ADVERTISEMENT

ಗಂಗಾವತಿ: ಮಳೆಗಾಲದ ಸವಾಲಿಗೆ ಸಜ್ಜಾಗದ ನಗರಸಭೆ

ಗಂಗಾವತಿ: ಚರಂಡಿಯಲ್ಲಿ ತುಂಬಿದ ಹೂಳು, ಎಲ್ಲೆಂದರಲ್ಲಿ ತ್ಯಾಜ್ಯದ ರಾಶಿ, ಜನರಿಗೆ ರೋಗದ ಭೀತಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 5:50 IST
Last Updated 2 ಜೂನ್ 2025, 5:50 IST
<div class="paragraphs"><p>ಕಿಲ್ಲಾ ಏರಿಯಾದ ಮುಖ್ಯರಸ್ತೆಯಲ್ಲಿ ರಾಶಿಗಟ್ಟೆಲೇ ಸಂಗ್ರಹವಾದ ತ್ಯಾಜ್ಯ</p></div>

ಕಿಲ್ಲಾ ಏರಿಯಾದ ಮುಖ್ಯರಸ್ತೆಯಲ್ಲಿ ರಾಶಿಗಟ್ಟೆಲೇ ಸಂಗ್ರಹವಾದ ತ್ಯಾಜ್ಯ

   

ಗಂಗಾವತಿ: ಜಿಲ್ಲೆಯಲ್ಲಿಯೇ ಗಂಗಾವತಿ ವೇಗವಾಗಿ ಬೆಳೆಯುತ್ತಿರುವ ನಗರವಾದರೂ ಅಭಿವೃದ್ಧಿ ವಿಷಯದಲ್ಲಿ ಹಾಗೂ ಮೂಲ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಹಿಂದೆ ಬಿದ್ದಿದೆ. 

ಇಲ್ಲಿನ ಶಾಸಕರು, ನಗರಸಭೆ ಅಧಿಕಾರಿಗಳು ಹಲವು ವರ್ಷಗಳಿಂದ ನಗರೋತ್ಥಾನ ಅನುದಾ‌ನ ಬಳಸಿ ನಗರದಲ್ಲಿ ಚರಂಡಿ, ಕಾಂಕ್ರಿಟ್‌ ರಸ್ತೆ, ಮುಖ್ಯರಸ್ತೆಗಳು, ಉದ್ಯಾನ, ಮಾರುಕಟ್ಟೆ ಅಭಿವೃದ್ಧಿಪಡಿಸುವುದಾಗಿ ಸಾರ್ವಜನಿಕರಿಗೆ ಹೇಳುತ್ತಲೇ ಬಂದಿದ್ದಾರೆಯಾದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಂಡಿಲ್ಲ. ಪಟ್ಟಣದ ಜನಸಂಖ್ಯೆ ಏರುತ್ತಲೇ ಇದ್ದರೂ ಅಭಿವೃದ್ಧಿ ಮಾತ್ರ ಹಿಮ್ಮುಖ ಮಾರ್ಗದಲ್ಲಿ ಸಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ADVERTISEMENT

ಮುಂಗಾರು ಹಂಗಾಮಿನ ಮಳೆಗಾಲದ ಋತು ಈಗಾಗಲೇ ಆರಂಭವಾಗಿದೆ. ಮಳೆಗಾಲಕ್ಕೂ ಮೊದಲು ಚರಂಡಿ, ರಸ್ತೆಗಳನ್ನು  ಸ್ವಚ್ಛಗೊಳಿಸಿಕೊಳ್ಳಬೇಕಿದ್ದ ನಗರಸಭೆ ಈ ಯಾವ ಕೆಲಸವನ್ನೂ ಮಾಡಿಲ್ಲ. ನಗರದ ವಿವಿಧ ವಾರ್ಡ್‌ಗಳಲ್ಲಿ ಎಲ್ಲಿ ನೋಡಿದರೂ ಚರಂಡಿಗಳ ದುರ್ವಾಸನೆ, ಗಬ್ಬುನಾರುವ ಸಾರ್ವಜನಿಕ ಶೌಚಾಲಯಗಳು, ಮನೆಗಳ ಸಮೀಪ ಕೊಳಚೆ ನೀರು ಹರಿಯುವ ಚಿತ್ರಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಈ ಬಾರಿಯ ಮುಂಗಾರು ತುಸು ಮುಂಚಿತವಾಗಿಯೇ ಆರಂಭವಾಗಿದ್ದು, ವಾರ್ಡುಗಳಲ್ಲಿನ ಖಾಲಿ ನಿವೇಶನಗಳಲ್ಲಿ ಮಳೆ ನೀರು ಸಂಗ್ರಹವಾಗಿ ಸಾಂಕ್ರಾಮಿಕ ರೋಗಗಳು ಹರಡುವ ತಾಣಗಳಾಗಿ ಮಾರ್ಪಟ್ಟಿವೆ.

