ADVERTISEMENT

ಅಭಿಮಾನಿಗಳ ಕಣ್ಣರಳಿಸಿದ ಅಪ್ಪು...

ಗಿಣಗೇರಾದಲ್ಲಿ ಗಮನ ಸೆಳೆಯುತ್ತಿರುವ ಪುನೀತ್‌ ಜೀವನ ಕಥನ

ಪ್ರಮೋದ
Published 3 ಸೆಪ್ಟೆಂಬರ್ 2022, 4:55 IST
Last Updated 3 ಸೆಪ್ಟೆಂಬರ್ 2022, 4:55 IST
ಕೊಪ್ಪಳ ತಾಲ್ಲೂಕಿನ ಗಿಣಗೇರಿಯಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ ಟೆಂಟ್‌ನಲ್ಲಿ ಅಪ್ಪು ಭಾವಚಿತ್ರ ಹಾಕಿರುವುದು
ಕೊಪ್ಪಳ ತಾಲ್ಲೂಕಿನ ಗಿಣಗೇರಿಯಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ ಟೆಂಟ್‌ನಲ್ಲಿ ಅಪ್ಪು ಭಾವಚಿತ್ರ ಹಾಕಿರುವುದು   

ಕೊಪ್ಪಳ: ತಾಲ್ಲೂಕಿನ ಗಿಣಗೇರಾದ ಮಹಾತ್ಮ ಗಾಂಧಿ ಸರ್ಕಲ್‌ ಹತ್ತಿರ ನವಚೇತನ ತರುಣ ಸಂಘ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಯ ಟೆಂಟ್‌ನಲ್ಲಿ ಎಲ್ಲಿ ನೋಡಿದರೂ ಅಪ್ಪು ಹವಾ ಕಂಡು ಬರುತ್ತಿದೆ.

ನಟ ದಿವಂಗತ ಪುನೀತ್‌ ರಾಜಕುಮಾರ್‌ ಅವರ ಬದುಕಿನ ವಿವಿಧ ಹಂತಗಳನ್ನು ತೋರಿಸುವ ಸಲುವಾಗಿ ಸಂಘಟಕರು ನಿತ್ಯ ಆಯೋಜಿಸುತ್ತಿರುವ ಪ್ರದರ್ಶನ ಎಲ್ಲರ ಗಮನ ಸೆಳೆಯುತ್ತಿದೆ. ಪುನೀತ್‌ ಹುಟ್ಟಿನಿಂದ ಹಿಡಿದು ಮೃತಪಟ್ಟ ತನಕ ಹಾಗೂ ಮೃತಪಟ್ಟ ಬಳಿಕ ಮೆರೆದ ದೊಡ್ಡತನದ ಬಗ್ಗೆ ಪ್ರದರ್ಶನದಲ್ಲಿ ತೋರಿಸಲಾಗಿದೆ. ಟೆಂಟ್‌ ಪ್ರವೇಶಿಸುವ ದ್ವಾರ ಬಾಗಿಲಲ್ಲೂ ಪುನೀತ್‌ ಭಾವಚಿತ್ರಗಳು ರಾರಾಜಿಸುತ್ತಿವೆ.

ಅನೇಕ ಭಕ್ತರು ಇದನ್ನು ನೋಡಿ ಭಾವುಕರಾದರೆ, ಇನ್ನೂ ಕೆಲವರು ಕಣ್ಣೀರು ಸುರಿಸಿದರು. ಪುನೀತ್‌ ಅವರು ಬದುಕಿದ್ದಾಗ ಮಾಡಿದ ಜನಪರ ಕೆಲಸಗಳನ್ನು ಪ್ರದರ್ಶನದಲ್ಲಿ ತೋರಿಸಲಾಗುತ್ತಿದೆ.

ADVERTISEMENT

ನವಚೇತನ ತರುಣ ಸಂಘ 18 ವರ್ಷಗಳಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿಕೊಂಡು ಬಂದಿದೆ. ಥರ್ಮಾಕೋಲ್‌ನಿಂದ ಪುನೀತ್‌ ಅವರ ಮೂರ್ತಿ ಮಾಡಲಾಗಿದ್ದು, ಇದರ ಮೇಲೆ ನೈಜ ಪಾರಿವಾಳ ಕೂಡಿಸಲಾಗಿದೆ. ಇದು ಎಲ್ಲರ ಗಮನ ಸೆಳೆಯುತ್ತಿದೆ.

ತರುಣ ಸಂಘದಅಧ್ಯಕ್ಷ ಶಂಕರಗೌಡ ಪಾಟೀಲ, ಅನಿಲಕುಮಾರ, ಶ್ರೀಕಾಂತ ಹಿರೇಮಠ, ಚಂದ್ರಶೇಖರ ಬಳ್ಳಾರಿ, ಕೊಟ್ರಯ್ಯ ಮೈನಹಳ್ಳಿ, ಮಹಾದೇವ ಗೌಳಿ ಹೀಗೆ ಅನೇಕರು ಸೇರಿಕೊಂಡು ಈ ಪ್ರದರ್ಶನ ಏರ್ಪಡಿಸಿದ್ದಾರೆ. ಒಟ್ಟು ಏಳು ದಿನ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಇರಲಿದೆ. ಸೆ. 5ರ ತನಕ ನಿತ್ಯ ರಾತ್ರಿ 7 ಗಂಟೆಯಿಂದ 9.30ರ ತನಕ ಪ್ರದರ್ಶನ ಇರುತ್ತದೆ. ಒಂದು ಪ್ರದರ್ಶನ 10 ನಿಮಿಷದ್ದಾಗಿದೆ.

’ಪುನಿತ್‌ ಅವರು ನಮ್ಮೆಲ್ಲರ ನಡುವೆ ಅತ್ಯಂತ ಆದರ್ಶಪ್ರಾಯರಾಗಿ ಬದುಕಿದ್ದ ಕಲಾವಿದ. ಅವರು ನಮ್ಮಿಂದ ದೂರವಾದಾಗ ಎಲ್ಲರೂ ದುಃಖಪಟ್ಟಿದ್ದೆವು. ಹಬ್ಬದ ನೆಪದಲ್ಲಿ ಅವರ ಬದುಕಿದ ರೀತಿಯನ್ನು ಮತ್ತೆ ನೆನಪಿಸಿಕೊಳ್ಳಲುಪುನೀತ್‌ ಜೀವನ ಕಥನ ಆಧರಿಸಿ ಪ್ರದರ್ಶನ ಆಯೋಜಿಸಿದ್ದೇವೆ’ ಎಂದರು.

ಸೆ. 5ರ ವರಗೆ ಪುನೀತ್‌ ಜೀವನ ಆಧರಿತ ಪ್ರದರ್ಶನ

ನಿತ್ಯ ರಾತ್ರಿ 7ರಿಂದ 9.30ರ ತನಕ ನಡೆಯಲಿರುವ ಶೋ

ನವಚೇತನ ತರುಣ ಸಂಘದಿಂದ ಆಯೋಜನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.