ಕೊಪ್ಪಳ: ‘ತಾಲ್ಲೂಕಿನ ಅಳವಂಡಿ ಹೋಬಳಿಯಲ್ಲಿ ಆಕ್ರಮ ಮರಳು ಸಾಗಾಟ ಎಗ್ಗಿಲ್ಲದೆ ನಡೆಯುತ್ತಿದ್ದು, ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿ ತಾತ್ಕಾಲಿಕವಾಗದೇ, ಅಕ್ರಮಕ್ಕೆ ಶಾಶ್ವತ ಅಂತ್ಯ ಆಡಬೇಕಿದೆ’ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಕ್ಯಾವಟರ್ ಒತ್ತಾಯಿಸಿದರು.
ಹಿರೇಸಿಂದೋಗಿ ಹಳ್ಳದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಮರಳು ಅಕ್ರಮ ಸಾಗಾಟದ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೇರಿ ಇತರೆ ಇಲಾಖೆಗಳ ಅಧಿಕಾರಿಗಳ ತಂಡ ದಾಳಿ ನಡೆಸಿ, ಮರಳಿನ ಬೋಟ್‌ಗಳನ್ನು ಧ್ವಂಸಗೊಳಿಸಿ, ಅಪಾರ ಪ್ರಮಾಣದ ಮರಳು ವಶಕ್ಕೆ ಪಡೆದಿದ್ದಾರೆ. ಈವರೆಗೆ ಯಾರ ವಿರುದ್ಧವು ಪ್ರಕರಣ ದಾಖಲಾಗಿಲ್ಲ. ಈ ಭಾಗದಲ್ಲಿ ಮರಳು ಅಕ್ರಮ ದಂಧೆ ನಡೆಸುವವರು ಮೇಲ್ನೋಟಕ್ಕೆ ಯಾರೆಂದು ಗೊತ್ತಿದ್ದರೂ, ಪೊಲೀಸರು ಕ್ರಮಕ್ಕೆ ಹಿಂದೇಟು ಹಾಕುತ್ತಿರುವುದು ಖಂಡನೀಯ. ಈ ಅಕ್ರಮದಲ್ಲಿ ಆಡಳಿತ ಪಕ್ಷದ ಜನಪ್ರತಿನಿಧಿಗಳೂ ಪಾಲುದಾರರಿದ್ದು, ಹಾಡಹಗಲೇ ನಿಸರ್ಗದ ಸಂಪತ್ತ ಕೊಳ್ಳೆ ಹೊಡೆಯುತ್ತಿದ್ದಾರೆ’ ಎಂದು ಆರೋಪಿಸಿದರು.
‘ಕೊಪ್ಪಳ ತಾಲ್ಲೂಕಿನ ಕುಣಿಕೇರಿ ಗ್ರಾಮದ ಕೆರೆಯಲ್ಲಿ ಸಹ ಅಪಾರ ಪ್ರಮಾಣದ ಮಣ್ಣು ಅನಧಿಕೃತವಾಗಿ ಸಾಗಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಆಡಳಿತ ಪಕ್ಷದ ಜನಪ್ರತಿನಿಧಿಗಳು ಕ್ಷೇತ್ರದ ಅಭಿವೃದ್ಧಿ ಮರೆತು, ಅಕ್ರಮ ನಡೆಸುವ ದಂಧೆಕೋರರ ಪರ ನಿಂತಿರುವುದು ದುರಂತವಾಗಿದೆ. ಪ್ರಜ್ಞಾವಂತರು ನಿಸರ್ಗದ ಸಂಪತ್ತು ಉಳಿಸಲು ಪಣ ತೊಡಬೇಕಿದೆ’ ಎಂದು ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.