ADVERTISEMENT

ದೀರ್ಘ ಬಾಕಿ ಪ್ರಕರಣಗಳ ಮೇಲೆ ಕಣ್ಗಾವಲು: ಡಾ. ರಾಮ್‌ ಎಲ್‌. ಅರಸಿದ್ಧಿ

ಒಂದೇ ವಾರದಲ್ಲಿ ನಾಲ್ಕು ಪ್ರಕರಣಗಳ ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 16:02 IST
Last Updated 30 ಜೂನ್ 2025, 16:02 IST
ಡಾ. ರಾಮ್‌ ಎಲ್‌. ಅರಸಿದ್ಧಿ
ಡಾ. ರಾಮ್‌ ಎಲ್‌. ಅರಸಿದ್ಧಿ   

ಕೊಪ್ಪಳ: ಅಪರಾಧದ ಆರೋಪ ಹೊತ್ತು ವರ್ಷಾನುಗಟ್ಟಲೇ ಊರು ತೊರೆದು ನಾಪತ್ತೆಯಾದ ಆರೋಪಿಗಳ ಪತ್ತೆ ಕಾರ್ಯವನ್ನು ಜಿಲ್ಲಾ ಪೊಲೀಸ್‌ ಇಲಾಖೆ ಚುರುಕುಗೊಳಿಸಿದೆ. ಒಂದೇ ವಾರದಲ್ಲಿ ಇಂಥ ನಾಲ್ಕು ಪ್ರಕರಣಗಳ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ.

ಮೂರನೇ ಪತ್ನಿಯನ್ನು ಕೊಲೆ ಮಾಡಿ 23 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಹಾಲದಾಳ ಗ್ರಾಮದ ಹನುಮಂತ ಹುಸೇನಪ್ಪ ಎಂಬ ನಿವೃತ್ತ ಸರ್ಕಾರಿ ನೌಕರನನ್ನು ಪೊಲೀಸರು ಇತ್ತೀಚೆಗೆ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಅಪರಾಧಿಗೆ ಗಂಗಾವತಿ ನ್ಯಾಯಾಲಯ ಈಗಾಗಲೇ ಜೀವಾವಧಿ ಶಿಕ್ಷೆ ವಿಧಿಸಿದೆ. ನ್ಯಾಯಾಲಯ ಶಿಕ್ಷೆಯ ಪ್ರಮಾಣ ನಿರ್ಧರಿಸಬೇಕು ಎನ್ನುವಷ್ಟರಲ್ಲಿ ಪರಾರಿಯಾಗಿ 23 ವರ್ಷಗಳ ಬಳಿಕ ಬಂದಿದ್ದ. 

ಮತ್ತೊಂದು ಪ್ರಕರಣದಲ್ಲಿ ಕಾರಟಗಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 2012ರಲ್ಲಿ ನಡೆದ ಘಟನೆಯಲ್ಲಿ ಆರೋಪಿ ಗಂಗಾವತಿಯ ಶೇಖ್‌ ಅಮ್ಜದ್‌ 13 ವರ್ಷಗಳಿಂದ ತಲೆಮರೆಯಿಸಿಕೊಂಡಿದ್ದ. ಈ ಆರೋಪಿಯನ್ನು ಅಲ್ಲಿನ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದು, ನ್ಯಾಯಾಲಯ ₹2500 ದಂಡ ವಿಧಿಸಿ ಆರು ತಿಂಗಳು ಸಾಧಾರಣ ಕಾರಾಗೃಹ ವಾಸ ವಿಧಿಸಿ ಆದೇಶ ಮಾಡಿದೆ.

ADVERTISEMENT

ಕೊಪ್ಪಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2017 ಮತ್ತು 2021ರಲ್ಲಿ ನಡೆದಿದ್ದ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೊದಲ ಆರೋಪಿಯಾಗಿದ್ದ ಗಂಗಾವತಿಯ ನವೀನ ಕೊರಗಲ್ಲಮಠ ಹಾಗೂ ಆರನೇ ಆರೋಪಿ ಗಂಗಾವತಿಯ ಶರಣಪ್ಪ ವಂಕಲಕುಂಟ ನಾಪತ್ತೆಯಾಗಿದ್ದರು. ಎಂಟು ವರ್ಷಗಳ ಬಳಿಕ ಇವರನ್ನು ಪೊಲೀಸರು ಪತ್ತೆ ಮಾಡಿದ್ದು ₹15,600 ದಂಡ ಪ್ರಕರಣ ಮುಕ್ತಾಯ ಮಾಡಲಾಗಿದೆ.

ತಾಲ್ಲೂಕಿನ ಮುನಿರಾಬಾದ್ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 2011ರಲ್ಲಿ ನಡೆದಿದ್ದ ಪ್ರಕರಣದ ಆರೋಪಿಯಾಗಿದ್ದ ತುಮಕೂರಿನ ಹೆಗ್ಗೇರಿಯ ಮೋಹನಕುಮಾರ ಎಂಬಾತನನ್ನು ಪೊಲೀಸರು 14 ವರ್ಷಗಳ ಬಳಿಕ ಪತ್ತೆ ಹಚ್ಚಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಜಿಲ್ಲೆಯಲ್ಲಿ ಸಾಕಷ್ಟು ವರ್ಷಗಳಿಂದ ಬಾಕಿ ಉಳಿದಿದ್ದ ಪ್ರಕರಣಗಳಲ್ಲಿ ವಾರೆಂಟ್‌ ಜಾರಿ ಮಾಡಿ ಪೊಲೀಸರು ಅವುಗಳನ್ನು ವಿಲೇವಾರಿ ಮಾಡಿದ್ದಾರೆ. ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಬಹುಮಾನ ನೀಡಲಾಗುವುದು.
ಡಾ. ರಾಮ್‌ ಎಲ್‌. ಅರಸಿದ್ಧಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೊಪ್ಪಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.