ಕೊಪ್ಪಳ: ಈ ಸಲದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಗಣನೀಯವಾಗಿ ಜಿಲ್ಲೆಯ ಫಲಿತಾಂಶ ಕುಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳ ಪ್ರಾಚಾರ್ಯರು ಹಾಗೂ ಉಪನ್ಯಾಸಕರ ರಜೆಗೆ ಕೊಕ್ ನೀಡಲಾಗಿದ್ದು, ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಮರುಪಾಠ ಆರಂಭಿಸಲಾಗಿದೆ.
ಕಳೆದ ವರ್ಷದ ಪರೀಕ್ಷೆಯಲ್ಲಿ ಕೊಪ್ಪಳ ಜಿಲ್ಲೆ ರಾಜ್ಯದಲ್ಲಿ 22ನೇ ಸ್ಥಾನ ಪಡೆದಿತ್ತು. ಹಿಂದಿನ ಮೂರು ವರ್ಷಗಳಿಂದ ಪ್ರತಿವರ್ಷವೂ ಫಲಿತಾಂಶ ಏರಿಕೆ ಹಂತದಲ್ಲಿಯೇ ಸಾಗಿತ್ತು. ಆದರೆ ಈ ಸಲ 23ನೇ ಸ್ಥಾನಕ್ಕೆ ಕುಸಿತ ಕಂಡಿದ್ದು ಒಟ್ಟಾರೆ ಫಲಿತಾಂಶದಲ್ಲಿ ಶೇ 7.98ರಷ್ಟು ಕಡಿಮೆಯಾಗಿದೆ. ಅದರಲ್ಲಿಯೂ ವಿದ್ಯಾರ್ಥಿಗಳು ಸುಲಭ ಎಂದು ಭಾವಿಸಿದ್ದ ಕಲಾ ವಿಭಾಗದಲ್ಲಿಯೇ ಹೆಚ್ಚು ಅನುತ್ತೀರ್ಣವಾಗಿದ್ದು ಇಲಾಖೆಯ ಕಳವಳಕ್ಕೆ ಕಾರಣವಾಗಿದೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಮುಂಬರುವ ಪರೀಕ್ಷೆ–1ಕ್ಕೆ ವಿದ್ಯಾರ್ಥಿಗಳನ್ನು ಅಣಿಗೊಳಿಸಲು ತರಗತಿಗಳನ್ನು ಆರಂಭಿಸಬೇಕು. ವಿದ್ಯಾರ್ಥಿಗಳಲ್ಲಿ ಮನೋಸ್ಥೆರ್ಯ ತುಂಬಿ ಓದಲು ಪ್ರೇರೇಪಿಸಲು ಕ್ರಮ ವಹಿಸಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯು ಎಲ್ಲ ಡಿಡಿಪಿಐಗಳಿಗೆ ಸೂಚಿಸಿದೆ. ಆದ್ದರಿಂದ ತರಗತಿ ಆರಂಭಿಸಲಾಗಿದೆ.
ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯ ಕಾಲೇಜುಗಳಲ್ಲಿ ಓದುತ್ತಿರುವ ಒಟ್ಟು 4,296 ವಿದ್ಯಾರ್ಥಿಗಳಲ್ಲಿ 2,629 ಮಕ್ಕಳಷ್ಟೇ ಉತ್ತೀರ್ಣರಾಗಿದ್ದಾರೆ. ಫಲಿತಾಂಶದ ಪ್ರಮಾಣ ಶೇ 61.2ರಷ್ಟಿದೆ. ನಗರ ಪ್ರದೇಶಗಳ ವ್ಯಾಪ್ತಿಯ ಕಾಲೇಜುಗಳಲ್ಲಿ ಪರೀಕ್ಷೆ ಬರೆದ ಒಟ್ಟು 10,025 ವಿದ್ಯಾರ್ಥಿಗಳಲ್ಲಿ 7,002 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇಕಡವಾರು ಪ್ರಮಾಣ 69.78ರಷ್ಟಿದೆ. ಉಳಿದ ಮಕ್ಕಳನ್ನು ಕಾಲೇಜಿಗೆ ಕರೆಯಿಸಿ ಪಾಠ ಮಾಡುವ ಜವಾಬ್ದಾರಿಯೂ ಉಪನ್ಯಾಸಕರ ಮೇಲಿದೆ.
ಈ ಸಲದ ವಾರ್ಷಿಕ ಪರೀಕ್ಷೆಯ ಫಲಿತಾಂಶ ಕಡಿಮೆಯಾಗಿದ್ದರಿಂದ ಮತ್ತೆ ತರಗತಿ ಆರಂಭಿಸುವಂತೆ ಇಲಾಖೆ ಸೂಚಿಸಿದೆ. ತರಗತಿ ಆರಂಭಿಸಲಾಗಿದೆ.ಜಗದೀಶ್, ಡಿಡಿಪಿಯು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.