ಗಂಗಾವತಿ ನಗರ 35 ವಾರ್ಡ್‌ಗಳನ್ನು ಹೊಂದಿದ್ದು ಬಹುತೇಕ ಯಾವ ವಾರ್ಡ್‌ಗಳಲ್ಲಿಯೂ ಮೂಲ ಸೌಕರ್ಯಗಳು ಇಲ್ಲ. ಮುಖ್ಯವಾಗಿ ಸ್ವಚ್ಛತೆಯ ಸಮಸ್ಯೆ ಕಾಡುತ್ತಿದೆ. ನಗರಸಭೆಯಲ್ಲಿ ನಗರದ ಜನಸಂಖ್ಯೆಗೆ ಅನುಗುಣವಾಗಿ ಪೌರ ಕಾರ್ಮಿಕರ ಕೊರತೆಯಿರುವ ಕಾರಣ ವಾರ್ಡ್‌ಗಳ ಸಮರ್ಪಕ ನಿರ್ವಹಣೆ ಆಗುತ್ತಿಲ್ಲ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಗಂಗಾವತಿಗೆ ಪ್ರವೇಶಿಸುವ ನಾಲ್ಕೂ ದಿಕ್ಕುಗಳಿಂದಲೂ ರಸ್ತೆ ಸಂಪರ್ಕವಿದ್ದು, ಸವಾರರಿಗೆ ಮತ್ತು ಪಾದಚಾರಿಗಳಿಗೆ ದುರ್ವಾಸನೆ ಬೀರುವ ಪ್ಲಾಸ್ಟಿಕ್ ತ್ಯಾಜ್ಯ, ಕೊಳಚೆ ನೀರು, ರಸ್ತೆಯಲ್ಲಿನ ಗುಂಡಿಗಳು ಸ್ವಾಗತಿಸುತ್ತವೆ.

ಅಂಬೇಡ್ಕರ್ ನಗರ, ವಾಲ್ಮೀಕಿ ವೃತ್ತ, ಅಂಗಡಿ ಸಂಗಣ್ಣ ಕ್ಯಾಂಪ್, ಲಿಂಗರಾಜ ಕ್ಯಾಂಪ್, ಇಸ್ಲಾಂಪುರ, ಬಸವಣ್ಣ ಸರ್ಕಲ್, ಗಾಂಧಿನಗರ, ಜೋಗೆರ ಓಣಿ, ಉಪ್ಪಾರ ಓಣಿ, ಚಲುವಾದಿ ಓಣಿ, ಗಸ್ತೇರ ಓಣಿ, ಹರಿಜನ ವಾರ್ಡ್ ಸೇರಿ ಅನೇಕ ಕೊಳೆಗೇರಿಗಳಲ್ಲಿ, ಚರಂಡಿಗಳಲ್ಲಿ ತ್ಯಾಜ್ಯ ಸಂಗ್ರಹವಾಗಿದೆ. ಕೊಳಚೆ ನೀರು ಸರಾಗವಾಗಿ ಹರಿಯಲು ಅವಕಾಶವೇ ಇಲ್ಲದಂತಾಗಿದೆ. ಇದರಿಂದಾಗಿ ಜನ ಮೂಗುಮುಚ್ಚಿಕೊಂಡು ಓಡಾಡುವ ಸ್ಥಿತಿ ಬಂದಿದೆ.

