ADVERTISEMENT

ಅನ್ಸಾರಿ, ತಂಗಡಗಿಯನ್ನು ವಿಧಾನಸೌಧಕ್ಕೆ ಕಳುಹಿಸಿ: ಸಿದ್ದರಾಮಯ್ಯ

ಮದುವೆ ಮಂಟಪದಲ್ಲಿಯೇ ಅಭ್ಯರ್ಥಿಗಳನ್ನು ಘೋಷಿಸಿದ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2022, 15:35 IST
Last Updated 20 ನವೆಂಬರ್ 2022, 15:35 IST
   

ಕೊಪ್ಪಳ: ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಿಂದ ಇಕ್ಬಾಲ್‌ ಅನ್ಸಾರಿ ಹಾಗೂ ಕನಕಗಿರಿಯಿಂದ ಶಿವರಾಜ ತಂಗಡಗಿ ಅವರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿಕೊಡಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತದಾರರಿಗೆ ಮನವಿ ಮಾಡಿದರು.

ಕೊಪ್ಪಳ ತಾಲ್ಲೂಕಿನ ವನಬಳ್ಳಾರಿಯಲ್ಲಿ ಭಾನುವಾರ ಕಾಂಗ್ರೆಸ್ ಮುಖಂಡ ಹಾಗೂ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹನುಮಂತಪ್ಪ ಅವರ ಸಹೋದರ ಪಂಪಾಪತಿ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾಜಿ ಸಚಿವರಾದ ಇಕ್ಬಾಲ್‌ ಅನ್ಸಾರಿ, ಮಲ್ಲಿಕಾರ್ಜುನ ನಾಗಪ್ಪ ಮತ್ತು ವಿಧಾನಪರಿಷತ್‌ ಮಾಜಿ ಸದಸ್ಯ ಎಚ್‌.ಆರ್‌.ಶ್ರೀನಾಥ್‌ ನಡುವೆ ಗಂಗಾವತಿ ಕ್ಷೇತ್ರದಿಂದ ಪೈಪೋಟಿ ನಡೆದಿತ್ತು. ಮೂವರೂ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದ ಸೋಮವಾರಕ್ಕೂ ಮೊದಲೇ ಸಿದ್ದರಾಮಯ್ಯ ಅವರು ‘ಇಕ್ಬಾಲ್‌ ಅನ್ಸಾರಿ ಗಂಗಾವತಿ ಕ್ಷೇತ್ರದ ಅಭ್ಯರ್ಥಿ’ ಎಂದು ಸ್ಪಷ್ಟಪಡಿಸಿದರು.

ADVERTISEMENT

ಇಕ್ಬಾಲ್‌ ಅನ್ಸಾರಿ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಬಿಜೆಪಿಯ ಪರಣ್ಣ ಮುನವಳ್ಳಿ ವಿರುದ್ಧ ಸೋಲು ಕಂಡಿದ್ದರು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಶ್ರೀನಾಥ್‌ ಇತ್ತೀಚೆಗೆ ಕಾಂಗ್ರೆಸ್‌ ಸೇರಿದ್ದಾರೆ. ಹೀಗಾಗಿ ಗಂಗಾವತಿ ಕ್ಷೇತ್ರದ ಟಿಕೆಟ್‌ ಯಾರಿಗೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿತ್ತು.

ಕನಕಗಿರಿ ಕ್ಷೇತ್ರದಿಂದ ಶಿವರಾಜ ತಂಗಡಗಿ ಹಾಗೂ ಮುಖಂಡ ಮುಕುಂದರಾವ್‌ ಭವಾನಿಮಠ ಅರ್ಜಿ ಸಲ್ಲಿಸಿದ್ದರು. ತಂಗಡಗಿಗೆ ಟಿಕೆಟ್‌ ಎನ್ನುವುದನ್ನೂ ಸಿದ್ದರಾಮಯ್ಯ ಹೇಳಿದರು.

‘ಕುಷ್ಟಗಿಯಿಂದ ಅಮರೇಗೌಡ ಬಯ್ಯಾಪುರ, ಕೊಪ್ಪಳದಿಂದ ರಾಘವೇಂದ್ರ ಹಿಟ್ನಾಳ ಮತ್ತು ಯಲಬುರ್ಗಾ ಕ್ಷೇತ್ರದಿಂದ ಬಸವರಾಜ ರಾಯರಡ್ಡಿ ಸೇರಿದಂತೆ ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಿ ಕಳುಹಿಸಬೇಕು’ ಎಂದರು.

ಸಂಭ್ರಮದಿಂದ ತೆರಳಿದ ಅನ್ಸಾರಿ: ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಅನ್ಸಾರಿ ಕಾರು ಏರಿ ಹೋಗುವಾಗ ನೂರಾರು ಜನ ಅಭಿಮಾನಿಗಳನ್ನು ಅವರನ್ನು ಮುತ್ತಿಕೊಂಡು ಜೈಕಾರ ಹಾಕಿದರು. ಸೆಲ್ಫಿ ತೆಗೆದುಕೊಂಡು ‘ಮುಂದಿನ ಕಾಂಗ್ರೆಸ್‌ ಅಭ್ಯರ್ಥಿಗೆ ಜಯವಾಗಲಿ’ ಎಂದು ಘೋಷಣೆಗಳನ್ನು ಕೂಗಿದರು. ಅನ್ಸಾರಿ ಕೂಡ ನಗುಮೊಗದಿಂದಲೇ ಎಲ್ಲರೊಂದಿಗೆ ಸಂಭ್ರಮಿಸಿತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.