ADVERTISEMENT

ಮನೆಯ ಗುರುತೇ ಇಲ್ಲ, ನೋವಿನ ಕಥೆಯೇ ಎಲ್ಲ...

ಮೈಮೇಲೆ ಗೋಡೆಯ ಕಲ್ಲು ಉರುಳಿದರೂ ಪವಾಡಸದೃಶ ರೀತಿಯಲ್ಲಿ ಬದುಕಿದ ಏಳು ಜನ

ಪ್ರಮೋದ
Published 1 ಆಗಸ್ಟ್ 2022, 3:53 IST
Last Updated 1 ಆಗಸ್ಟ್ 2022, 3:53 IST
ಕೊಪ್ಪಳದಲ್ಲಿ ಶುಕ್ರವಾರ ತಡರಾತ್ರಿ ಸುರಿದ ರಭಸದ ಮಳೆಗೆ ಕುವೆಂಪು ನಗರದಲ್ಲಿ ಶೇಂಗಾ ಮಿಲ್‌ ಗೋಡೆ ಕುಸಿದು ಮನೆ ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿರುವುದು –ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರ
ಕೊಪ್ಪಳದಲ್ಲಿ ಶುಕ್ರವಾರ ತಡರಾತ್ರಿ ಸುರಿದ ರಭಸದ ಮಳೆಗೆ ಕುವೆಂಪು ನಗರದಲ್ಲಿ ಶೇಂಗಾ ಮಿಲ್‌ ಗೋಡೆ ಕುಸಿದು ಮನೆ ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿರುವುದು –ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರ   

ಕೊಪ್ಪಳ: ಇದೇ ಗೋಡೆ ನೋಡಿ ಕುಸಿದಿದ್ದು ಎಂದು ಮನೆಯವರು ಹೇಳಿದರು. ಸುತ್ತ ಕಣ್ಣು ಹಾಯಿಸಿದರೆ ಎಲ್ಲಿಯೂ ಗೋಡೆಯ ಗುರುತೇ ಇಲ್ಲ; ಎಲ್ಲವೂ ನೆಲಸಮ. ಕಣ್ಣೆದುರು ಇದ್ದಿದ್ದು ಪವಾಡಸದೃಢ ರೀತಿಯಲ್ಲಿ ಸಾವು ಜಯಿಸಿ ಬಂದ ಏಳು ಜನರ ಕಣ್ಣೀರು. ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮನೆಬಳಕೆ ಸಾಮಗ್ರಿಗಳು ಹಾಗೂ ಮಕ್ಕಳ ಬದುಕಿಗೆ ದೀವಿಗೆಯಾಗಬೇಕಿದ್ದ ಪುಸ್ತಕಗಳು.

ಇದು ಇಲ್ಲಿನ ಮೂರನೇ ವಾರ್ಡ್‌ ವ್ಯಾಪ್ತಿಯಲ್ಲಿ ಬರುವ ಕುವೆಂಪು ನಗರ (500 ಪ್ಲಾಟ್‌) ಆಶ್ರಯ ಕಾಲೊನಿಯ ಪ್ರಕಾಶ ವಟ್ಟಿ ಅವರ ಕುಟುಂಬಕ್ಕೆ ಎದುರಾಗಿರುವ ಸ್ಥಿತಿ.

ಶುಕ್ರವಾರ ತಡರಾತ್ರಿ ಸುರಿದ ರಭಸದ ಮಳೆಗೆ ಗೊಂಡಬಾಳ ಶೇಂಗಾ ಮಿಲ್‌ನ ಗೋಡೆ ಕುಸಿದು ಒಂದೇ ಕುಟುಂಬದ ನಾಲ್ವರು ಜನ ಗಾಯಗೊಂಡಿದ್ದಾರೆ. ಗೋಡೆಗೆ ಅಂಟಿಕೊಂಡಿದ್ದ ಮನೆ ನೆಲಸಮವಾಗಿದೆ. ಪ್ರಕಾಶ ವಟ್ಟಿ ಅವರ ಮನೆಯ ಸಾಮಗ್ರಿಗಳೆಲ್ಲ ನೀರು ಪಾಲಾಗಿವೆ.

