ಕೊಪ್ಪಳ: ‘ಗವಿಸಿದ್ದಪ್ಪ ನಾಯಕನ ಕೊಲೆ ವಿಚಾರದಲ್ಲಿ ನಮ್ಮ ಮಗಳ ಪಾತ್ರವಿಲ್ಲದಿದ್ದರೂ ಅನಗತ್ಯವಾಗಿ ಎಳೆದು ತರಲಾಗುತ್ತಿದೆ. ಗವಿಸಿದ್ದಪ್ಪನೇ ಮಗಳ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ’ ಎಂದು ಈ ಪ್ರಕರಣದಲ್ಲಿ ಕಾನೂನು ಸಂಘರ್ಷ ಎದುರಿಸುತ್ತಿರುವ ಬಾಲಕಿಯ ತಾಯಿ ಆರೋಪಿಸಿದರು.
ಕೊಲೆಯಾದ ದಿನವೇ ಗವಿಸಿದ್ದಪ್ಪನ ತಂದೆ ನಿಂಗಜ್ಜ ’ಮುಸ್ಲಿಂ ಬಾಲಕಿಯೊಂದಿಗೆ ಪ್ರೇಮ ಪ್ರಕರಣವೇ ಕೊಲೆಗೆ ಕಾರಣ’ ಎಂದು ಆರೋಪಿಸಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಾಲಕಿಯನ್ನು ಈಗ ಬಾಲಕಿಯರ ಬಾಲಮಂದಿರದಲ್ಲಿ ಇರಿಸಲಾಗಿದೆ.
ಇಲ್ಲಿನ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಗುರುವಾರ ತಮ್ಮ ಇನ್ನೊಬ್ಬ ಮಗಳೊಂದಿಗೆ ದಿಢೀರ್ ಪ್ರತಿಭಟನೆ ನಡೆಸಿದ ಬಾಲಕಿಯ ತಾಯಿ ‘ಬಾಲಕಿಯಾಗಿರುವ ನನ್ನ ಮಗಳದ್ದೇ ತಪ್ಪು ಎಂದು ಗವಿಸಿದ್ದಪ್ಪ ನಾಯಕನ ಕುಟುಂಬದವರು ಬಿಂಬಿಸುತ್ತಿದ್ದಾರೆ. ಗವಿಸಿದ್ದಪ್ಪ ಪುಸಲಾಯಿಸಿ ನನ್ನ ಮಗಳ ಮೇಲೆ ಅತ್ಯಾಚಾರ ಮಾಡಿದ್ದ. ತಿಳಿಹೇಳಿದರೂ ಬಿಡಲಿಲ್ಲ. ಇದನ್ನು ಬಹಿರಂಗಪಡಿಸದಂತೆ ಅವರ ಕುಟುಂಬದವರು ನಮಗೆ ಬೆದರಿಕೆ ಒಡ್ಡಿದ್ದಾರೆ. ನನ್ನ ಮಗಳ ವಿಡಿಯೊ ಮಾಡಿ ಹೆದರಿಸುತ್ತಿದ್ದ’ ಎಂದು ದೂರಿದರು. ಬಿ.ಆರ್. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಗಳನ್ನು ಇಟ್ಟುಕೊಂಡು ಅವರು ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಬಂದ ನಗರ ಪೊಲೀಸ್ ಠಾಣೆಯ ಇನ್‌ಸ್ಟೆಕ್ಟರ್ ಜಯಪ್ರಕಾಶ್ ಬಾಲಕಿಯ ತಾಯಿಯನ್ನು ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರ ಬಳಿ ಕರೆದುಕೊಂಡು ಹೋದಾಗ ಅವರು ಮನವಿ ಸಲ್ಲಿಸಿದರು. ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಳಿ ಕರೆದುಕೊಂಡು ಹೋಗಲು ಪ್ರಯತ್ನಿಸಿದರೂ ಒಪ್ಪದೇ ಪ್ರತಿಭಟನೆ ಮುಂದುವರಿಸಿದರು.
‘ಗವಿಸಿದ್ದಪ್ಪನ ಕೊಲೆ ಪ್ರಕರಣದ ಆರೋಪಿಗಳಿಗೆ ಶಿಕ್ಷೆಯಾಗಲಿ. ಆರೋಪಿಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ. ನನಗೆ ಮೂರು ಜನ ಹೆಣ್ಣುಮಕ್ಕಳಿದ್ದು, ಪತಿ ಮೃತಪಟ್ಟಿದ್ದಾರೆ. ನನ್ನ ಮಗಳು ಕಂಪ್ಯೂಟರ್ ತರಬೇತಿಗೆ ಹೋದಾಗ ಪ್ರೀತಿಸುವಂತೆ ಗವಿಸಿದ್ದಪ್ಪ ದುಂಬಾಲು ಬಿದ್ದಿದ್ದ. ಇಷ್ಟೆಲ್ಲ ಆದರೂ ನನ್ನ ಮಗಳದ್ದೇ ತಪ್ಪು ಎನ್ನುತ್ತಿರುವುದು ನೋವು ತಂದಿದೆ’ ಎಂದು ಕಣ್ಣೀರು ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.