ADVERTISEMENT

ಕುಷ್ಟಗಿ: ‘ಸಿದ್ದರಾಮಯ್ಯ ದಲಿತ ವಿರೋಧಿ ಅಲ್ಲ’: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 5:20 IST
Last Updated 29 ಜನವರಿ 2023, 5:20 IST

ಕುಷ್ಟಗಿ: ‘ಕೋಲಾರದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಯಾರೋ ಕೆಲವರು ಪೋಸ್ಟರ್‌ ಅಂಟಿಸಿದ ಕ್ಷಣ ಅದು ಇಡೀ ಜನರ ಅಭಿಪ್ರಾಯ ಆಗುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಇಂಥ ಪ್ರಸಂಗಗಳು ಸಹಜ’ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರನ್ನು ದಲಿತ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಆದರೆ, ಅವರು ದಲಿತ ವಿರೋಧಿಯಲ್ಲ’ ಎಂದರು.

‘ವಿರೋಧಿಗಳು ಎಲ್ಲ ಕಡೆಯೂ ಇರುತ್ತಾರೆ. ಕಲ್ಲು ಒಗೆಯುವವರು, ಒಗೆಯಿಸಿಕೊಳ್ಳುವವರು ಎಲ್ಲ ಪಕ್ಷಗಳಲ್ಲೂ ಇದ್ದಾರೆ. ಪ್ರಚಾರದ ವೇಳೆ ಕಲ್ಲು ಒಗೆಸಿಕೊಂಡ ಅನೇಕರು ಚುನಾವಣೆಯಲ್ಲಿ ಗೆದ್ದು ಬೀಗಿದ ಉದಾಹರಣೆಗಳಿವೆ. ಚುನಾವಣೆ ಸಮೀಪಿಸಿದಂತೆ ಸುಳ್ಳು ಹೇಳುವುದು, ಆರೋಪಿಸುವುದು, ಅಪಪ್ರಚಾರ ಹೆಚ್ಚುತ್ತದೆ’ ಎಂದರು.

ADVERTISEMENT

‘ಈ ಬಾರಿಯ ಚುನಾವಣೆ ಕೊನೆಯದ್ದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅವರಿಗೆ ಎಲ್ಲ ಕಡೆಯೂ ಗೆಲ್ಲುವ ಅವಕಾಶವಿದೆ. ಸದ್ಯ ಕೋಲಾರದಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ವರುಣಾ ಕ್ಷೇತ್ರದಿಂದ ಸ್ಪರ್ಧಿಸುವಂತೆಯೂ ಜನರ ಒತ್ತಾಯವಿದೆ. ಈ ವಿಷಯದಲ್ಲಿ ಹೈಕಮಾಂಡ್‌ ಅಂತಿಮ ನಿರ್ಣಯ ತೆಗೆದುಕೊಳ್ಳಲಿದೆ’ ಎಂದರು.

‘ಎಲ್ಲ ಪಕ್ಷಗಳಲ್ಲೂ ಟಿಕೆಟ್‌ ಹಂಚಿಕೆಯಲ್ಲಿ ಗೊಂದಲ ಇರುವುದು ಸಹಜ. ಅದೇ ರೀತಿ ಕೇವಲ ಜೆಡಿಎಸ್‌ ಅಷ್ಟೇ ಅಲ್ಲ ಬಿಜೆಪಿ, ಕಾಂಗ್ರೆಸ್‌ ಪಕ್ಷದಲ್ಲೂ ಕುಟುಂಬ ರಾಜಕಾರಣವಿದೆ. ಹಾಸನದ ಅಭ್ಯರ್ಥಿ ವಿಚಾರದಲ್ಲಿ ಭವಾನಿ ರೇವಣ್ಣ ಅವರ ಹೇಳಿಕೆ, ಬಿಜೆಪಿಯಲ್ಲಿ ಯಡಿಯೂರಪ್ಪ, ಯತ್ನಾಳ ಅವರ ನಡುವಿನ ತಿಕ್ಕಾಟ ಹೀಗೆ ಒಳಜಗಳ ಎಲ್ಲ ಪಕ್ಷಗಳಲ್ಲೂ ಸಾಮಾನ್ಯ. ಏನೇ ಆದರೂ ಈ ಬಾರಿ ಕಾಂಗ್ರೆಸ್‌ ಪಕ್ಷಕ್ಕೆ 113ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಅವಕಾಶವಿದೆ’ ಎಂದು ಸ್ಪಷ್ಟಪಡಿಸಿದರು.

ಶಾಸಕ ಅಮರೇಗೌಡ ಬಯ್ಯಾಪುರ ಸೇರಿದಂತೆ ಕಾಂಗ್ರೆಸ್‌ ಪಕ್ಷದ ಇತರೆ ಮುಖಂಡರು ಇದ್ದರು.

‘ರೆಡ್ಡಿ ಪಕ್ಷದಿಂದ ಬಿಜೆಪಿ, ಕಾಂಗ್ರೆಸ್‌ಗೂ ನಷ್ಟ’

‘ಗಾಲಿ ಜನಾರ್ದನ ರೆಡ್ಡಿ ಹೊಸ ಪಕ್ಷದ ಅಭ್ಯರ್ಥಿಗಳು ಚುನಾವಣಾ ಕಣಕ್ಕೆ ಇಳಿದರೆ ಬಿಜೆಪಿಗೆ ಅಷ್ಟೇ ಅಲ್ಲ ಮತ ವಿಭಜನೆಯಿಂದ ಕಾಂಗ್ರೆಸ್‌ ಪಕ್ಷಕ್ಕೂ ಸ್ವಲ್ಪ ಪ್ರಮಾಣದಲ್ಲಿ ನಷ್ಟವಾಗುವ ಸಾಧ್ಯತೆ ಇದೆ’ ಎಂದು ಕಾಂಗ್ರೆಸ್‌ ಶಾಸಕ ಸತೀಶ ಜಾರಕಿಹೊಳಿ ಶನಿವಾರ ಇಲ್ಲಿ ಹೇಳಿದರು.

‘ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಜಿಲ್ಲಾ ಮಟ್ಟದಲ್ಲಿ ಪೂರ್ಣಗೊಂಡಿದ್ದು, ರಾಜ್ಯ ಮಟ್ಟಕ್ಕೆ ವರದಿ ಸಲ್ಲಿಸಲಾಗಿದೆ. ಫೆ.2ರಂದು ಪಕ್ಷದ ಚುನಾವಣಾ ಸಮಿತಿ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ ನಂತರ ದೆಹಲಿಗೆ ಶಿಫಾರಸು ಪಟ್ಟಿ ಕಳಿಸಲಾಗುತ್ತದೆ. ಫೆ.20ರ ಒಳಗೆ ಒಂದು ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಬಹುದು. ಎರಡನೇ ಹಂತದಲ್ಲಿ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.