ADVERTISEMENT

ಪ್ರಕಾಶ, ಅವರ ಪತ್ನಿ ನೀಲಮ್ಮ ವಟ್ಟಿ, ಮಕ್ಕಳಾದ ಚೇತನ್‌ ಮತ್ತು ಕಾರ್ತಿಕ್‌ ಜೊತೆ ವಾಸವಾಗಿದ್ದರು. ನೀಲಮ್ಮ ಅವರ ಸಹೋದರಿಕಮಲಮ್ಮ ಪಕ್ಕದ ಮನೆಯಲ್ಲಿದ್ದರು. ರಾತ್ರಿ 12.30ರ ಸುಮಾರಿಗೆ ಗೋಡೆ ಏಕಾಏಕಿ ಬಿದ್ದು ಕಮಲಮ್ಮ ಅವರ ಮನೆ ನೆಲಸಮವಾಗಿದೆ. ಪ್ರಕಾಶ ಅವರ ಮನೆಯ ಸಾಮಗ್ರಿಗಳೆಲ್ಲವೂ ನೀರಿನಲ್ಲಿ ನೆಂದು ಹೋಗಿದ್ದು, ಕೆಲವು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿವೆ.

ನೀಲಮ್ಮ ಜೀವನ ನಿರ್ವಹಣೆಗಾಗಿ ಬಟ್ಟೆ ಹೊಲಿಯುವ ಕೆಲಸ ಮಾಡುತ್ತಿದ್ದರು. ಹೊಲಿಗೆ ಯಂತ್ರ, ಅದರ ಸಾಮಗ್ರಿಗಳು, ನಾಗರಪಂಚಮಿ ಹಬ್ಬಕ್ಕೆಂದು ಜನ ಹೊಲಿಯಲು ಕೊಟ್ಟಿದ್ದ ಬಟ್ಟೆಗಳೆಲ್ಲವೂ ಗೋಡೆಗಳ ಕೆಳಗೆ ನೆಲಸಮವಾಗಿವೆ.

‘ಪಂಚಮಿ ಹಬ್ಬಕ್ಕೆ ಸಾಕಷ್ಟು ಜನ ಬಟ್ಟೆ ಹೊಲಿಯಲು ಕೊಟ್ಟಿದ್ದರು. ಅವರಿಗೆ ಏನು ಉತ್ತರ ಹೇಳಬೇಕು ಎನ್ನುವುದೇ ತೋಚದಾಗಿದೆ. ಏಕಾಏಕಿ ಬಿದ್ದ ಕಲ್ಲುಗಳ ಅಡಿಯಲ್ಲಿ ಸಿಲುಕಿದ್ದಾಗ ಸತ್ತು ಹೋದೆವು ಅಂದುಕೊಂಡಿದ್ದೆವು. ದೇವರೇ ನಮ್ಮೆಲ್ಲರನ್ನೂ ಕಾಪಾಡಿದ್ದಾನೆ’ ಎಂದು ನೀಲಮ್ಮ ಕಣ್ಣೀರಾದರು.

ಘಟನೆಯನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡ ಪ್ರಕಾಶ ’ರಾತ್ರಿ ಮಲಗಿದ್ದಾಗ ಕಲ್ಲುಗಳು ನನ್ನ ಕಾಲುಗಳ ಮೇಲೆ ಬಿದ್ದವು. ಪತ್ನಿ ಹಾಗೂ ಮಕ್ಕಳನ್ನು ಮೊದಲು ರಕ್ಷಿಸಿ ನಾನು ಮನೆಯಿಂದ ಹೊರಬಂದೆ. ನಮಗೆಲ್ಲರಿಗೂ ಇದು ಪುನರ್ಜನ್ಮ. ಇಂಥ ದಯನೀಯ ಸ್ಥಿತಿ ಯಾರಿಗೂ ಬರಬಾರದು’ ಎಂದು ಕಣ್ಣೀರು ಸುರಿಸಿದರು.

ಕೊಚ್ಚಿ ಹೋದ ಪುಸ್ತಕ, ನೆರವಿಗೆ ಕಾಯುತ್ತಿರುವ ಮಕ್ಕಳು

ಕೊಪ್ಪಳ: ಆ ಎರಡು ಮನೆಗಳಲ್ಲಿ ಇರುವ ನಾಲ್ಕು ಮಕ್ಕಳ ಪುಸ್ತಕಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಕೆಲವು ನೆಂದು ಓದಲೂ ಆಗದ ಸ್ಥಿತಿಯಲ್ಲಿವೆ.

