ADVERTISEMENT

ಕೊಪ್ಪಳ: ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

ವಿಧಾನಸಭಾ ಚುನಾವಣಾ ಅಖಾಡಕ್ಕೆ ‘ಸರ್ವೋದಯ’

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 5:24 IST
Last Updated 26 ನವೆಂಬರ್ 2022, 5:24 IST

ಕೊಪ್ಪಳ: ಕೇಂದ್ರ ಸರ್ಕಾರ ಪ್ರಮುಖ ಮೂರು ಕೃಷಿ ಕಾಯಿದೆಗಳನ್ನು ವಾಪಸ್‌ ಪಡೆಯುವಂತೆ ಸುದೀರ್ಘ ಹೋರಾಟ ನಡೆಸಿ ಯಶಸ್ಸು ಪಡೆದ ಮೊದಲ ವರ್ಷದ ಸಂಭ್ರಮಾಚರಣೆ ಹಾಗೂ ವಿದ್ಯುತ್‌ ಖಾಸಗೀಕರಣ ವಿರೋಧಿಸಿ ಶನಿವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಒಂದು ದಿನದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಈ ಹೋರಾಟದಲ್ಲಿ ಜಿಲ್ಲೆಯಿಂದ 200ಕ್ಕೂ ಹೆಚ್ಚು ಜನ ರೈತರು ಪಾಲ್ಗೊಳ್ಳುವರು ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಖಾಸಗೀಕರಣಕ್ಕೆ ನಾಲ್ಕು ರಾಜ್ಯಗಳು ಪ್ರಬಲವಾಗಿ ವಿರೋಧ ವ್ಯಕ್ತಪಡಿಸಿವೆ. ಆದರೆ, ಕರ್ನಾಟಕ ತನ್ನ ಎಡಬಿಡಂಗಿತನ ಮುಂದುವರಿಸಿದೆ. ರಾಜ್ಯದಲ್ಲಿ 45 ಲಕ್ಷ ರೈತರು ಕೃಷಿ ಪಂಪ್‌ಸೆಟ್‌ಗಳನ್ನು ಹೊಂದಿದ್ದರೂ ಈಗಲೂ ಸಾಲಗಾರರಾಗಿಯೇ ಉಳಿದಿದ್ದಾರೆ. ಅವರೆಲ್ಲರ ಹಿತ ಕಾಯುವ ಬದಲು ಸರ್ಕಾರ ಕಾರ್ಪೊರೇಟ್ ಕಂಪನಿಗಳಿಗೆ ಮಣೆ ಹಾಕಲು ಮುಂದಾಗಿದೆ’ ಎಂದು ಆರೋಪಿಸಿದರು.

ADVERTISEMENT

‘ರಾಜ್ಯ ಸರ್ಕಾರ ತನ್ನ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಬೆಂಗಳೂರಿನಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಸರ್ವೋದಯ ಪಕ್ಷದ ರಾಜ್ಯ ಸಂಚಾಲಕ ಅಮ್ಜದ್ ಪಾಷ ಮಾತನಾಡಿ ‘ಪರ್ಯಾಯ ರಾಜಕಾರಣಕ್ಕಾಗಿ ರೈತರು ಹಾಗೂ ಪರಿಶಿಷ್ಟರು ಸೇರಿ ಸರ್ವೋದಯ ಪಕ್ಷ ಕಟ್ಟಿದ್ದರು. ಈಗಿನ ಕೆಟ್ಟ ರಾಜಕೀಯ ಸನ್ನಿವೇಶದ ನಡುವೆಯೂ ನಾವು ರಾಜ್ಯದಾದ್ಯಂತ ಜಿಲ್ಲಾ ಘಟಕಗಳನ್ನು ರಚನೆ ಮಾಡಿ ಪಕ್ಷವನ್ನು ಪುನರ್‌ ಸಕ್ರಿಯಗೊಳಿಸಲಾಗುವುದು. ಮುಂಬರುವ ವಿಧಾನಸಭಾ ಚುನಾವಣೆಗೆ ಅಣಿಗೊಳ್ಳುತ್ತಿದ್ದೇವೆ’ ಎಂದರು. ಭೀಮಸೇನ್ ಕಲಕೇರಿ, ಗವಿಸಿದ್ದಪ್ಪ ವದ್ನಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.