ADVERTISEMENT

ಮುನಿರಾಬಾದ್: ಸಂತೆಗೆ ಮಳೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 4:37 IST
Last Updated 23 ಜುಲೈ 2025, 4:37 IST
ಮುನಿರಾಬಾದ್ ಸಮೀಪ ಹುಲಿಗಿಯ ವಾರದ ಸಂತೆಗೆ ಬಂದ ಸಾರ್ವಜನಿಕರು ಛತ್ರಿ ಹಿಡಿದು ಸಾಗಿದರು
ಮುನಿರಾಬಾದ್ ಸಮೀಪ ಹುಲಿಗಿಯ ವಾರದ ಸಂತೆಗೆ ಬಂದ ಸಾರ್ವಜನಿಕರು ಛತ್ರಿ ಹಿಡಿದು ಸಾಗಿದರು   

ಮುನಿರಾಬಾದ್: ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಸಂಜೆ ಸಮಯದಲ್ಲಿ ಬರುತ್ತಿರುವ ಮಳೆಯ ಪರಿಣಾಮ ಗ್ರಾಮೀಣ ಪ್ರದೇಶದ ವಾರದ ಸಂತೆಯ ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಸಂಕಷ್ಟ ತಂದಿದೆ.

ಗ್ರಾಮೀಣ ಪ್ರದೇಶದ ನಾಗರಿಕರು ತಮ್ಮ ದಿನಸಿ ಮತ್ತು ತರಕಾರಿ ಖರೀದಿಗೆ ಹೆಚ್ಚಾಗಿ ವಾರದ ಸಂತೆಯನ್ನು ಅವಲಂಬಿಸಿದ್ದಾರೆ. ಆದರೆ ಕಳೆದ ಶನಿವಾರದಿಂದ ನಿರಂತರವಾಗಿ ಸಂಜೆ ಸಮಯದಲ್ಲಿ ಮಾತ್ರ ಬರುತ್ತಿರುವ ಮಳೆ ಗ್ರಾಹಕರು ಸೇರಿದಂತೆ ವ್ಯಾಪಾರಿಗಳನ್ನು ಸಂಕಷ್ಟಕ್ಕೆ ಈಡು ಮಾಡುತ್ತಿದೆ.

ಕೆಲವು ರೈತರು ತಾವು ಬೆಳೆದ ತರಕಾರಿಯನ್ನು ದೂರದ ಹೊಸಪೇಟೆ ಮತ್ತು ಕೊಪ್ಪಳದ ಮಾರುಕಟ್ಟೆಗೆ ಸಾಗಿಸದೇ, ವಿವಿಧ ಊರುಗಳ ಸಂತೆಯಲ್ಲಿ ಮಾರಾಟ ಮಾಡುವ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಸುತ್ತಲಿನ ಕಾರ್ಖಾನೆಯ ಕಾರ್ಮಿಕರು ಕೃಷಿ ಕೂಲಿ ಕಾರ್ಮಿಕರು ಗ್ರಾಮೀಣ ಸಂತೆಯನ್ನು ಅವಲಂಬಿಸಿದ್ದಾರೆ. ನಾಲ್ಕೈದು ದಿನ ಸಂಜೆಯ ಮಳೆ ಪರಿಣಾಮ ವ್ಯಾಪಾರ ಅಸ್ತವ್ಯಸ್ತವಾಗಿದೆ ಎನ್ನುತ್ತಾರೆ ಬೇವಿನಹಳ್ಳಿ ಗ್ರಾಮದ ರೈತ ಮುದುಕಪ್ಪ. ಹುಲಿಗಿ ಗ್ರಾಮದಲ್ಲಿ ಮಂಗಳವಾರ ನಡೆದ ವಾರದ ಸಂತೆಯಲ್ಲಿ ವ್ಯಾಪಾರಿಗಳು ಮತ್ತು ಗ್ರಾಹಕರು ಪ್ಲಾಸ್ಟಿಕ್ ಹಾಳೆ, ಛತ್ರಿ ಹಿಡಿದು ವ್ಯಾಪಾರ ಮಾಡಿದರು.

ADVERTISEMENT

ಶನಿವಾರ ಬೇವಿನಹಳ್ಳಿ, ಭಾನುವಾರ ಹೊಸಹಳ್ಳಿ, ಸೋಮವಾರ ಹಿಟ್ನಾಳ ಹಾಗೂ ಮಂಗಳವಾರ ಹುಲಿಗಿ ಗ್ರಾಮದ ವಾರದ ಸಂತೆ ಸಂಜೆಯ ಮಳೆಗೆ ಅಸ್ತ ವ್ಯಸ್ತಗೊಂಡಿದ್ದು, ಸಾರ್ವಜನಿಕರು ಮತ್ತು ವ್ಯಾಪಾರಿಗಳು ಪರದಾಡುವಂತಾಗಿದೆ.

ಮುನಿರಾಬಾದ್ ಸಮೀಪ ಹುಲಿಗಿಯಲ್ಲಿ ಮಂಗಳವಾರ ನಡೆದ ವಾರದ ಸಂತೆಯಲ್ಲಿ ವ್ಯಾಪಾರಿಗಳು ಪ್ಲಾಸ್ಟಿಕ್ ಹಾಳೆ ತಲೆಯ ಮೇಲೆ ಹಾಕಿಕೊಂಡು ವ್ಯಾಪಾರ ಮಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.