ಪವಿತ್ರಾ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಬಿಕಾಂ, ಪ್ರವೀಣ ಗವಿಸಿದ್ದೇಶ್ವರ ಕಾಲೇಜಿನಲ್ಇ ಬಿಎ ದ್ವಿತೀಯ ವರ್ಷ ಓದುತ್ತಿದ್ದಾರೆ.

ಪ್ರಕಾಶ–ನೀಲಮ್ಮ ವಟ್ಟಿ ದಂಪತಿಯ ಮಕ್ಕಳದಾ ಚೇತನ (8ನೇ ತರಗತಿ) ಮತ್ತು ಕಾರ್ತಿಕ್‌ (7ನೇ ತರಗತಿ) ಗವಿಸಿದ್ದೇಶ್ವರ ಹೈಸ್ಕೂಲ್‌ನಲ್ಲಿ ಓದುತ್ತಿದ್ದು, ಭವಿಷ್ಯದ ಚಿಂತೆ ಏನು ಎನ್ನುವ ಆತಂಕ ಅವರನ್ನು ಕಾಡುತ್ತಿದೆ.

’ಶೇಂಗಾ ಮಿಲ್‌ನವರ ನಿರ್ಲಕ್ಷ್ಯಕ್ಕೆ ನಾವು ಹೆಣವಾಗುತ್ತಿದ್ದೆವು. ಗವಿಸಿದ್ದೇಶ್ವರ ದಯೆಯಿಂದ ಬದುಕಿದೆವು’ ಎಂದು ಪ್ರವೀಣ ಮತ್ತು ಪವಿತ್ರಾ ಭಾವುಕರಾದರು. ನೆರವು ನೀಡಲು ಬಯಸುವವರು 7259129697 ಸಂಪರ್ಕಿಸಿ.

ಮಗಳ ಮದುವೆಗೆ ಇಟ್ಟಿದ್ದ ಸಾಮಗ್ರಿ ನೀರು ಪಾಲು

ಕೊಪ್ಪಳ: ಮಗಳ ಮದುವೆ ನಿಶ್ಚಯ ಮಾಡಿ ತೆಗೆದಿಟ್ಟದ ಚಿನ್ನದ ಆಭರಣಗಳು ಹಾಗೂ ಸಾಮಗ್ರಿಗಳು ನೀರು ಪಾಲಾಗಿವೆ. ಇನ್ನೂ ಕೆಲವು ನೆಲಸಮವಾದ ಗೋಡೆಯ ಕೆಳಗೆ ಬಿದ್ದಿವೆ ಎಂದು ಕಮಲಮ್ಮ ತಿಳಿಸಿದರು.

‘ಪತಿ ತೀರಿಕೊಂಡಿದ್ದರಿಂದ ನನ್ನ ತಂದೆ ಮೊಮ್ಮಗಳ ಮದುವೆಗೆಂದು ಒಂದಷ್ಟು ಹಣ ಕೊಟ್ಟಿದ್ದರು. ನಾನು ಕೈಲಾದಷ್ಟು ಆಭರಣ ಮಾಡಿಸಿದ್ದೆ. ಎಲ್ಲವೂ ಕೊಚ್ಚಿಕೊಂಡು ಹೋಗಿವೆ. ಜೀವ ಉಳಿದಿದೆ ಎನ್ನುವುದಷ್ಟೇ ಸಮಾಧಾನ’ ಎಂದರು.

***

ನಮಗೆ ಸದ್ಯಕ್ಕೆ ಹಣದ ನೆರವು ಬೇಡ. ಬದುಕಲು ಗಂಜಿ ಸಿಕ್ಕರೂ ಸಾಕು. ಅದುವೇ ದೊಡ್ಡ ಸಹಾಯ.
- ಶಿವಕುಮಾರ್‌, ನೀಲಮ್ಮ ವಟ್ಟಿ ತಂದೆ

***

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಸರ್ಕಾರದಿಂದ ಸಿಗುವ ಎಲ್ಲಾ ಪರಿಹಾರವನ್ನು ಒದಗಿಸಿಕೊಡಲಾಗುವುದು.
- ಎಚ್‌.ಎನ್‌. ಭಜಕ್ಕನವರ, ನಗರಸಭೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.