ADVERTISEMENT

ತರಕಾರಿ ವ್ಯಾಪಾರಸ್ಥರ ತೆರವು: ಆಕ್ರೋಶ

ಮೂರು ಬಾರಿ ಟೆಂಡರ್ ಕರೆದರೂ ಬಾರದ ವ್ಯಾಪಾರಸ್ಥರು: ಮುಗಿಯದ ಗೊಂದಲ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2018, 14:17 IST
Last Updated 24 ಅಕ್ಟೋಬರ್ 2018, 14:17 IST
ಕೊಪ್ಪಳದ ಜಯಪ್ರಕಾಶ ನಾರಾಯಣ (ಜೆ.ಪಿ) ಮಾರುಕಟ್ಟೆಯಲ್ಲಿ ಪೊಲೀಸರ ಸಮ್ಮುಖದಲ್ಲಿಯೇ  ನಗರಸಭೆ ಸಿಬ್ಬಂದಿ ಮತ್ತು ವ್ಯಾಪಾರಸ್ಥರ ಮಧ್ಯೆ ವಾಗ್ವಾದ ನಡೆಯಿತು
ಕೊಪ್ಪಳದ ಜಯಪ್ರಕಾಶ ನಾರಾಯಣ (ಜೆ.ಪಿ) ಮಾರುಕಟ್ಟೆಯಲ್ಲಿ ಪೊಲೀಸರ ಸಮ್ಮುಖದಲ್ಲಿಯೇ  ನಗರಸಭೆ ಸಿಬ್ಬಂದಿ ಮತ್ತು ವ್ಯಾಪಾರಸ್ಥರ ಮಧ್ಯೆ ವಾಗ್ವಾದ ನಡೆಯಿತು   

ಕೊಪ್ಪಳ: ನೂತನವಾಗಿ ನಿರ್ಮಿಸಲಾಗಿರುವ ಜಯಪ್ರಕಾಶ ನಾರಾಯಣ ಮಾರುಕಟ್ಟೆ (ಜೆ.ಪಿ ಮಾರ್ಕೆಟ್‌)ಯ ಮಳಿಗೆಗಳಲ್ಲಿ ತಾತ್ಕಲಿಕವಾಗಿ ವ್ಯಾಪಾರ ಮಾಡುತ್ತಿದ್ದ ತರಕಾರಿ ವ್ಯಾಪಾರಸ್ಥರನ್ನು ನಗರಸಭೆ ಸಿಬ್ಬಂದಿ ಬುಧವಾರ ಏಕಾಏಕಿ ತೆರವುಗೊಳಿಸಿದ್ದರಿಂದ ಮಾತಿನ ಚಕಮಕಿ ನಡೆಯಿತು

ಬೆಳಿಗ್ಗೆ ಮಾರುಕಟ್ಟೆಗೆ ಬಂದ ನಗರಸಭೆ ಸಿಬ್ಬಂದಿ 'ಈ ಮಳಿಗೆಗಳನ್ನು ಇನ್ನೂ ಬಾಡಿಗೆಗೆ ನೀಡಿಲ್ಲ. ನೀವು ಈ ಮಳಿಗೆಗಳಲ್ಲಿ ಅಕ್ರಮವಾಗಿ ವ್ಯಾಪಾರ ಮಾಡುತ್ತಿದ್ದೀರಿ. ಕೂಡಲೇ ನೀವು ಮಳಿಗೆ ಖಾಲಿ ಮಾಡಬೇಕು' ಎಂದು ಪೊಲೀಸರ ಸಮ್ಮುಖದಲ್ಲಿ ಅಲ್ಲಿನ ತರಕಾರಿ, ದಿನಸಿ ಚೀಲಗಳನ್ನು ಹೊರಗೆ ಎಸೆದು, ಮಳಿಗೆಗಳಿಗೆ ಬೀಗ ಹಾಕಿದ್ದಾರೆ.

ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಅಲ್ಲಿನ ವ್ಯಾಪಾರಸ್ಥರು ನಗರಸಭೆ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ADVERTISEMENT

ವ್ಯಾಪಾರಸ್ಥೆ ಗಂಗಮ್ಮ ಮಾತನಾಡಿ' ಕಳೆದ ಹತ್ತು ತಿಂಗಳ ಕೆಳಗೆ ನಮ್ಮನ್ನು ಸಾರ್ವಜನಿಕ ಮೈದಾನದಿಂದ ಒಕ್ಕಲೆಬ್ಬಿಸಲಾಯಿತು. ಅಲ್ಲಿಂದ ಈ ಮಾರುಕಟ್ಟೆಗೆ ಬಂದ ನಾವು ಇಲ್ಲೇ ವ್ಯಾಪಾರ ಮಾಡುತ್ತಿದ್ದೆವು. ಬಯಲಿನಲ್ಲಿ ವ್ಯಾಪಾರ ಮಾಡುತ್ತಿದ್ದರಿಂದ ಮಳೆ, ಬಿಸಿಲಿಗೆ ತರಕಾರಿ ಹಾಳಾಗುತ್ತಿತ್ತು. ಆದ್ದರಿಂದ ಖಾಲಿ ಇದ್ದ ಈ ನೂತನ ಮಳಿಗೆಗಳಲ್ಲಿ ಅವುಗಳನ್ನು ಇಡುತ್ತಿದ್ದೆವು. ನಗರಸಭೆ ಸಿಬ್ಬಂದಿ ಏಕಾಏಕಿ ಸ್ಥಳಕ್ಕಾಗಮಿಸಿ ನಮ್ಮ ತರಕಾರಿ, ಸಾಮಾನುಗಳನ್ನು ಹೊರಗೆಸೆದು ದರ್ಪ ತೋರುತ್ತಿದ್ದಾರೆ. ಒಂದು ದಿನ ಮುಂಚಿತವಾಗಿ ಹೇಳಿದ್ದರೆ ನಾವೇ ಖಾಲಿ ಮಾಡುತ್ತಿದ್ದೆವು. ತರಕಾರಿ ಹೊರಗೆಸೆದಿರುವುದರಿಂದ ಅವು ಹಾಳಾಗಿವೆ' ಎಂದು ತಮ್ಮ ಅಳಲು ತೋಡಿಕೊಂಡರು.

ಮತ್ತೊಬ್ಬ ವ್ಯಾಪಾರಸ್ಥೆ ಮಂಜುಳಾ ಮಾತನಾಡಿ, 'ನೂತನ ಮಳಿಗೆಗಳನ್ನು ನಿರ್ಮಿಸಲಾಗಿದೆ. ನೀವು ಅಲ್ಲಿಗೆ ಹೋಗಿ ವ್ಯಾಪಾರ ಮಾಡಿ ಎಂದು ನಗರಸಭೆ ಈ ಹಿಂದೆ ಹೇಳಿ ನಮ್ಮನ್ನು ಇಲ್ಲಿಗೆ ಕಳುಹಿಸಿತ್ತು. ಕಳೆದ ಹತ್ತು ತಿಂಗಳಿನಿಂದ ನಮಗೆ ಮಳಿಗೆಗಳನ್ನು ನೀಡಿಲ್ಲ. ಅಲ್ಲದೆ ಇಲ್ಲಿ ಯಾವುದೇ ಸೌಕರ್ಯಗಳಿಲ್ಲ. ಅನಿವಾರ್ಯವಾಗಿ ನಾವು ಇಲ್ಲಿಗೆ ಬಂದು ವ್ಯಾಪಾರ ನಡೆಸುತ್ತಿದ್ದೇವೆ' ಎಂದರು.

'ತರಕಾರಿ ವ್ಯಾಪಾರ ಬಿಟ್ಟರೆ ನಮಗೆ ಬೇರೆ ಕಾಯಕ ಗೊತ್ತಿಲ್ಲ. ಈ ರೀತಿ ಏಕಾಏಕಿ ಮಳಿಗೆ ಖಾಲಿ ಮಾಡಿಸಿರುವುದು ಅನ್ಯಾಯ. ಮಾನವೀಯತೆ ದೃಷ್ಠಿಯಿಂದಾದರೂ ನಗರಸಭೆ ಸಿಬ್ಬಂದಿ ಒಂದು ದಿನ ಮುಂಚಿತವಾಗಿ ನಮಗೆ ಮಾಹಿತಿ ನೀಡಬೇಕಿತ್ತು' ಎಂದು ಹೇಳಿದರು.

'ನಾವು ಬಾಡಿಗೆ ಭರಿಸಲು ಸಿದ್ಧರಿದ್ದೇವೆ. ಆದರೆ ನಗರಸಭೆ ಈ ಮಳಿಗೆಗಳನ್ನು ಬಾಡಿಗೆಗೆ ನೀಡುತ್ತಿಲ್ಲ. ಹೀಗಾದರೆ ನಾವು ಎಲ್ಲಿಗೆ ಹೋಗುವುದು' ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.