ADVERTISEMENT

ಕುಷ್ಟಗಿ | ಮಾದರಿ ಸಂಗ್ರಹ ನೆಪ: ಆಹಾರ ಸಾಮಗ್ರಿ ಲೂಟಿ

ಆಹಾರ ಸುರಕ್ಷತೆ ಕಾಯ್ದೆ ದುರ್ಬಳಕೆ, ವ್ಯಾಪಾರಿಗಳಿಗೆ ಮೋಸ: ಆರೋಪ

ನಾರಾಯಣರಾವ ಕುಲಕರ್ಣಿ
Published 14 ಮಾರ್ಚ್ 2024, 5:36 IST
Last Updated 14 ಮಾರ್ಚ್ 2024, 5:36 IST
   

ಕುಷ್ಟಗಿ: ಆರೋಗ್ಯ ಇಲಾಖೆ ಅಧಿಕಾರಿ ಎಂದು ಹೇಳಿಕೊಳ್ಳುತ್ತಿರುವ ವ್ಯಕ್ತಿ ಆಹಾರ ಸುರಕ್ಷತೆ ಕಾಯ್ದೆ ನೆಪದಲ್ಲಿ ತಾಲ್ಲೂಕಿನ ವಿವಿಧ ವ್ಯಾಪಾರಿಗಳಿಂದ ವಸ್ತುಗಳು ಮತ್ತು ಹಣ ಸುಲಿಗೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ದೂರಿದ್ದಾರೆ.

ಕೆಲ ತಿಂಗಳುಗಳಿಂದ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಬರುವ ಈ ವ್ಯಕ್ತಿ ಇಲಾಖೆಗೆ ಸಂಬಂಧಿಸಿದ ದಾಖಲೆ ತೋರಿಸದೆ ಮನಸ್ಸಿಗೆ ತೋಚಿದಂತೆ ಅಂಗಡಿಗಳಲ್ಲಿರುವ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಕೇಳಿದರೆ ನಿಮ್ಮ ಅಂಗಡಿಯಲ್ಲಿನ ಸಾಮಗ್ರಿಗಳನ್ನು ಪರೀಕ್ಷಿಸಲು ಪ್ರಯೋಗಾಲಯಕ್ಕೆ ಕಳಿಸುವುದಕ್ಕೆ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ ಎಂದಷ್ಟೇ ಹೇಳುತ್ತಿದ್ದಾರೆ ಎಂದು ವರ್ತಕರು ತಿಳಿಸಿದ್ದಾರೆ.

ಸಂಗ್ರಹ ಹೇಗೆ: ಕಿರಾಣಿ ಅಂಗಡಿಗೆ ಹೋದರೆ ಪ್ರಸಿದ್ಧ ಕಂಪನಿಗಳ ಬ್ರ್ಯಾಂಡೆಡ್‌ ಖಾದ್ಯತೈಲ, ಚಹಾ, ಕಾಫಿ ಪೊಟ್ಟಣಗಳು, ಗೋಧಿ ಹಿಟ್ಟು, ಬೇಳೆ, ಬೆಲ್ಲ, ಬಿಸ್ಕತ್, ಚಾಕೊಲೇಟ್, ತುಪ್ಪ ಹೀಗೆ ಅಂಗಡಿಯಲ್ಲಿರುವ ಬಹುತೇಕ ವಸ್ತುಗಳನ್ನು ತಾವು ತಂದ ಚೀಲದಲ್ಲಿ ತುಂಬಿ ವಾಹನದಲ್ಲಿ ಒಯ್ಯುತ್ತಾರೆ. ಅದೇ ರೀತಿ ಮಿಲ್ಕ್ ಪಾರ್ಲರ್‌ಗೆ ಹೋಗಿ ಅಲ್ಲಿಯೂ ಹಾಲಿನ ಪ್ಯಾಕೇಟ್, ತುಪ್ಪದ ಬಾಟಲಿ, ಪೇಡಾ ಸೇರಿ ಇತರ ವಸ್ತುಗಳನ್ನು ತಾವೇ ತೆಗೆದುಕೊಳ್ಳುತ್ತಾರೆ. ಅಷ್ಟೇ ಏಕೆ ತಂಪು ಪಾನಿಯದ ಅಂಗಡಿಗೆ ಹೋಗಿ ಅಲ್ಲಿಯೂ ವಿವಿಧ ರೀತಿಯ ಜ್ಯೂಸ್‌ಗಳನ್ನು ಲೀಟರ್‌ಗಟ್ಟಲೇ ನೀರಿನ ಬಾಟಲಿಗಳಿಗೆ ತುಂಬಿಕೊಳ್ಳುತ್ತಾರೆ. ಪದೇ ಪದೇ ಅಂಗಡಿಗೆ ಬರುವುದು ಹೀಗೆ ಕೈಗೆ ಸಿಕ್ಕ ಸಾಮಗ್ರಿಗಳನ್ನು ಹೊತ್ತೊಯ್ಯುವುದು ಸಾಮಾನ್ಯ ಸಂಗತಿಯಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಂಗಡಿಗಳ ಮಾಲೀಕರು ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

