ADVERTISEMENT

ಪುರಂದರದಾಸರ ಸಾಹಿತ್ಯ ಸಂಶೋಧನೆ ಆಗಲಿ: ವಿದ್ಯಾಶ್ರೀಶತೀರ್ಥ ಒತ್ತಾಯ

ಮಧ್ವ-ಪುರಂದರೋತ್ಸವ ಮಂಗಳ

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 11:18 IST
Last Updated 27 ಜನವರಿ 2020, 11:18 IST
ಕುಷ್ಟಗಿಯಲ್ಲಿ ಭಾನುವಾರ ಕೀರ್ತೀಶೇಷ ಗೊರೆಬಾಳ ಹನುಮಂತರಾವ ಕುಲಕರ್ಣಿ ಅವರಿಗೆ ಮರಣೋತ್ತರವಾಗಿ ಶ್ರೀಪುರಂದರಾನುಗ್ರಹ ಪ್ರಶಸ್ತಿಯನ್ನು ಸೋಸಲೇ ವ್ಯಾಸರಾಜಮಠದ ಶ್ರೀವಿದ್ಯಾಶ್ರೀಶತೀರ್ಥರು ಪ್ರದಾನ ಮಾಡಿದರು
ಕುಷ್ಟಗಿಯಲ್ಲಿ ಭಾನುವಾರ ಕೀರ್ತೀಶೇಷ ಗೊರೆಬಾಳ ಹನುಮಂತರಾವ ಕುಲಕರ್ಣಿ ಅವರಿಗೆ ಮರಣೋತ್ತರವಾಗಿ ಶ್ರೀಪುರಂದರಾನುಗ್ರಹ ಪ್ರಶಸ್ತಿಯನ್ನು ಸೋಸಲೇ ವ್ಯಾಸರಾಜಮಠದ ಶ್ರೀವಿದ್ಯಾಶ್ರೀಶತೀರ್ಥರು ಪ್ರದಾನ ಮಾಡಿದರು   

ಕುಷ್ಟಗಿ: ಪುರಂದರದಾಸರ ಕಾಲದಲ್ಲಿ ರಚಿಸಿರುವ ಸುಮಾರು 4.25 ಲಕ್ಷ ದಾಸ ಸಾಹಿತ್ಯಗಳಿದ್ದು, ನಮಗೆ ಕೇವಲ 750 ದಾಸ ಕೀರ್ತನೆಗಳು ದೊರಕಿವೆ. ಕಳೆದುಹೋದ ದಾಸ ಸಾಹಿತ್ಯದ ಹಾಡುಗಳನ್ನು ಸಂಶೋಧಿಸಬೇಕಿದೆ. ಒಂದು ಸಂಶೋಧನಾ ಸಂಸ್ಥೆ ತೆರೆದು ದಾಸ ಸಾಹಿತ್ಯ ಹೊರತರುವ ಕಾರ್ಯ ಮಾಡಬೇಕಿದೆ ಎಂದು ಸೋಸಲೇ ವ್ಯಾಸರಾಜಮಠದ ವಿದ್ಯಾಶ್ರೀಶತೀರ್ಥರು ಹೇಳಿದರು.

ಇಲ್ಲಿಯ ಅಡವಿರಾಯ ದೇವಸ್ಥಾನದ ಸನ್ನಿಧಾನದಲ್ಲಿ ಭಾನುವಾರ ಬೆಂಗಳೂರಿನ ನಿನ್ನ ಒಲುಮೆಯಿಂದ ಪ್ರತಿಷ್ಠಾನಂ ವತಿಯಿಂದ ನಡೆಯುತ್ತಿರುವ ನಾಲ್ಕನೇ ದಿನದ ಶ್ರೀಮಧ್ವ-ಪುರಂದರೋತ್ಸವದ ಮಂಗಳೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಜಯನಗರದ ಕೊನೆಯ ಕಾಲದಲ್ಲಿ ದೊಡ್ಡ ಯುದ್ಧಗಳಾದವು. ಆ ಸಂದರ್ಭದಲ್ಲಿ ಹಂಪೆಯಲ್ಲದೇ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವ ಯಾವ ರೀತಿಯ ಅನಾಹುತಗಳಾಗಿದ್ದವು ಎಂಬುದು ಗೊತ್ತಿಲ್ಲ. ಎಷ್ಟೋ ಜನ ಮನೆ ತ್ಯಜಿಸಿದರು ಎಂಬುದು ಗೊತ್ತಿಲ್ಲ. ಅಂಥಹ ಸಂದರ್ಭದಲ್ಲಿ ಎಷ್ಟೋ ದೇವನಾಮಗಳಿರುವ ಪುರಂದರದಾಸರ ಸಾಹಿತ್ಯ ಕಳೆದುಹೋಗಿವೆ. ದಾಸರ ಕಾಲದಲ್ಲಿಯೂ ಬಗೆ ಬಗೆಯ ಸಾಹಿತ್ಯಗಳಿದ್ದವು, ಇವೂ ಕೂಡಾ ಉಳಿದಿಲ್ಲ ಎಂದರು.

