ಕೊಪ್ಪಳ: ನಗರದ ಸಮೀಪದಲ್ಲಿಯೇ ಬಲ್ಡೋಟಾದಂತಹ ಬೃಹತ್ ಉಕ್ಕಿನ ಕಾರ್ಖಾನೆ ಮತ್ತು ಹಲವು ಹಳ್ಳಿಗಳಿಗೆ ಹೊಂದಿಕೊಂಡಿರುವ ಕಿರ್ಲೋಸ್ಕರ್ ಸೇರಿ ವಿವಿಧ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಜಿಲ್ಲೆಯ ಜನಪ್ರತಿನಿಧಿಗಳ ಭೇಟಿ ಮಾಡುವ ಸಭೆಯಲ್ಲಿ ಇತ್ತೀಚೆಗೆ ಸಂಸದ ಕೆ. ರಾಜಶೇಖರ ಹಿಟ್ನಾಳ ಮಾತನಾಡಿ ’ನಮಗೆ ಕಾರ್ಖಾನೆ ವಿಸ್ತರಣೆ ಮಾಡುವುದು ಬೇಕಿಲ್ಲ. ಇದಕ್ಕೆ ಅವಕಾಶ ಕೊಡುವುದಿಲ್ಲ’ ಎಂದರು.
ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ ‘ಯಾವುದೇ ಕಾರಣಕ್ಕೂ ಕಾರ್ಖಾನೆ ಬೇಡ, ಹೋರಾಟದ ಪರವಾಗಿ ಇದ್ದು, ಶಾಸಕರು ಸೇರಿದಂತೆ ಎಲ್ಲರ ಬೆಂಬಲ ಪಡೆದು ಅಗತ್ಯಬಿದ್ದರೆ ಇನ್ನೊಂದು ಬೃಹತ್ ಹೋರಾಟ ಮಾಡೋಣ, ಅದಕ್ಕೂ ಮೊದಲ ರಾಜ್ಯ ಸರ್ಕಾರದ ಸಚಿವರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳುತ್ತೇನೆ’ ಎಂದು ತಿಳಿಸಿದರು.
‘ನಾವು ಇಲ್ಲಿ ನೆಮ್ಮದಿಯ ಜೀವನ ನಡೆಸಬೇಕಿದೆ, ಉಳಿದ ಹಲವು ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಆಯುಷ್ಯವೇ ಕಮ್ಮಿ ಆಗಿದೆ, ಹಲವು ರೋಗಗಳು ಬಂದಿವೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಕಾರ್ಖಾನೆ ವಿರುದ್ಧ ಗಟ್ಟಿಯಾಗಿ ನಿಂತಿದ್ದೇನೆ’ ಎಂದರು.
ಕ್ರಿಯಾ ವೇದಿಕೆಯ ಪ್ರಮುಖರಾದ ಅಲ್ಲಮಪ್ರಭು ಬೆಟ್ಟದೂರು, ಬಸವರಾಜ ಶೀಲವಂತರ, ಕೆ.ಬಿ. ಗೋನಾಳ, ಮಹಾಂತೇಶ ಕೊತಬಾಳ, ಸೋಮರಡ್ಡಿ ಅಳವಂಡಿ, ಮಂಜುನಾಥ ಗೊಂಡಬಾಳ, ರಾಜು ಬಾಕಳೆ, ಡಿ.ಎಂ. ಬಡಿಗೇರ, ಶರಣು ಗಡ್ಡಿ, ಡಾ. ಮಂಜುನಾಥ ಸಜ್ಜನ್, ಶರಣು ಶೆಟ್ಟರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.