ಯಲಬುರ್ಗಾ: ‘ಮೋದಿ ದೇಶದ ಪ್ರಧಾನಿಯಾದಾಗಿನಿಂದಲೂ ಹಂತ ಹಂತವಾಗಿ ಅಭಿವೃದ್ಧಿಗೊಳ್ಳುತ್ತ ದೇಶದ ಚಿತ್ರಣವೇ ಬದಲಾಗಿದೆ. ವಿಶ್ವದ ಗಮನ ಸೆಳೆಯುವಂತೆ ಮಾಡಿದ್ದಲ್ಲದೇ ಆರ್ಥಿಕವಾಗಿ ಸದೃಢವಾಗಿರುವಂತೆ ಮಾಡುತ್ತಿರುವುದು ಹೆಮ್ಮೆಪಡುವ ಸಂಗತಿ’ ಎಂದು ಮಾಜಿ ಸಚಿವ ಹಾಲಪ್ಪ ಅಚಾರ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಜರುಗಿದ ಹನ್ನೊಂದು ವರ್ಷಗಳ ಮೋದಿಯವರ ಸಾಧನೆ ಹಾಗೂ ವಿಕಸಿತ ಭಾರತ ಸಂಕಲ್ಪ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಬಡತನ ಹೊಗಲಾಡಿಸಲು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಮುಂದೆಯೂ ಇನ್ನೂ ಅನೇಕ ಯೋಜನೆಗಳ ಮೂಲಕ ಬಡತನವನ್ನು ಸಂಪೂರ್ಣ ನಿರ್ಮೂಲನೆಗೆ ಬದ್ಧವಾಗಿದೆ. ಮೋದಿಯವರ ದೂರದೃಷ್ಟಿ ಹಾಗೂ ಮಾಹಿತಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿರುವುದರಿಂದ ದೇಶದ ಡಿಜಿಟಲ್ ವ್ಯವಹಾರ ₹24 ಲಕ್ಷ ಕೋಟಿ ದಾಟಿದೆ. ಇದು ದೇಶದ ಆರ್ಥಿಕ ಕ್ಷೇತ್ರದಲ್ಲಿ ದೊಡ್ಡ ಸ್ಥಾನಮಾನ ಲಭಿಸುವಂತೆ ಮಾಡಿದೆ’ ಎಂದರು.
ವಿಕಸಿತ ಭಾರತದ ಪ್ರಚಾರ ಸಂಚಾಲಕ ಸೋಮನಾಥ ಕುಲಕರ್ಣಿ ಮಾತನಾಡಿ,‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಮೂಲಕ ಪಾಕಿಸ್ತಾನದ ಹೀನ ಕೃತ್ಯಕ್ಕೆ ತಕ್ಕ ಉತ್ತರ ನೀಡಿದೆ. ಭಯೋತ್ಪಾದನೆ ಹತ್ತಿಕ್ಕಲು ದೇಶದ ಸೈನಿಕರು ಶ್ರಮಿಸುತ್ತಿದ್ದಾರೆ. ಅವರ ಬೆನ್ನೆಲುಬಾಗಿ ಮೋದಿ ನಿಂತಿದ್ದಾರೆ’ ಎಂದರು.
ಈ ವೇಳೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಮಹೇಶ, ಮಂಡಳದ ಅಧ್ಯಕ್ಷ ಮಾರುತಿ ಗಾವರಾಳ, ಶಿವಕುಮಾರ ನಾಗಲಾಪೂರಮಠ, ವೀರಣ್ಣ ಹುಬ್ಬಳ್ಳಿ, ಅಮರೇಶ ಹುಬ್ಬಳ್ಳಿ, ರತನ್ ದೇಸಾಯಿ, ಶರಣಪ್ಪ ಈಳಿಗೇರ, ಶರಣಪ್ಪ ಬಣ್ಣದಭಾವಿ, ಮಹಿಳಾ ಘಟಕದ ಅಧ್ಯಕ್ಷೆ ಸಂತೋಷಿಮಾ ಜೋಶಿ, ಶಕುಂತಲಾ ಮಾಲಿಪಾಟೀಲ, ಸಿದ್ದು ಮಣ್ಣಿನವರ, ಪ್ರಕಾಶ, ಲಕ್ಷ್ಮಣ್ಣ ಕಾಳಿ, ದ್ಯಾಮಣ್ಣ ಉಚ್ಚಲಕುಂಟಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.