ADVERTISEMENT

ಕೊಪ್ಪಳ | ವೇಗ ಪಡೆದ ನಾಲೆಯ ದುರಸ್ತಿ ಕಾರ್ಯ

ನಾಲೆಗೆ ನೀರು ಹರಿಸುವ ಮುನ್ನವೇ ಕಾಮಗಾರಿ ಪೂರ್ಣ: ಅಧಿಕಾರಿಗಳ ಭರವಸೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2020, 11:04 IST
Last Updated 19 ಜುಲೈ 2020, 11:04 IST
ಕಾರಟಗಿ ಸಮೀಪದ ಸೋಮನಾಳ ಬಳಿ ತುಂಗಭದ್ರ ಎಡದಂಡೆ ಮುಖ್ಯ ನಾಲೆಯ ಆಧುನೀಕರಣ ಕಾಮಗಾರಿ ಭರದಿಂದ ಸಾಗಿರುವುದು
ಕಾರಟಗಿ ಸಮೀಪದ ಸೋಮನಾಳ ಬಳಿ ತುಂಗಭದ್ರ ಎಡದಂಡೆ ಮುಖ್ಯ ನಾಲೆಯ ಆಧುನೀಕರಣ ಕಾಮಗಾರಿ ಭರದಿಂದ ಸಾಗಿರುವುದು   

ಕಾರಟಗಿ: ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ಜನರ ಜೀವನಾಡಿಯಾಗಿರುವ ತುಂಗಭದ್ರಾ ಎಡದಂಡೆ ಮುಖ್ಯನಾಲೆಯು ಆಧುನೀಕರಣ ಕಾಮಗಾರಿ ಭರದಿಂದ ಸಾಗಿದೆ.

ನಾಲೆಯ ಮೈಲ್ 38ರಿಂದ ಮೈಲ್‌ 40ರ ಭಾಗಗಳಲ್ಲಿ ಭೋಂಗಾ, ಬಿರುಕು ಬಿಟ್ಟು ನೀರು ವ್ಯರ್ಥವಾಗುತ್ತಿತ್ತು. ನಾಲೆಗೆ ನೀರು ಹರಿಸುವುದರೊಳಗೆ ನಾಲೆಯ ಆಧುನೀಕರಣ ಕಾಮಗಾರಿ ಮುಗಿಸಲು ಅಧಿಕಾರಿಗಳು ನಿರ್ಧರಿಸಿದ್ದು, ಹೀಗಾಗಿ ಕಾಮಗಾರಿ ವೇಗ ಪಡೆದುಕೊಂಡಿದೆ.

ಮೈಲ್ 38, 39 ಮತ್ತು 40ರ ಅತ್ಯಂತ ಸೂಕ್ಷ್ಮ ತೂಗುಸೇತುವೆ ಭಾಗದಲ್ಲಿ ನಾಲೆಯನ್ನು ಭದ್ರ ಪಡಿಸುವ ಕಾಮಗಾರಿಗೆ ಆದ್ಯತೆ ನೀಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ನಾಲೆಗೆ ನೀರು ಬಿಡುವ ದಿನ ಪ್ರಕಟಿಸುವುದರೊಳಗೆ ಕಾಮಗಾರಿಯನ್ನು ಮುಗಿಸಲಾಗುವುದು. ಈ ವರ್ಷ ರೈತರು ನಿರಾತಂಕವಾಗಿ ಭತ್ತದ ಬೆಳೆಯನ್ನು ಬೆಳೆಯಬಹುದು ಎಂಬ ಭರವಸೆಯನ್ನು ಜಲ ಸಂಪನ್ಮೂಲ ಇಲಾಖೆಯ ಅಧಿಕಾರಿಗಳು ನೀಡಿದ್ದಾರೆ.

ADVERTISEMENT

‘ನಿಗದಿತ ಅವಧಿಯಲ್ಲಿಯೇ ಅಗತ್ಯವಿರುವೆಡೆ ನಾಲೆಯ ಕಾಮಗಾರಿ ಪೂರ್ಣಗೊಳಿಸಿ, ಅಚ್ಚುಕಟ್ಟು ಪ್ರದೇಶದ ರೈತರಿಗೆ ಸುಲಭವಾಗಿ ನೀರು ಒದಗಿಸಲಾಗುವುದು‘ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

‘ಕಾಲುವೆ ಎಡ, ಬಲ ಭಾಗದ ರಕ್ಷಣಾ ಗೋಡೆಯಲ್ಲಿನ ಮುರಂ ತಗೆದು ಹೊಸ ಮುರಂ ತುಂಬಿ, ಕಾಂಕ್ರೀಟ್‌ನಿಂದ ಬಲ ಪಡಿಸುವುದರ ಜೊತೆಗೆ ತಳ ಭಾಗವನ್ನು ಗಟ್ಟಿಗೊಳಿಸಲಾಗುತ್ತಿದೆ. ದುರಸ್ತಿಗೆ 3 ತಂಡಗಳಲ್ಲಿ ಆಧುನಿಕ ಯಂತ್ರಗಳು, ಕಾರ್ಮಿಕರು ಲೈನಿಂಗ್ ಕಾಮಗಾರಿ ಮಾಡುತ್ತಿದ್ದಾರೆ. ಇದಕ್ಕಾಗಿಯೇ ನಾಲೆ ಬಳಿಯೇ ಅಧಿಕಾರಿಗಳ ತಂಡ ಬಿಡಾರ ಹೂಡಿದೆ‘ ಎಂದು ಎಂಜಿನಿಯರ್ ಸೂಗಪ್ಪ ಅಳವಂಡಿ ತಿಳಿಸಿದರು.

‘ಕಾರಟಗಿ ವಲಯದಲ್ಲಿ ಸುಮಾರು ₹ 20 ಕೋಟಿ ವೆಚ್ಚದಲ್ಲಿ ಆಧುನೀಕರಣ ಕಾಮಗಾರಿ ಮಾಡಲಾಗುತ್ತಿದೆ. ಈಗಾಗಲೇ ಗುರುತಿಸಲಾಗಿರುವ 3 ಕಿ.ಮಿ. ವ್ಯಾಪ್ತಿಯ ಕಾಮಗಾರಿ ಮುಕ್ತಾಯ ಹಂತದಲ್ಲಿದೆ‘ ಎಂದು ಸೂಗಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.