ಮಳೆ ನೀರು ರಸ್ತೆಗೆ: ಕಿಲ್ಲಾ ಏರಿಯಾ, ಲಕ್ಷ್ಮಿಕ್ಯಾಂಪ್, ಗುಂಡಮ್ಮ ಕ್ಯಾಂಪ್, ಮುರಾರಿ ನಗರ, ಹಮಾಲರ ಕಾಲೊನಿ, ಸರೋಜಮ್ಮ ಕಲ್ಯಾಣ ಮಂಟಪ ಬಳಿ, ಈದ್ಗಾ ಮೈದಾನದ ಬಳಿ ಸೇರಿ ನಗರದ ಪ್ರಮುಖ ಬಡಾವಣೆಗಳ ಒಳಭಾಗದಲ್ಲಿ ಬಹುತೇಕ ಕಾಂಕ್ರೀಟ್‌ ರಸ್ತೆಗಳು, ಚರಂಡಿಗಳು ಇಕ್ಕಟ್ಟಾಗಿದ್ದು ಮಳೆಗೆ ರಸ್ತೆಗೆ ಬಿದ್ದ ತ್ಯಾಜ್ಯ ಚರಂಡಿಗಳಿಗೆ ಸೇರಿ, ಕೊಳಚೆ ನೀರು ಸಂಚಾರಕ್ಕೆ ಸಮಸ್ಯೆಯಾಗುತ್ತದೆ.

ಗಂಗಾವತಿ ನಗರದ ಪ್ರಮುಖ ಒಳ ಮತ್ತು ಹೊರ ರಸ್ತೆಯ ಡೇಲಿ ಮಾರ್ಕೆಟ್, ಹಿರೇಜಂತಕಲ್, ಪಿಕಾರ್ಡ್ ಬ್ಯಾಂಕ್ ಎದುರು, ಕಿಲ್ಲಾ ಏರಿಯಾ, ಕನಕಗಿರಿ ರಸ್ತೆ, ಎಪಿಎಂಸಿ, ಗುಂಡಮ್ಮಕ್ಯಾಂಪ್, ಹಮಾಲರ ಕಾಲೊನಿ, ಮೆಹಬೂಬ ನಗರ, ಲಿಂಗರಾಜ್ ಕ್ಯಾಂಪ್, ಚಲುವಾದಿ ಓಣಿ, ಹೊಸಳ್ಳಿ, ಕೊಪ್ಪಳ ರಸ್ತೆ, ದೇವಘಾಟ್ ರಸ್ತೆಗಳಲ್ಲಿ ಒಂದು ಸುತ್ತು ಹಾಕಿದರೆ ತ್ಯಾಜ್ಯವೇ ಕಾಣಿಸುತ್ತದೆ. ಇದರಲ್ಲಿ ಬಿಡಾಡಿ ದನ, ಹಂದಿಗಳ ಹಾವಳಿ ಹೆಚ್ಚಾಗಿದೆ.

ಚರಂಡಿಗಳು, ಖಾಲಿ ನಿವೇಶನಗಳು ರೋಗ ಹರಡುವ ತಾಣಗಳಾಗಿವೆ. ಮುಂಗಾರಿನ ಸಮಯವಾದ ಕಾರಣ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಬರುತ್ತಿದೆ. ತೆಗ್ಗಿನ ಪ್ರದೇಶಗಳಲ್ಲಿ, ಖಾಲಿ ನಿವೇಶನಗಳಲ್ಲಿ, ಮುಳ್ಳುಕಂಟಿ, ಪಾಳುಬಿದ್ದ ಕೊಠಡಿಯಲ್ಲಿ, ತಾಜ್ಯದ ಜೊತೆಗೆ ಮಳೆನೀರು ಸಂಗ್ರಹವಾಗಿ ಸೊಳ್ಳೆಗಳು ಹಾವಳಿ ಹೆಚ್ಚಾಗುತ್ತಿವೆ. ಇದರಿಂದ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಸ್ಥಳೀಯ ಆಡಳಿತ ಈಗಲಾದರೂ ಎಚ್ಚೆತ್ತುಕೊಂಡು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಾರ್ವಜನಿಕರು ಹೇಳುತ್ತಾರೆ.

