ADVERTISEMENT

ದಲಿತ ಕುಟುಂಬಗಳ ಒಕ್ಕಲೆಬ್ಬಿಸುವ ಕ್ರಮಕ್ಕೆ ವಿರೋಧ: ತಹಶೀಲ್ದಾರ್ ಕಚೇರಿ ಬಳಿ ಧರಣಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 7:30 IST
Last Updated 26 ಜುಲೈ 2025, 7:30 IST
ಕುಷ್ಟಗಿ ತಹಶೀಲ್ದಾರ್ ಕಚೇರಿ ಬಳಿ ದಲಿತ ಹಾಗೂ ಪ್ರಗತಿಪರ ಸಂಘಟನೆ ಕಾರ್ಯಕರ್ತರು ಧರಣಿ ನಡೆಸಿದರು
ಕುಷ್ಟಗಿ ತಹಶೀಲ್ದಾರ್ ಕಚೇರಿ ಬಳಿ ದಲಿತ ಹಾಗೂ ಪ್ರಗತಿಪರ ಸಂಘಟನೆ ಕಾರ್ಯಕರ್ತರು ಧರಣಿ ನಡೆಸಿದರು   

ಕುಷ್ಟಗಿ: ತಾಲ್ಲೂಕಿನ ನಿಲೋಗಲ್‌ ಸೀಮಾಂತರದಲ್ಲಿರುವ ಗೈರಾಣು ಸೇರಿದಂತೆ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ನಿರತ ದಲಿತ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಅಧಿಕಾರಿಗಳ ಕ್ರಮವನ್ನು ವಿರೋಧಿಸಿ ರೈತರು, ದಲಿತ ಇತರೆ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಇಲ್ಲಿಯ ತಹಶೀಲ್ದಾರ್ ಕಚೇರಿ ಬಳಿ ಅಹೋರಾತ್ರಿ ಧರಣಿ ಆರಂಭಿಸಿದರು.

ಧರಣಿ ಸ್ಥಳಕ್ಕೆ ಬಂದ ಗ್ರೇಡ್‌–2 ತಹಶೀಲ್ದಾರ್ ರಜನೀಕಾಂತ ಕೆಂಗಾರಿ, ‘ಮನವಿ ಕೊಟ್ಟರೆ ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ ಧರಣಿ ಹಿಂತೆಗೆದುಕೊಳ್ಳಿ’ ಎಂದು ಮನವಿ ಮಾಡಿದರು. ಅದಕ್ಕೆ ಕಿವಿಗೊಡದ ಪ್ರತಿಟನಕಾರರು ಸರ್ಕಾರಿ ಜಮೀನಿನಲ್ಲಿ ನಡೆಯುತ್ತಿರುವ ವಸತಿ ಶಾಲೆ ಮತ್ತು ಕುರಿ ಮತ್ತು ಉಣ್ಣೆ ನಿಗಮದ ಕಟ್ಟಡ ಕಾಮಗಾರಿ ಸ್ಥಗಿತೊಳಿಸುವವರೆಗೂ ಧರಣಿ ಮುಂದುವರಿಸುವುದಾಗಿ ಪಟ್ಟುಹಿಡಿದರು.

ಗೈರಾಣು ಜಮೀನಿನಲ್ಲಿ ದಲಿತ ಕುಟುಂಬಗಳನ್ನೇ ಗುರಿಯಾಗಿಸಿಕೊಂಡು ಒಕ್ಕಲೆಬ್ಬಿಸಲು ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ. ಹತ್ತಿಪ್ಪತ್ತು ಎಕರೆ ಜಮೀನು ಹೊಂದಿರುವ ವ್ಯಕ್ತಿಯೊಬ್ಬ ಸರ್ಕಾರಿ ಜಮೀನಿನಲ್ಲಿಯೂ ಅಕ್ರಮ ಸಾಗುವಳಿ ಮಾಡುತ್ತಿದ್ದರೂ ಅವರ ತಂಟೆಗೆ ಹೋಗದ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಒಕ್ಕಲೆಬ್ಬಿಸುವುದಾದರೆ ಅಲ್ಲಿ ಸಾಗುವಳಿ ಮಾಡುತ್ತಿರುವ ಎಲ್ಲರನ್ನೂ ಹೊರಹಾಕಬೇಕು. ರೈತರು, ಸಂಘಟನೆಗಳ ಸಮ್ಮುಖದಲ್ಲಿ ಸಭೆ ನಡೆಸಿ ಚರ್ಚಿಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಹುಸೇನಪ್ಪ ಹಿರೇಮನಿ, ನಾಗರಾಜ ನಂದಾಪುರ, ಛತ್ರಪ್ಪ ಮೇಗೂರು, ಹನುಮಂತ ಪೂಜಾರ, ನೀಲಪ್ಪ ಕಡಿಯವರ, ಶ್ರೀಕಾಂತ ಕೊರಡಕೇರಾ, ಮಹಾಂತೇಶ ಬಾದಿಮನಾಳ, ನಿರುಪಾದಿ ಕಲಕೇರಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.