ADVERTISEMENT

ಹೆಣ್ಣುಮಕ್ಕಳು ಎಷ್ಟು ಮನೆ ಮನೆಯಲ್ಲಿ ಉಳಿಸಿಕೊಂಡು ಬಂದರೋ ಅಲ್ಲಲ್ಲಿ ಬರೆದಿಟ್ಟ ಓಲೆಗರಿಗಳೆಷ್ಟು ಇತ್ತೊ ಅಷ್ಟೆ ನಮಗೆ ಉಳಿದಿದೆ. 1850ರಲ್ಲಿ ಮಂಗಳೂರಿನಲ್ಲಿ ಮೊದಲನೇ ಬಾರಿ ಪುರಂದರದಾಸರು ಸುಮಾರು 250 ಪದಗಳ ಒಂದು ಸಂಕಲನ ಪ್ರಕಟ ಮಾಡಿದರು. 20 ವರ್ಷಗಳ ಬಳಿಕ ಬ್ರಿಟಿಷ್ ಆಡಳಿತದಲ್ಲಿ ಇದ್ದ ಮೈಸೂರು ರಾಜ್ಯದಲ್ಲಿ ಒಬ್ಬ ಆಂಗ್ಲ ಅಧಿಕಾರಿ ದಾಸ ಸಾಹಿತ್ಯದ ಬಗ್ಗೆ ಸ್ವಲ್ಪ ಆಸಕ್ತಿ ತೋರಿ ಕನ್ನಡ ಪಂಡೀತರೊಬ್ಬರಿಂದ ಸಂಶೋಧನೆ ಮಾಡಿಸಿ, ಸಂಕಲನವನ್ನು ಪುನಃ ಮುದ್ರಣ ಮಾಡಿಸಿದರು ಎಂದರು.

ನಂತರ ಆ ಶತಮಾನದ ಕೊನೆ ಭಾಗದಲ್ಲಿ ಅಂದಿನ ಮದ್ರಾಸಿನಲ್ಲಿ ತೆಲುಗಿನ ಒಬ್ಬ ವ್ಯಕ್ತಿ ತೆಲುಗು ಲಿಪಿಯಲ್ಲಿ ಪುರಂದರದಾಸ ದೇವರ ನಾಮಗಳನ್ನ ಮುದ್ರಣ ಮಾಡುತ್ತಾರೆ. ಅದಾದ ಮೇಲೆ ಉಡುಪಿಯ ತಾವುಂಜೆ ಗುರುರಾಯರು ಇನ್ನು ಕೆಲವರು ಪುರಂದರದಾಸರ ದೇವರನಾಮಗಳನ್ನ ಬೇರೆದಾಸರ ದೇವರನಾಮಗಳನ್ನು ಹೊರಗಡೆ ತಂದರು. ಅವು ಸುಮಾರು 750 ದಾಸರ ದೇವನಾಮಗಳು ಎಂದು ಹೇಳುತ್ತಾರೆ. ನಂತರ ಸಂಘಸಂಸ್ಥೆಗಳು ಮಾಡಿದ ಕೆಲಸವನ್ನು ಪುರಂದರದಾಸರ ಚತುರ್ಥ ಶತಮಾನೋತ್ಸವ ನಡೆದಾಗ ದುರ್ಲಿ ಬಿಂದಮಾದವಾಚಾರ್ಯರ ಅಧ್ಯಕ್ಷತೆಯಲ್ಲಿ ಒಂದು ಸಂಘಟನೆಯಾಯಿತು. ಬೆಟಗೇರಿ ಕೃಷ್ಣ ಪ್ರಹ್ಲಾದರು,ಹಿರಿಯ ಸಾಹಿತಿಗಳು ಎಲ್ಲ ಸೇರಿ ನಾಲ್ಕು ಸಂಪುಟಗಳಿಂದ ಪುರಂದರದಾಸರ ಎಲ್ಲ ರಚನೆಗಳನ್ನು ಸಂಗ್ರಹ ಮಾಡಿದರು ಎಂದರು.

ಮುಂದಿನ ಪೀಳಿಗೆಗೆ ದಾಸ ಸಾಹಿತ್ಯ ಪರಂಪರೆ ಪರಿಚಯಿಸಿ, ಉಳಿಸಿ, ಬೆಳೆಸಲು ಸಾಧ್ಯವಾಗುತ್ತದೆ. ಹೀಗಾಗಿ ನಿನ್ನಾ ಒಲುಮೆಯಿಂದ ಪ್ರತಿಷ್ಠಾನದ ಮೈಸೂರಿನ ರಾಮಚಂದ್ರಾಚಾರ್ ಅವರು ದಾಸ ಸಾಹಿತ್ಯ ಸಂಗ್ರಹಣೆಯ ಸಂಶೋಧನಾ ಸಂಸ್ಥೆ ಮೀತಿ ರಚಿಸಲಿ. ಭಕ್ತರು ಆ ಸಂಸ್ಥೆಗೆ ಧನಸಹಾಯ ಮಾಡಬೇಕು. ಪ್ರತಿ ವರ್ಷ ಆ ಸಂಸ್ಥೆಗೆ ನಮ್ಮ ಮಠದಿಂದ $ 1 ಲಕ್ಷ ಕೊಡುತ್ತೇನೆ ಎಂದು ಅವರಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.