ಗಂಗಾವತಿ ಡೇಲಿ ಮಾರುಕಟ್ಟೆ ಹಿಂಬದಿ ಕೊಳಚೆ ನೀರಿನಲ್ಲಿ ತ್ಯಾಜ್ಯ
ಹಿರೇಜಂತಕಲ್ ಬಳಿ ಆನೆಗೊಂದಿ‌ ತೆರಳುವ ಮುಖ್ಯರಸ್ತೆಯ ಪಕ್ಕದಲ್ಲಿ ಎಸೆದಿರುವ ತ್ಯಾಜ್ಯ
ಜಯನಗರ ಕುಮಾರರಾಮ ಬಡವಾಣೆಯ ಚರಂಡಿಯಲ್ಲಿ ತ್ಯಾಜ್ಯ ಸಂಗ್ರಹವಾಗಿರುವುದು
ಕಿಲ್ಲಾ ಏರಿಯಾದ ಖಾಲಿ ನಿವೇಶನದಲ್ಲಿ ತ್ಯಾಜ್ಯ ಸಂಗ್ರಹವಾಗಿದ್ದು ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ
ಗುಂಡಮ್ಮ ಕ್ಯಾಂಪಿನಲ್ಲಿ  ಚರಂಡಿಯಲ್ಲಿ ತ್ಯಾಜ್ಯ ತುಂಬಿರುವುದು
ಲಕ್ಷ್ಮಿಕ್ಯಾಂಪಿನ ಜೈಭೀಮ್ ನಗರದ ಮುದಿಯಪ್ಪ ಎಂಬುವವರ ಮನೆ ಮುಂಭಾಗ ಮಳೆ ನೀರು ನಿಂತಿರುವುದು
ಎಚ್.ಆರ್.ಎಸ್ ಕಾಲೊನಿಯ ಖಾಲಿ ನಿವೇಶನದದಲ್ಲಿ ಕಸ ಎಸೆದಿರುವುದು
ಗುಂಡಮ್ಮ ಕ್ಯಾಂಪಿನ ಓಣಿಯೊಂದರ ಮನೆಯ ಬಳಿ ಚರಂಡಿ ನೀರು ಸಂಚರಿಸದೇ ದುರ್ವಾಸನೆ ಬೀರುತ್ತಿರುವುದು.
ಹಮಾಲರ ಕಾಲೊನಿಗೆ ತೆರಳುವ ರಸ್ತೆಯಲ್ಲಿ ತ್ಯಾಜ್ಯ ವಿಲೇವಾರಿ ಆಗದೇ ಇರುವುದು
ಕಿಲ್ಲಾ ಏರಿಯಾದ ಮುಖ್ಯರಸ್ತೆಯಲ್ಲಿ ಸಂಗ್ರಹವಾದ ತ್ಯಾಜ್ಯ
ಕುಮಾರರಾಮ ಬಡಾವಣೆಯ ಚರಂಡಿಯಲ್ಲಿ ಸಂಗ್ರಹವಾದ ಕಸ
ಮಳೆ ಬಂದರೆ ಸಾಕು ಮಳೆ ಮತ್ತು ಚರಂಡಿ ನೀರು ಮನೆಗೆ ನುಗ್ಗುತ್ತವೆ. ಮಲಗಲು ಜಾಗವೇ ಇರುವುದಿಲ್ಲ. ಮನೆ ಮುಂಭಾಗದ ಚರಂಡಿ ಎತ್ತರದಲ್ಲಿದ್ದು ಮನೆಬಳಿ ಸಂಗ್ರಹವಾದ ನೀರು ಚರಂಡಿಗೆ ಹೋಗುವುದಿಲ್ಲ.
ಮುದಿಯಪ್ಪ (ಜೈಭೀಮ್ ನಗರ) ಲಕ್ಷ್ಮಿಕ್ಯಾಂಪ್ ನಿವಾಸಿ
ನಮ್ಮ ಬಡಾವಣೆಯಲ್ಲಿನ ಚರಂಡಿಯಲ್ಲಿನ ಕಸ ತುಂಬಿರುವ ಕಾರಣ ನೀರು ಸರಾಗವಾಗಿ ಹೋಗದೆ ದುರ್ನಾತ ಬೀರುತ್ತಿದೆ. ಮಳೆಯಾದದೆ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತದೆ. ನಗರಸಭೆ ಅಧಿಕಾರಿಗಳು ಈ ಬಗ್ಗೆ ಕಾಳಜಿವಹಿಸಬೇಕು
ಗಾದಿಲಿಂಗಪ್ಪ ಕುಮಾರರಾಮ ಬಡಾವಣೆ ನಿವಾಸಿ
