ADVERTISEMENT

‘ಕೃಷ್ಣನ ವ್ಯಕ್ತಿತ್ವ ತೋರಿಸಿಕೊಟ್ಟ ರಾಧೆ’

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2023, 16:30 IST
Last Updated 12 ಸೆಪ್ಟೆಂಬರ್ 2023, 16:30 IST
ಕೊಪ್ಪಳದಲ್ಲಿ ಸೋಮವಾರ ಜಿಲ್ಲಾಡಳಿತದ ವತಿಯಿಂದ ನಡೆದ ಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಚಿಣ್ಣರು ವೇಷ ಧರಿಸಿ ಗಮನ ಸೆಳೆದರು
ಕೊಪ್ಪಳದಲ್ಲಿ ಸೋಮವಾರ ಜಿಲ್ಲಾಡಳಿತದ ವತಿಯಿಂದ ನಡೆದ ಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಚಿಣ್ಣರು ವೇಷ ಧರಿಸಿ ಗಮನ ಸೆಳೆದರು   

ಕೊಪ್ಪಳ: ‘ರಾಧಾ ಕೃಷ್ಣ ಪ್ರೀತಿಯ ಸಂಕೇತವಾದರೂ ರಾಧೆಯು ಕೃಷ್ಣನ ವ್ಯಕ್ತಿತ್ವವನ್ನು ತೋರಿಸಿಕೊಟ್ಟಿದ್ದಾಳೆ. ಕೃಷ್ಣನು ಮಹಿಳೆಯರ ರಕ್ಷಕನಾಗಿದ್ದಾನೆ’ ಎಂದು ಸಾಹಿತಿ ಸಾವಿತ್ರಿ ಮುಜಮದಾರ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ನಗರದಲ್ಲಿ ನಡೆದ ಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ‘ಮಹಿಳೆಗೆ ಯಾವಾಗೆಲ್ಲ ಕಷ್ಟಗಳು ಬಂದಿವೆಯೋ ಆಗೆಲ್ಲ ಕೃಷ್ಣ ಕೈ ಹಿಡಿದಿದ್ದಾನೆ. ಹೀಗಾಗಿ ಕೃಷ್ಣನಿಗೆ ಪರನಾರಿ ಸಹೋದರ ಎಂದು ಕರೆಯಲಾಗುತ್ತದೆ. ಮಹಿಳೆಯರಿಗೆ ಸಂಕಷ್ಟದ ಕಾಲ ಎದುರಾದಾಗ ಆತನು ಅಣ್ಣನಾಗಿ ರಕ್ಷಣೆ ಮಾಡಿದ್ದಾನೆ. ಹೀಗಾಗಿ ಕೃಷ್ಣನು ಮಹಿಳೆಯರಿಗೆ ಘನತೆಯ, ಗೌರವದ ಸಂಕೇತವಾಗಿದ್ದಾನೆ’ ಎಂದರು.

‘ಕಮ್ಮಟದುರ್ಗದ ಕುಮಾರರಾಮನಿಗೆ ಕೂಡ ಪರನಾರಿ ಸಹೋದರ ಎನ್ನಲಾಗುತ್ತದೆ. ಇಂತಹ ಸಂಸ್ಕೃತಿಯು ಕೃಷ್ಣನಿಂದಲೇ ಬಂದಿದೆ. ಸ್ವಯಂವರದಲ್ಲಿ ಕೃಷ್ಣನನ್ನು ನೋಡಿದಾಗ ನನಗೆ ಸಹೋದರ ಭಾವನೆ ಬರುತ್ತದೆ ಎಂದು ಹೇಳುವ ದ್ರೌಪದಿಯ ವಿಚಾರ ಕೂಡ ಇಲ್ಲಿ ಸ್ಮರಣೀಯ. ನೀನು ನನ್ನ ಅಣ್ಣ ಎಂದು ದ್ರೌಪದಿಯು ಹೇಳಿದಾಗ, ಜೀವಿತಾವಧಿವರೆಗೂ ನಿನ್ನನ್ನು ರಕ್ಷಣೆ ಮಾಡುವ ಜವಾಬ್ದಾರಿ ನನ್ನದು ಎಂದು ಕೃಷ್ಣನು ಪ್ರತಿಕ್ರಿಯಿಸುತ್ತಾನೆ’ ಎಂದು ನೆನಪಿಸಿಕೊಂಡರು.

ADVERTISEMENT

ಸಹಾಯಕ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಕಾರ್ಯಕ್ರಮ ಉದ್ಘಾಟಿಸಿದರು. ಕೊಪ್ಪಳ ತಹಶೀಲ್ದಾರ್‌ ವಿಠ್ಠಲ್ ಚೌಗಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಸಮುದಾಯದ ಮುಖಂಡರಾದ ನಾರಾಯಣಗೌಡ ಮಲ್ಲಾಪುರ, ಯಮನೂರಪ್ಪ, ಕನಕದಾಸ ಯಾದವ್, ಜಗನ್ನಾಥ ಹುಲಗಿ, ಯಂಕಣ್ಣ ಬಂಡಿ, ಹನುಮಂತಪ್ಪ ಮಾಮಳಿ, ರವಿ ಕುರಗೋಡ, ಯಂಕಪ್ಪ ಕಟ್ಟಿಮನಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.