ADVERTISEMENT

ಕುಷ್ಟಗಿ: ರಸ್ತೆಯಲ್ಲೇ ಹರಿಯುವ ಕೊಳಚೆ ನೀರು

ಲೋಕೋಪಯೋಗಿ ವಸತಿ ಸಂಕೀರ್ಣದ ಶೌಚಗುಂಡಿ ದುರಸ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 2:57 IST
Last Updated 11 ಸೆಪ್ಟೆಂಬರ್ 2020, 2:57 IST
ಕುಷ್ಟಗಿಯ ಪಿಡಬ್ಲೂಡಿ ವಸತಿಗೃಹದ ಶೌಚಾಲಾಯದ ನೀರು ರಸ್ತೆಯಲ್ಲಿ ಹರಿಯುತ್ತಿರುವುದು
ಕುಷ್ಟಗಿಯ ಪಿಡಬ್ಲೂಡಿ ವಸತಿಗೃಹದ ಶೌಚಾಲಾಯದ ನೀರು ರಸ್ತೆಯಲ್ಲಿ ಹರಿಯುತ್ತಿರುವುದು   

ಕುಷ್ಟಗಿ: ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿ ಗೃಹಗಳ ಸಂಕೀರ್ಣಕ್ಕೆ ಸೇರಿದ ಶೌಚಾಲಯ ಗುಂಡಿಯಲ್ಲಿನ ತ್ಯಾಜ್ಯವು ರಸ್ತೆಯಲ್ಲಿ ಹರಿಯುತ್ತಿದ್ದು, ಸುತ್ತಲಿನ ಪರಿಸರ ಮಲಿನವಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಪ್ರವಾಸಿ ಮಂದಿರದ ಪಕ್ಕದ ಜಾಗದಲ್ಲಿ ಲೋಕೋಪಯೋಗಿ ಇಲಾಖೆಯು ಸರ್ಕಾರದ ಬಿ ಮತ್ತು ಸಿ ದರ್ಜೆ ಅಧಿಕಾರಿಗಳಿಗಾಗಿ 12 ವಸತಿಗೃಹಗಳನ್ನು ನಿರ್ಮಿಸಿದೆ. ಈ ವಸತಿಗೃಹ ಸಂಕೀರ್ಣಕ್ಕೆ ಸೇರಿದ ಶೌಚಾಲಯ ಗುಂಡಿ ಭರ್ತಿಯಾಗಿ ಅದರಲ್ಲಿನ ಕೊಳಚೆಯು ಸರ್ಕಾರಿ ಆಸ್ಪತ್ರೆ ಪಕ್ಕದ ರಸ್ತೆಯಲ್ಲಿ ಹರಿಯುತ್ತಿದೆ.

ವಾಹನಗಳು ಸಂಚರಿಸಿದಾಗ ಕೊಳಚೆ ನೀರು ದಾರಿಹೋಕರ ಮೈಗೆ ಸಿಂಚನವಾಗುತ್ತಿದೆ. ಆಸ್ಪತ್ರೆ, ಸಂತೆ ಮೈದಾನ, ಮಾರುಕಟ್ಟೆ ಇತರೆ ಸ್ಥಳಗಳಿಗೆ ಬರುವ ಮತ್ತು ಹೋಗುವ ಜನರು, ಮಹಿಳೆಯರು, ಮಕ್ಕಳು ನಿತ್ಯ ಮುಗುಮುಚ್ಚಿಕೊಂಡು ಹೋಗುವಂಥಹ ಸ್ಥಿತಿ ಇದೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.

ADVERTISEMENT

ವಸತಿಗೃಹಗಳ ನಿರ್ವಹಣೆ ಜವಾಬ್ದಾರಿಯನ್ನು ಇಲಾಖೆಯ ಎಂಜಿನಿಯರ್‌ಗೆ ವಹಿಸಲಾಗಿದೆ. ಆದರೆ ಶೌಚಾಲಯ ಗುಂಡಿ ಭರ್ತಿಯಾಗಿ ಏಳೆಂಟು ತಿಂಗಳು ಕಳೆದಿದ್ದರೂ ಅದನ್ನು ವಿಲೇವಾರಿ ಮಾಡುವುದು ಮತ್ತು ಗುಂಡಿ ದುರಸ್ತಿಗೊಳಿಸುವ ಪ್ರಯತ್ನ ನಡೆದೇ ಇಲ್ಲ.

ಈ ಸಮಸ್ಯೆಯ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ. ಆದರೆ, ಮನವಿಗೆ ಅಧಿಕಾರಿಗಳು ಸ್ಪಂದಿಸಿಲ್ಲ. ಮೌಖಿಕವಾಗಿ ತಿಳಿಸಿದರೂ ಉಡಾಫೆಯಾಗಿ ವರ್ತಿಸುತ್ತಿದ್ದಾರೆ. ಇಲಾಖೆಯ ಹಿರಿಯ ಅಧಿಕಾರಿ ಇದ್ದೂ ಇಲ್ಲದಂತಿದ್ದಾರೆ. ಅವರು ಕಚೇರಿಗೆ ಬರುವುದೇ ಇಲ್ಲ ಎಂದು ವಸತಿಗೃಹಗಳಲ್ಲಿ ವಾಸಿಸುತ್ತಿರುವ ಮತ್ತು ಹೆಸರು ಪ್ರಕಟಿಸಲು ಇಚ್ಛಿಸದ ಅಧಿಕಾರಿಯೊಬ್ಬರು 'ಪ್ರಜಾವಾಣಿ'ಗೆ ವಿವರಿಸಿದರು.

ಈ ವಿಷಯ ಕುರಿತು ಲೋಕೋಪಯೋಗಿ ಇಲಾಖೆ ಉಪ ವಿಭಾಗದ ಕಚೇರಿಯನ್ನು ಸಂಪರ್ಕಿಸಿದರೆ ಅಲ್ಲಿಯ ಸಿಬ್ಬಂದಿ ಯಾವುದೇ ಮಾಹಿತಿ ನೀಡಲು ನಿರಾಕರಿಸಿದರು. ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿರುವ ಸಹಾಯಕ ಎಂಜಿನಿಯರ್ ರಂಗಪ್ಪ ಮತ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಎಚ್‌.ಬಿ.ಕಂಟಿ ಅವರ ಮೊಬೈಲ್‌ಗಳು ಯಥಾ ರೀತಿಯಲ್ಲಿ ಬಂದ್‌ ಆಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.