ಹಮಾಲರ ಕಾಲೊನಿಯಲ್ಲಿ ಅಸ್ವಚ್ಚತೆ ತಾಂಡವಾಡುತ್ತಿದೆ. ಸಮರ್ಪಕ ತ್ಯಾಜ್ಯ ನಿರ್ವಹಣೆಯೇ ಇಲ್ಲ. ಮಳೆಯಾದರೆ ಸಾಕು ಕಾಲೊನಿಗೆ ತೆರಳುವ ಮುಖ್ಯ ರಸ್ತೆಯಲ್ಲೇ ನೀರು ನಿಲ್ಲುತ್ತವೆ. ಮಹಿಳೆಯರು ವೃದ್ಧರು ಈ ರಸ್ತೆಯಲ್ಲಿ ಸಂಚರಿಸಲು ಪರದಾಡಬೇಕಾಗಿದೆ
ಶರಣಪ್ಪ ಕಲ್ಗುಡಿ ಹಮಾಲರ ಕಾಲೊನಿ ನಿವಾಸಿ
ಗುಂಡಮ್ಮ ಕ್ಯಾಂಪ್‌ನಲ್ಲಿ ಎತ್ತ ನೋಡಿದರೂ ದುರ್ವಾಸನೆ ಬೀರುವ ತ್ಯಾಜ್ಯವೇ ಕಾಣುತ್ತದೆ. ಚರಂಡಿ ಸ್ವಚ್ಚತೆಯಿಲ್ಲ. ಪ್ಲಾಸ್ಟಿಕ್ ಬಳಕೆಗೆ ಕಡಿವಾಣವಿಲ್ಲ. ದುರ್ವಾಸನೆ ಬೀರುವ ತ್ಯಾಜ್ಯದಿಂದ ರೋಗಗಳು ಬರುತ್ತವೆ. ಸ್ಥಳೀಯ ಆಡಳಿತ ಸ್ವಚ್ಛತೆಗೆ ಆದ್ಯತೆ ಕೊಡಬೇಕು
ಪ್ರಶಾಂತ ಗುಂಡಮ್ಮ ಕ್ಯಾಂಪ್ ನಿವಾಸಿ
ನಮ್ಮ ಕಾಲೊನಿಯಲ್ಲಿ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿಯಾಗದ ಕಾರಣ ನಿವಾಸಿಗಳು ಖಾಲಿ‌ ನಿವೇಶಗಳಲ್ಲಿ ಕಸ ಎಸೆಯುತ್ತಿದ್ದಾರೆ. ಅವು ರೋಗ ಹರಡುವ ತಾಣಗಳಾಗುತ್ತಿವೆ.
ರವಿಕುಮಾರ ಎಚ್.ಆರ್.ಎಸ್ ಕಾಲೋನಿ ನಿವಾಸಿ

‘ನಾಲ್ಕು ತಂಡಗಳ ರಚನೆ

ಗಂಗಾವತಿ: ಮಳೆಗಾಲದ ಸಮಯದಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಲು ತಂಡಗಳನ್ನು ರಚಿಸಲಾಗಿದೆ ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ತಿಳಿಸಿದರು. ‘ಮಳೆಗಾಲ ಆರಂಭವಾಗಿದ್ದು ಎಲ್ಲಿ ಹೆಚ್ಚು ನೀರು ನಿಲ್ಲುವ ಸಾಧ್ಯತೆಗಳು ಇವೆಯೊ ಅಂಥ ಸ್ಥಳಗಳನ್ನು ಗುರುತಿಸಿ ಆ ಸಮಸ್ಯೆ ಪರಿಹಾರಕ್ಕೆ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಕೂಡಲೇ ಚರಂಡಿಗಳಲ್ಲಿನ ತ್ಯಾಜ್ಯ ಸ್ವಚ್ಛಗೊಳಿಸಲಾಗುವುದು. ಖಾಲಿ ನಿವೇಶನಗಳಲ್ಲಿ ಆಸ್ವಚ್ಚತೆ ಇದ್ದರೆ ಆ ನಿವೇಶನದ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.