ADVERTISEMENT

ಮತದಾನ ಕಾರ್ಯಕ್ಕೆ ಸಕಲ ಸಿದ್ಧತೆ

ಜಿಲ್ಲಾ ಚುನಾವಣಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 13:36 IST
Last Updated 7 ಡಿಸೆಂಬರ್ 2021, 13:36 IST
ವಿಕಾಸ್ ಕಿಶೋರ್ ಸುರಳ್ಕರ್
ವಿಕಾಸ್ ಕಿಶೋರ್ ಸುರಳ್ಕರ್   

ಕೊಪ್ಪಳ: ವಿಧಾನ ಪರಿಷತ್ತಿಗೆ ರಾಯಚೂರು-ಕೊಪ್ಪಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆ-2021ರ ನಿಮಿತ್ತ ಇದೇ ಡಿ.10 ರಂದು ನಡೆಯುವ ಮತದಾನ ಕಾರ್ಯಕ್ಕೆ ಜಿಲ್ಲಾಡಳಿತದಿಂದ ಅಗತ್ಯ ಸಕಲ ಸಿದ್ಧತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು.

ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದರು.

ರಾಯಚೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆ ಸಂಬಂಧಿಸಿದಂತೆ ಜಿಲ್ಲೆಯ ಏಳು ತಾಲ್ಲೂಕುಗಳು ಒಳಗೊಂಡಂತೆ 1,358 ಪುರುಷ ಮತ್ತು 1,518 ಮಹಿಳೆಯರು ಸೇರಿ ಒಟ್ಟು 2,876 ಮತದಾರರಿದ್ದಾರೆ. ಜಿಲ್ಲೆಯಲ್ಲಿ 157 ಮತದಾನ ಕೇಂದ್ರಗಳಲ್ಲಿ ಮತದಾನ ಜರುಗಲಿದ್ದು, 157 ಪಿ.ಆರ್.ಓಗಳು, 157 ಪಿ.ಓಗಳು ಹಾಗೂ 157 ಡಿ-ಗ್ರೂಪ್ ಸೇರಿ ಒಟ್ಟು 471 ಸಿಬ್ಬಂದಿ ಹಾಗೂ ಇದರ ಜೊತೆಗೆ ತಲಾ 16 ಪಿ.ಆರ್.ಓಗಳು, ಪಿ.ಓಗಳು ಹಾಗೂ ಡಿ-ಗ್ರೂಪ್ ಸಿಬ್ಬಂದಿಯನ್ನು ನೇಮಿಸಿ, ಖಾಯ್ದಿರಿಸಿದ್ದು, ಒಟ್ಟು 519 ಸಿಬ್ಬಂದಿಯನ್ನು ಚುನಾವಣಾ ಕರ್ತರ್ವಕ್ಕೆ ನೇಮಕ ಮಾಡಲಾಗಿದೆ ಎಂದರು.

ADVERTISEMENT

ಚುನಾವಣಾ ಕರ್ತವ್ಯದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ಕಾರ್ಯವನ್ನು ತಾಲ್ಲೂಕುವಾರು ಮಾಡುತ್ತೇವೆ ಎಂದರು.

ಜಿಲ್ಲೆಯಲ್ಲಿ ದಂಡ ಪ್ರಕ್ರಿಯ ಸಂಹಿತೆ ಕಲಂ ನಂ. 144ರಡಿ ಸಾರ್ವಜನಿಕವಾಗಿ ಚುನಾವಣಾ ಬಹಿರಂಗ ಪ್ರಚಾರ ಮುಕ್ತಾಯಗೊಳಿಸುವ ಕುರಿತು ಹಾಗೂ ಮತದಾನ ದಿನದಂದು ಮತದಾನ ಕೇಂದ್ರಗಳ ಸುತ್ತ 200 ಮೀ. ವ್ಯಾಪ್ತಿಯ ಪ್ರದೇಶದಲ್ಲಿ ನಿಷೇಧಾಜ್ಞೆಯನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಅಲ್ಲದೇ ಮಧ್ಯಮಾರಾಟವನ್ನು ಸಹ ನಿಷೇಧಿಸಲಾಗುವುದು ಎಂದರು.

