ADVERTISEMENT

ಒಳಮೀಸಲಾತಿ | ಲೋಪಗಳ ಪರಿಶೀಲನೆಗೆ ಉಪಸಮಿತಿ ರಚಿಸಿ: ಕೃಷ್ಣ ಇಟ್ಟಂಗಿ

ನಾಗಮೋಹನದಾಸ್‌ ವರದಿಯಲ್ಲಿ ಅನೇಕ ಲೋಪಗಳು; ಆರೋಪ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 6:14 IST
Last Updated 14 ಆಗಸ್ಟ್ 2025, 6:14 IST
<div class="paragraphs"><p>ಕೃಷ್ಣ ಇಟ್ಟಂಗಿ</p></div>

ಕೃಷ್ಣ ಇಟ್ಟಂಗಿ

   

ಕೊಪ್ಪಳ: ‘ಒಳಮೀಸಲಾತಿ ಜಾರಿಗೆ ರಚಿಸಲಾಗಿದ್ದ ನಾಗಮೋಹನ್‌ದಾಸ್‌ ವರದಿಯಲ್ಲಿ ಅನೇಕ ಲೋಪಗಳಿದ್ದು, ಇದರಿಂದ ಬಲಗೈ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ನಮ್ಮ ಸಮುದಾಯದ ಬಗ್ಗೆ ಪೂರ್ವಗ್ರಹ ಪೀಡಿತರಾಗಿ ಅವರು ವರದಿ ನೀಡಿದ್ದು ವರದಿಯಲ್ಲಿನ ಲೋಪಗಳ ಬಗ್ಗೆ ಪರಿಶೀಲನೆಗೆ ಸಂಪುಟ ಉಪಸಮಿತಿ ರಚಿಸಬೇಕು’ ಎಂದು ಕರ್ನಾಟಕ ಚಲವಾದಿ ಮಹಾಸಭಾದ ಮುಖಂಡರು ಆಗ್ರಹಿಸಿದ್ದಾರೆ.

ಸಮುದಾಯದ ಮುಖಂಡ ಕೃಷ್ಣ ಇಟ್ಟಂಗಿ ಅವರು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ‘ನಾಗಮೋಹನದಾಸ್‌ ವರದಿಯನ್ನು ಸಚಿವ ಸಂಪುಟ ಒಪ್ಪಬಾರದು. ಮಾದಿಗ ಸಮುದಾಯಕ್ಕೆ ಎಷ್ಟೇ ಮೀಸಲಾತಿ ಕೊಟ್ಟರೂ ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ ನಮಗೆ ಆದ ಅನ್ಯಾಯ ಸರಿಪಡಿಸಿ ವರದಿ ಜಾರಿ ಮಾಡಬೇಕು. ಸಮೀಕ್ಷೆ ವೇಳೆ ಅನುಸರಿಸಬೇಕಿದ್ದ ಅನೇಕ ಕ್ರಮಗಳನ್ನು ಪಾಲನೆ ಮಾಡಿಲ್ಲ. ಗ್ರಾಮಾಂತರ ಗ್ರಾಮ ಪಂಚಾಯಿತಿ ಕಚೇರಿ, ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲಿ ಬೂತ್‌ಗಳನ್ನು ಆರಂಭಿಸಿ ಸಮೀಕ್ಷೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದ್ದರೂ ಆಯೋಗ ಅದನ್ನು ಮಾಡಿಲ್ಲ’ ಎಂದರು. 

ADVERTISEMENT

‘ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸದೇ ಸಮೀಕ್ಷೆ ಮಾಡಿರುವ ಕಾರಣ ಈ ದತ್ತಾಂಶಗಳನ್ನು ದೃಢೀಕರಿಸಲು 15 ದಿನ ಅವಕಾಶ ಕೊಡಬೇಕು. ಆಕ್ಷೇಪಣೆಗಳನ್ನು ತಂತ್ರಾಂಶದ ಮೂಲಕ ಆಹ್ವಾನಿಸಬೇಕು. ಆಯೋಗವು ದುರುದ್ದೇಶಪೂರ್ವಕವಾಗಿ ಪರೈಯ್ಯ ಪರವನ್‌ ಸಮುದಾಯವನ್ನು ಎಡಗೈ ಗುಂಪಿಗೆ ಸೇರಿಸಿರುವುದನ್ನು ರದ್ದುಪಡಿಸಿ ಬಲಗೈ ಗುಂಪಿಗೆ ಸೇರ್ಪಡೆ ಮಾಡಬೇಕು. ಜಾತಿಗಳೇ ಇಲ್ಲದ ಆದಿ ಕರ್ನಾಟಕ, ಆದಿ ದ್ರಾವಡಿ, ಆದಿ ಆಂಧ್ರ ಸಮೂಹಗಳಿಗೆ ನಿಗದಿಪಡಿಸಿರುವ ಶೇ 1ರಷ್ಟು ಮೀಸಲಾತಿ ರದ್ದುಪಡಿಸಿ ಆಯಾ ಜಾತಿಗಳಿಗೆ ಮರುಹಂಚಿಕೆ ಮಾಡಬೇಕು ಎನ್ನುವುದು ಎಲ್ಲ ಬಲಗೈ, ಚಲವಾದಿ ಹಾಗೂ ಹೊಲೆಯ ಸಮುದಾಯದ ಸಂಘಟನೆಗಳ ಬೇಡಿಕೆಯಾಗಿದೆ. ಇದನ್ನು ಸರ್ಕಾರದ ಗಮನಕ್ಕೂ ತರಲಾಗಿದೆ’ ಎಂದು ತಿಳಿಸಿದರು.

ಮುಖಂಡರಾದ ಸಿದ್ದು ಮ್ಯಾಗೇರಿ, ನಾಗರಾಜ್ ನಂದಾಪುರ, ಶಾಂತಕುಮಾರ್ ಎಸ್‌., ಹುಸೇನಪ್ಪ ಹಂಚನಾಳ, ಕಾಶಪ್ಪ ಚಲವಾದಿ, ಮಾರ್ಕೆಂಡಪ್ಪ ಬೆಲ್ಲದ, ಮಂಜುನಾಥ ಆರತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.