ಕನಕಗಿರಿ: ‘ಪ್ರತಿ ಜಾಬ್ ಕಾರ್ಡ್‌ಗೂ ನರೇಗಾ ಯೋಜನೆಯಡಿ 100 ದಿನಗಳ ಕೆಲಸ ನೀಡಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕಿ ಶರಪುನ್ನಿಸಾ ಬೇಗಂ ಹೇಳಿದರು.
ತಾಲ್ಲೂಕಿನ ಹುಲಿಹೈದರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನಕಾಪುರ ಗ್ರಾಮದಲ್ಲಿ ಮಂಗಳವಾರ ನರೇಗಾ ಕೂಲಿಕಾರರೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ‘ಗ್ರಾಮದ ಕೂಲಿಕಾರರು ನರೇಗಾ ಯೋಜನೆಯಡಿ ಕೆಲಸ ನೀಡಲು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ತಮಗೆ ಮೂರು ತಿಂಗಳುಗಳ ಕಾಲ ನಿರಂತರವಾಗಿ ಕೆಲಸ ನೀಡಲಾಗುವುದು’ ಎಂದು ತಿಳಿಸಿದರು.
‘ನರೇಗಾ ಯೋಜನೆಯಡಿ ಸಮುದಾಯ ಕಾಮಗಾರಿಗಳು ಅಷ್ಟೇ ಅಲ್ಲದೇ, ವೈಯಕ್ತಿಕ ಕಾಮಗಾರಿ ಕೆಲಸಗಳನ್ನು ಮಾಡಿಕೊಳ್ಳಲು ಅವಕಾಶವಿದ್ದು, ರೈತರು ಯೋಜನೆಯ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು. ಇನ್ನು, ಜಾಬ್ ಕಾರ್ಡ್‌ಗಳನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕು. ಅದನ್ನು ಯಾರಿಗೂ ಕೊಡಬಾರದು. ಸಾಕಷ್ಟು ಕೂಲಿಕಾರರಿಗೆ ಜಾಬ್ ಕಾರ್ಡ್‌ಗಳ ವಿತರಣೆ ಆಗಿರುವುದಿಲ್ಲ. ಹೊಸ ಜಾಬ್ ಕಾರ್ಡ್‌ಗಳು ಬಂದ ನಂತರ ವಿತರಣೆ ಮಾಡಲಾಗುವುದು. ಅಲ್ಲಿಯವರೆಗೆ ಆನ್‌ಲೈನ್ ಜಾಬ್ ಕಾರ್ಡ್‌ಗಳನ್ನು ಪ್ರಿಂಟ್ ತೆಗೆದು ಕೊಡುವ ವ್ಯವಸ್ಥೆ ಮಾಡಲಾಗುವುದು’ ಎಂದರು.
ಇದಕ್ಕೂ ಮುನ್ನ ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಮನೆ ಮನೆ ಭೇಟಿ ನೀಡಿ ಉದ್ಯೋಗ ಖಾತ್ರಿ ಕೆಲಸಕ್ಕೆ ಬರಲು ಕೂಲಿಕಾರರಿಗೆ ಬೇಡಿಕೆ ಸಲ್ಲಿಸುವಂತೆ ಮನವಿ ಮಾಡಿದರು. ಜೊತೆಗೆ ಗ್ರಾ.ಪಂ ಕಚೇರಿಗೆ ಭೇಟಿ ನೀಡಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ತಿಳಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಐಇಸಿ ಸಂಯೋಜಕ ಶಿವಕುಮಾರ ಕೆ, ಎನ್.ಆರ್.ಎಲ್.ಎಂ ಸಂಯೋಜಕಿ ರೇಣುಕಾ, ತಾಂತ್ರಿಕ ಸಹಾಯಕ ಚನ್ನಬಸವ, ಬಿಎಫ್.ಟಿ ಹನುಮೇಶ, ಕರವಸೂಲಿಗಾರ ನಾಗೇಶ ನಾಯಕ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.