ADVERTISEMENT

ಶಾಸಕ ಮುನವಳ್ಳಿ ಬಂಧನಕ್ಕೆ ಅನ್ಸಾರಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಜೂನ್ 2018, 17:36 IST
Last Updated 22 ಜೂನ್ 2018, 17:36 IST
ಇಕ್ಬಾಲ್ ಅನ್ಸಾರಿ
ಇಕ್ಬಾಲ್ ಅನ್ಸಾರಿ   

ಗಂಗಾವತಿ: ‘ಖೋಟಾನೋಟು ಪ್ರಕರಣದಲ್ಲಿ ಶಾಸಕ ಪರಣ್ಣ ಮುನವಳ್ಳಿ ಭಾಗಿಯಾಗಿದ್ದು, ಅವರನ್ನು ಬಂಧಿಸಬೇಕು’ ಎಂದು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಆಗ್ರಹಿಸಿದರು.

ಶುಕ್ರವಾರ ಇಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಶೆಟ್ಟಿ ಅವರು ರಾಜಕೀಯ ಒತ್ತಡಕ್ಕೆ ಒಳಗಾಗಿ ಪ್ರಕರಣದ ದಿಕ್ಕು ತಪ್ಪಿಸುತ್ತಿದ್ದಾರೆ. ಬಿಜೆಪಿ, ಆರ್ಎಸ್ಎಸ್ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

‘ಶಾಸಕರಾದ 15 ದಿನದಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದ ಮುನವಳ್ಳಿ, ಇಕ್ಬಾಲ್ ಅನ್ಸಾರಿ ಅವಧಿಯಲ್ಲಿ ಶಂಕುಸ್ಥಾಪನೆಯಾದ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತರಬಾರದು ಎಂದು ಸೂಚನೆ ನೀಡಿದ್ದಾರೆ’ ಎಂದರು.

ADVERTISEMENT

‘2011ರಲ್ಲಿ ನಗರದಲ್ಲಿ ನಡೆದ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಪರಣ್ಣ ಮುನವಳ್ಳಿ ಜನರಿಂದ ಕೋಟ್ಯಂತರ ರೂಪಾಯಿ ಅಕ್ರಮವಾಗಿ ಸಂಗ್ರಹಿಸಿದ್ದಾರೆ. ಅದಕ್ಕೆ ಇಂದಿಗೂ ಲೆಕ್ಕ ಕೊಟ್ಟಿಲ್ಲ’ ಎಂದು ಹೇಳಿದರು.

‘ಒಎಸ್‌ಬಿ ವೃತ್ತದಿಂದ ಗಾಂಧಿವೃತ್ತವರೆಗೆ ರಸ್ತೆ ವಿಸ್ತರಣೆಯ ನೆಪದಲ್ಲಿ ವಾಣಿಜ್ಯ ಮಳಿಗೆ ಒಡೆಯುವ ಬೆದರಿಕೆಯೊಡ್ಡಿ ಪರಣ್ಣ ಮುನವಳ್ಳಿ ವ್ಯಾಪಾರಿಗಳಿಂದ ಕೋಟ್ಯಂತರ ರೂಪಾಯಿ ಅಕ್ರಮವಾಗಿ ಹಣ ಪಡೆದಿದ್ದಾರೆ ’ ಎಂದು ಆರೋಪಿಸಿದರು.

‘ನನ್ನ ವಿರುದ್ಧ ಮಾಡಿರುವ ಆರೋಪಗಳನ್ನು ಆರು ತಿಂಗಳ ಒಳಗೆ ದಾಖಲೆ ಸಮೇತ ಸಾಬೀತು ಪಡಿಸಬೇಕು. ಇಲ್ಲದಿದ್ದರೆ ರಾಜೀನಾಮೆ ನೀಡಬೇಕು’ ಎಂದು ಸವಾಲು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.