾರ: ಗ್ರಾಮಸ್ಥರು ಹೇಳುವಂತೆ ಫಲಾನುಭವಿಗಳನ್ನು ಗ್ರಾಮಸಭೆಯಲ್ಲಿಯೇ ಆಯ್ಕೆ ಮಾಡಬೇಕು ಎಂಬಕಡ್ಡಾಯ ನಿಯಮವನ್ನು ಗಾಳಿಗೆ ತೂರಲಾಗಿದೆ. ಕೆಲವರನ್ನು ಹೊರತುಪಡಿಸಿ ಬಹುತೇಕ ಫಲಾನುಭವಿಗಳ ಪಟ್ಟಿಯಲ್ಲಿ ಶ್ರೀಮಂತರು, ಈಗಾಗಲೇ ಮನೆಗಳನ್ನು ಹೊಂದಿರುವವರು ಇದ್ದಾರೆ.

ಸೂರು ರಹಿತ ಅನೇಕ ಕುಟುಂಬಗಳು ಗ್ರಾಮದಲ್ಲಿದ್ದರೂ ಅವರನ್ನು ಕಡೆಗಣಿಸಿದ ಪಂಚಾಯಿತಿ ಅಧಿಕಾರಿ ಮತ್ತು ಚುನಾಯಿತ ಪ್ರತಿನಿಧಿಗಳು ತಮ್ಮ ಕೈಚಳಕ ತೋರಿ ತಮಗೆ ಬೇಕಾದವರಿಗೆ ಮನೆಗಳ ಹಂಚಿಕೆ ಮಾಡಿದ್ದಾರೆ. ಈ ಕುರಿತು 'ಪ್ರಜಾವಾಣಿ'ಗೆ ವಿವರಿಸಿದ ಗ್ರಾಮದ ಶರಣಪ್ಪ ವಡ್ಡರ, ಮಹಾಂತೇಶ ಇತರರು, 'ಮನೆ ಹಂಚಿಕೆ ಮಾಡುವುದಕ್ಕೆ ಪ್ರತಿಯೊಬ್ಬರಿಂದ ತಲಾ30 ಸಾವಿರ ಹಣವನ್ನು ಅಕ್ರಮವಾಗಿ ಪಡೆದಿದ್ದಾರೆ' ಹಣ ಕೊಟ್ಟವರಿಗೆ ಮಾತ್ರ ಮನೆ ಎಂಬ ಅಲಿಖಿತ ನಿಯಮ ಇಲ್ಲಿ ಜಾರಿಯಲ್ಲಿದೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.