ಕುಷ್ಟಗಿ: ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಬುಧವಾರ ತಡರಾತ್ರಿವರೆಗೂ ಸಾಕಷ್ಟು ಪ್ರಮಾಣದಲ್ಲಿ ಮಳೆ ಸುರಿದಿದೆ. ಇದರಿಂದಾಗಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಹೊಲಗದ್ದೆಗಳಲ್ಲಿನ ಬೆಳೆಗಳಿಗೆ ಹಾನಿಯಾಗಿದೆ.
ಬಸಾಪುರ, ಟೆಂಗುಂಟಿ, ತೆಗ್ಗಿಹಾಳ, ಗೋನಾಳ ವ್ಯಾಪ್ತಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆ ಸುರಿದೆ. ಹೊಲದ ಒಡ್ಡುಗಳು ಒಡೆದು ಹಾಳಾಗಿವೆ. ಕೃಷಿ, ತೋಟಗಾರಿಕೆಯಲ್ಲಿನ ಬೆಳೆ ಇರುವ ಜಮೀನುಗಳು ನೀರಿನಿಂದ ಭರ್ತಿಯಾಗಿವೆ. ಮೇಲ್ಮಣ್ಣು ಕೊಚ್ಚಿಹೋಗಿದೆ ಎಂದು ರೈತರಾದರ ವೀರಭದ್ರಪ್ಪ, ಕರಬಸಪ್ಪ ಗುಡದೂರು ಇತರರು ಹೇಳಿದರು.
ಈ ಪ್ರದೇಶದಲ್ಲಿನ ದೊಡ್ಡ ಹಳ್ಳಕ್ಕೆ ಪ್ರವಾಹದ ರೂಪದಲ್ಲಿನ ನೀರು ಅಕ್ಕಪಕ್ಕದಲ್ಲಿನ ಜಮೀನುಗಳಿಗೆ ನುಗ್ಗಿ ಹತ್ತಿ ಬೀಜೋತ್ಪಾದನೆ ತಾಕುಗಳಿಗೆ ಬಹಳಷ್ಟು ಹಾನಿಯಾಗಿದೆ. ಅಲ್ಲದೆ ಇತರೆ ಕೃಷಿ ಬೆಳೆಗಳು ಕೊಚ್ಚಿಹೋಗಿವೆ ಎಂದು ರೈತರು ತಿಳಿಸಿದ್ದಾರೆ. ಮುದೇನೂರು ಬಳಿಯ ಜಿನುಗು ಕೆರೆ ಭರ್ತಿಯಾಗಿದ್ದು, ಕೋಡಿ ಹರಿಯುತ್ತಿದೆ.
ಒಂದೂವರೆ ತಿಂಗಳಿನಿಂದಲೂ ಮಳೆ ಇಲ್ಲದೆ ಬೆಳೆಗಳು ಬಾಡುತ್ತಿದ್ದುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದರು. ಮುಂದಿನ ದಿನಗಳಲ್ಲಿ ಮೇವಿನ ಕೊರತೆಯೂ ಉಂಟಾಗುತ್ತದೆ ಎಂಬ ಚಿಂತೆ ಆವರಿಸಿತ್ತು. ಈಗಲಾದರೂ ಉತ್ತಮ ರೀತಿಯಲ್ಲಿ ಮಳೆ ಆಗಿರುವುದರಿಂದ ಬೆಳೆಗಳು ಚೇತರಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಕೆಸರು ಗದ್ದೆಯಾದ ಶಾಲಾ ಆವರಣ: ತಾಲ್ಲೂಕಿನ ಮುದೇನೂರು ಗ್ರಾಮದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮೈದಾನವು, ಮಳೆ ಬಂದರೆ ಕೆಸರು ಗದ್ದೆಯಂತಾಗುತ್ತದೆ. ಶಾಲೆ ಸುತ್ತಲಿನ ಸುಮಾರು ಹತ್ತಾರು ಎಕರೆ ಜಮೀನನಲ್ಲಿಯ ಮಳೆ ನೀರು ಹರಿದು ನೇರವಾಗಿ ಶಾಲಾ ಮೈದಾನದಲ್ಲಿ ಸಂಗ್ರಹಗೊಳ್ಳುತ್ತದೆ. ಈ ಸಮಸ್ಯೆ ಈಗಿನದಲ್ಲ. ಅನೇಕ ವರ್ಷಗಳಿಂದ ಇದ್ದು ಪರಿಹಾರ ಮಾತ್ರ ದೊರಕಿಲ್ಲ’ ಎಂದು ಗ್ರಾಮಸ್ಥ ಮಲ್ಲಿಕಾರ್ಜುನ ಹಳೆಗೌಡ್ರ ಬೇಸರ ವ್ಯಕ್ತಪಡಿಸಿದರು.
‘ನೀರು ಹರಿದು ಹೊರಗೆ ಹೋಗುವಂತೆ ಚರಂಡಿ ನಿರ್ಮಿಸಿ ಉಪಕಾರ ಮಾಡಿ ಎಂದು ಶಾಸಕರು, ಜನಪ್ರತಿನಿಧಿಗಳು, ಗ್ರಾ.ಪಂ.ಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈ ಸಮಸ್ಯೆಯನ್ನು ಅಧಿಕಾರಸ್ಥರು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಗ್ರಾಮಸ್ಥ ಬಸವರಾಜ ಇತರರು ಅಸಮಾಧಾನ ಹೊರಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.