ADVERTISEMENT

ಕೊಪ್ಪಳ | ಸಮಯ ಕೊಟ್ಟು ಸಭೆಗೆ ಬಾರದ ಶಾಸಕ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 15:27 IST
Last Updated 30 ಜೂನ್ 2025, 15:27 IST
ಅಲ್ಲಮಪ್ರಭು ಬೆಟ್ಟದೂರು
ಅಲ್ಲಮಪ್ರಭು ಬೆಟ್ಟದೂರು   

ಕೊಪ್ಪಳ: ಜಿಲ್ಲಾಕೇಂದ್ರದ ಸಮೀಪದಲ್ಲಿ ಬಲ್ಡೋಟಾ ಕಂಪನಿ ತನ್ನ ಉಕ್ಕು ತಯಾರಿಕೆ ಕಾರ್ಖಾನೆಯನ್ನು ವಿಸ್ತರಿಸಲು ಮುಂದಾಗಿದ್ದಕ್ಕೆ ವಿರೋಧ ವ್ಯಕ್ತಪಡಿಸಿ ಕೊಪ್ಪಳ ಜಿಲ್ಲಾ ಬಚಾವೊ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ವಿವಿಧ ಹಂತಗಳಲ್ಲಿ ಹೋರಾಟಗಳನ್ನು ನಡೆಸುತ್ತಿದೆ.  

ಇದರ ಭಾಗವಾಗಿ ಸಂಘಟನೆಯು ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ಭೇಟಿಯಾಗಲು ಜೂನ್‌ 28ರಂದು ಮಧ್ಯಾಹ್ನ 12 ಗಂಟೆಗೆ ನಗರದಲ್ಲಿ ಸಭೆ ಹಮ್ಮಿಕೊಂಡಿತ್ತು. ಶಾಸಕರು ಸಮಯಕ್ಕೆ ಸರಿಯಾಗಿ ಬರುವುದಾಗಿ ಹೇಳಿದ್ದರಿಂದ ಸಂಘಟನೆಗಳ ಪದಾಧಿಕಾರಿಗಳು ಕಾಯುತ್ತಿದ್ದರು. ಬಳಿಕ ಮೂರು ಗಂಟೆಗೆ ಬರುವುದಾಗಿ ತಿಳಿಸಿದ್ದರಿಂದ ಕಾಯುತ್ತಲೇ ಇದ್ದರೂ ಶಾಸಕ ಹಿಟ್ನಾಳ ಬರಲಿಲ್ಲ.

ಇದರಿಂದ ಆಕ್ರೋಶಗೊಂಡ ಪದಾಧಿಕಾರಿಗಳು ಸಭೆಯನ್ನು ರದ್ದು ಮಾಡಿದರು. ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಜಂಟಿ ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಅವರು ’ಸಮಯ ಕೊಟ್ಟ ಮೇಲೆ ಸರಿಯಾಗಿ ಸಭೆಗೆ ಬರುವುದು ಶಾಸಕರ ಜವಾಬ್ದಾರಿಯಾಗಿತ್ತು. ಬರುವ ನಿರೀಕ್ಷೆಯಲ್ಲಿ ಸಾಕಷ್ಟು ಹೊತ್ತು ಕಾದರೂ ಬಾರದ ಕಾರಣ ಹೋರಾಟಗಾರರಿಗೆ ಅವಮಾನವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಇನ್ನು ಮುಂದೆ ಯಾವುದೇ ಕಾರಣಕ್ಕೂ ಅವರನ್ನು ಕಾಯುವುದಿಲ್ಲ. ಅವರಾಗಿಯೇ ನಮ್ಮನ್ನು ಸಂಪರ್ಕಿಸಲಿ. ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತಿರುತ್ತದೆ’ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.