ಕೊಪ್ಪಳ: ಪರಿಶಿಷ್ಟ ಜಾತಿ ಸಮುದಾಯಕ್ಕೆ ಒಳ ಮೀಸಲಾತಿ ನೀಡಲೇಬೇಕು ಎಂದು ಆಗ್ರಹಿಸಿ ಮಾದಿಗ ಸಂಘಟನೆಗಳ ಒಕ್ಕೂಟ ಹಾಗೂ ಮಾದಿಗ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ಇಲ್ಲಿನ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಯಿತು.
ಜಿಲ್ಲಾಡಳಿತ ಪ್ರವೇಶಿಸುವ ಹೊರಭಾಗದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರು ಮಾತನಾಡಿ, ಒಳ ಮೀಸಲಾತಿ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಮೂರೂವರೆ ದಶಕಗಳಿಂದ ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಲೇ ಬಂದಿದ್ದು, ಈಗಲಾದರೂ ಒಳ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.
‘ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ತಕ್ಷಣವೇ ಒಳ ಮೀಸಲಾತಿ ಜಾರಿ ಮಾಡಬೇಕು. ಅಸಮಾನತೆ ಸರಿಪಡಿಸಲು ಕಳೆದ ವರ್ಷ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಆದೇಶ ಕೊಟ್ಟಿದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ಜಾರಿಗೆ ಅನಗತ್ಯವಾಗಿ ವಿಳಂಬ ಮಾಡುತ್ತಿರುವುದರಿಂದ ಸಮುದಾಯದ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು, ಕಾರ್ಮಿಕರು ಹಾಗೂ ಮಹಿಳೆಯರು ಹಾಗೂ ಒಟ್ಟಾರೆ ಸಮಾಜ ತಮ್ಮ ನ್ಯಾಯಯುತ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ’ ಎಂದರು.
ಬಿಸರಳ್ಳಿಯ ಮರಳಸಿದ್ಧೇಶ್ವರ ಸ್ವಾಮೀಜಿ, ಸಮುದಾಯದ ಮುಖಂಡರಾದ ಬಸವರಾಜ ದಢೇಸೂಗೂರು, ಈರಪ್ಪ ಕುಡಗುಂಟಿ, ಗವಿಸಿದ್ಧಪ್ಪ ಕಂದಾರಿ, ಪರಶುರಾಮಪ್ಪ ಆನೆಗೊಂದಿ, ಮಾರೇಶ ಮುಷ್ಟೂರು, ಹನುಮೇಶ ಕಡೇಮನಿ, ಗಣೇಶ ಹೊರತಟ್ನಾಳ, ರಾಮಣ್ಣ ಚೌಡ್ಕಿ, ಚನ್ನಬಸಪ್ಪ ಹೊಳೆಪ್ಪನವರ, ವಸಂತ ಬಾವಿಮನಿ, ಮಲ್ಲಿಕಾರ್ಜುನ ಪೂಜಾರ, ಸುಭಾಷ ಕನಕಗಿರಿ, ಬಸವರಾಜ ನವಲಮನಿ, ಲಿಂಗಪ್ಪ ಮೈನಳ್ಳಿ, ದುರುಗಪ್ಪ ಗಂಗಾವತಿ, ನಾಗರಾಜ ಮೇಲಿನಮನಿ, ವಸಂತ ಮೇಲಿನಮನಿ, ಮಾರುತೆಪ್ಪ ಬಿಕನಳ್ಳಿ, ಮಂಜುನಾಥ ಮುಸಲಾಪುರ, ವೆಂಕಟೇಶ ಹಾಲವರ್ತಿ, ಪರಶುರಾಮ ಕರೆಹಳ್ಳಿ, ಮಹಾಲಕ್ಷ್ಮಿ ಕಂದಾರಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಹೋರಾಟಗಾರರು ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಹೋರಾಟ ಬೇಡಿಕೆ ಈಡೇರಿಸಿದಿದ್ದರೆ ಮತ್ತೆ ಹೋರಾಟದ ಎಚ್ಚರಿಕೆ
ಜಿಲ್ಲಾಡಳಿತ ಭವನಕ್ಕೆ ನುಗ್ಗಲು ಯತ್ನ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಸಮುದಾಯದ ಜನ ವೇದಿಕೆ ಕಾರ್ಯಕ್ರಮದ ಬಳಿಕ ಜಿಲ್ಲಾಡಳಿತ ಭವನದ ಒಳಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರ ಜೊತೆ ವಾಗ್ವಾದ ಹಾಗೂ ಜಟಾಪಟಿ ನಡೆಯಿತು. ಪೊಲೀಸರು ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹೋರಾಟಗಾರರು ಘೋಷಣೆಗಳನ್ನು ಕೂಗಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದ ಕಾರಣ ಪೊಲೀಸರು ಕೆಲವು ಹೋರಾಟಗಾರರನ್ನು ವಶಕ್ಕೆ ಪಡೆದು ಬಸ್‌ನಲ್ಲಿ ಕರೆದುಕೊಂಡು ಹೋದರು. ಅದರೂ ಪಟ್ಟು ಸಡಿಲಿಸದೆ ಇನ್ನುಳಿದವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಕೂಗಿ ಭಿತ್ತಿಚಿತ್ರಗಳನ್ನು ಪ್ರದರ್ಶಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಕೊಪ್ಪಳ ತಹಶೀಲ್ದಾರ್ ವಿಠ್ಠಲ ಚೌಗುಲಾ ಅವರಿಗೆ ಮನವಿ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.