ADVERTISEMENT

ಅಷ್ಟೇ ಅಲ್ಲ ಆಹಾರ ಸುರಕ್ಷತೆ ಕಾಯ್ದೆಗೆ ಸಂಬಂಧಿಸಿದಂತೆ ಮಾರಾಟದ ಪರವಾನಗಿ ಕೊಡಿಸುವುದು, ನವೀಕರಣ ಮಾಡಿಸುವುದಾಗಿ ಹೇಳಿ ₹2-₹3 ಸಾವಿರ ಕೇಳುತ್ತಾರೆ. ಸಂಗ್ರಹಿಸಿಕೊಂಡು ಹೋದ ಆಹಾರ ಸಾಮಗ್ರಿಗಳು ದೋಷಪೂರಿತವಾಗಿವೆ. ನಿಮ್ಮ ಮೇಲೆ ಎಫ್‌ಐಆರ್‌ ದಾಖಲಾಗಿ ನ್ಯಾಯಾಲಯಕ್ಕೆ ತಿರುಗಾಡಬೇಕಾಗುತ್ತದೆ. ಬೇಡವೆಂದರೆ ₹10 ಸಾವಿರ ಕೊಟ್ಟರೆ ಎಲ್ಲವನ್ನೂ ಸರಿಪಡಿಸುತ್ತೇವೆ ಎಂದು ಬೆದರಿಕೆಯೊಡ್ಡುತ್ತಾರೆ ಎಂದು ಆರೋಪಿಸಿದರು. ಅಂಗಡಿಗಳಲ್ಲಿ ಹತ್ತಿಪ್ಪತ್ತು ಮಾದರಿಗಳನ್ನು ಪಡೆದರೂ ಯಾವುದೇ ದಾಖಲೆ ನೀಡುವುದಿಲ್ಲ. ಆಹಾರ ಸುರಕ್ಷತೆ ಕಾಯ್ದೆ ಅನ್ವಯ ಮಾದರಿ ಸಂಗ್ರಹಿಸಿದರೆ ನಮ್ಮ ಅಭ್ಯಂತರವೇನೂ ಇಲ್ಲ. ಆದರೆ ಈ ಅಧಿಕಾರಿಗಳು ನಡೆದುಕೊಳ್ಳುತ್ತಿರುವುದು ಬಹಳಷ್ಟು ಅನುಮಾನ ಬರುವಂತಿದೆ. ಈ ಬಗ್ಗೆ ಮೇಲಧಿಕಾರಿಗಳು ಗಮನಹರಿಸಿ ಇಂಥ ವ್ಯಕ್ತಿಗಳಿಂದ ಆಗುತ್ತಿರುವ ಕಿರುಕುಳ ತಪ್ಪಿಸಬೇಕು ಎಂದು ಮನವಿ ಮಾಡಿದರು.

ಅಧಿಕಾರಿ ಹೇಳಿದ್ದು: ಈ ಕುರಿತು ಪ್ರತಿಕ್ರಿಯಿಸಿದ ತಾಲ್ಲೂಕಿನ ಪ್ರಭಾರ ಆಹಾರ ನಿರೀಕ್ಷಣಾ ಅಧಿಕಾರಿ ಮಲ್ಲಿಕಾರ್ಜುನ,‘ಇಲಾಖೆ ನಿಯಮಗಳ ಪ್ರಕಾರ ಆಹಾರ ವಸ್ತುಗಳ ಸುರಕ್ಷತೆ ಕುರಿತಂತೆ ಮಾದರಿಗಳನ್ನು ಸಂಗ್ರಹಿಸುತ್ತಿದ್ದೇವೆ. ಆದರೆ ವ್ಯಾಪಾರಿಗಳಿಗೆ ಹಣಕ್ಕಾಗಿ ಕಿರುಕುಳ ನೀಡಿಲ್ಲ. ಸಾಮಗ್ರಿ ತೆಗೆದುಕೊಂಡಿಲ್ಲ’ ಎಂದು ಸ್ಪಷ್ಟಪಡಿಸಿದರು.

ಅನಗತ್ಯವಾಗಿ ಅಂಗಡಿಯಲ್ಲಿನ ಸಾಮಗ್ರಿಗಳನ್ನು ಬಲವಂತವಾಗಿ ತುಂಬುಕೊಳ್ಳುವುದು ಗಮನಕ್ಕೆ ಬಂದಿಲ್ಲ. ಅಂಥ ಅನಮಾನಾಸ್ಪದ ವ್ಯಕ್ತಿಗಳು ಅಂಗಡಿಗೆ ಬಂದರೆ ಇಲಾಖೆಗೆ ಅಥವಾ ಪೊಲೀಸರಿಗೂ ದೂರು ನೀಡಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.