ಜಿಪಂ ಸಿಇಒ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಮತದಾನ ಕರ್ತವ್ಯಕ್ಕೆ ನೇಮಕ ಮಾಡಲಾದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗೆಜಿಲ್ಲಾ ಸ್ವೀಪ್ ಸಮಿತಿಯಿಂದ ತರಬೇತಿ ನೀಡಲಾಗಿದೆ. ಚುನಾವಣೆಯಲ್ಲಿ ನಾಲ್ಕು ಅಭ್ಯರ್ಥಿಗಳಿದ್ದು, ಅವರಿಗೆ ಯಾವುದೇ ಚಿನ್ಹೆ ಇರುವುದಿಲ್ಲ. ಬದಲಿಗೆ ಕನ್ನಡ ಅಥವಾ ಆಂಗ್ಲದ 1, 2, 3, 4 ಸಂಖ್ಯೆಗಳು ಇರುತ್ತವೆ. ಮತದಾನವು ಬ್ಯಾಲೆಟ್ ಪೇಪರ್ ಮೂಲಕ ನಡೆಯಲಿದ್ದು, ಈಗಾಗಲೇ ಎಲ್ಲ ಮತದಾರರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು.

ಎಸ್‌ಪಿ ಟಿ.ಶ್ರೀಧರ್ ಮಾತನಾಡಿ, ಒಟ್ಟು 157 ಮತದಾನ ಕೇಂದ್ರಗಳಲ್ಲಿ 32 ಅತಿಸೂಕ್ಷ, 52 ಸೂಕ್ಷ್ಮ ಹಾಗೂ 73 ಸಾಮಾನ್ಯ ಎಂದು ವಿಂಗಡಿಸಲಾಗಿದ್ದು, ಚುನಾವಣಾ ಕರ್ತವ್ಯಕ್ಕೆ ಇಬ್ಬರು ಡಿ.ವೈ.ಎಸ್.ಪಿ., 7 ಸಿಪಿಐ, 75 ಪಿಎಸ್‌ಐ ಮತ್ತು ಎಎಸ್‌ಐ ರ‍್ಯಾಂಕ್ ಆಫಿಸರ್ಸ್, 118 ಎಚ್.ಸಿ., 147 ಸಿಪಿಸಿ ರ‍್ಯಾಂಕ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ ಎಂದರು.

ಹೆಚ್ಚುವರಿಜಿಲ್ಲಾಧಿಕಾರಿ ಎಂ.ಪಿ ಮಾರುತಿ, ಅಬಕಾರಿ ಉಪ ಅಧೀಕ್ಷಕ ಮಹೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಜಿ.ಸುರೇಶ್, ಜಿಲ್ಲಾ ಚುನಾವಣಾ ಶಾಖೆಯ ನಾಗರಾಜ್ ಹಾಗೂ ಪ್ರಸನ್ನಕುಮಾರ್ ಇದ್ದರು.

**

ಶೇ 80 ರಷ್ಟು ಪೆಂಡಿಂಗ್ ವಾರೆಂಟ್ಸ್ ಈಗಾಗಲೇ ಬಟವಾಡೆಣೆ ಮಾಡಿದ್ದು, ಶೇ 99.09 ಶಸ್ತ್ರಾಸ್ತ್ರಗಳನ್ನು ಜಮಾ ಮಾಡಿಕೊಳ್ಳಲಾಗಿದೆ. 21 ಅಬಕಾರಿ ಪ್ರಕರಣ ದಾಖಲಾಗಿದ್ದು, 65,194 ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ
ಟಿ.ಶ್ರೀಧರ್, ಎಸ್‌ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.